ಉತ್ಪನ್ನಗಳಿಗೆ ನಿಗಧಿಗೊಳಿಸಿರುವ ಬೆಲೆಯನ್ನು ಹೆಚ್ಚಿಸಬೇಕು

ಬೆಂಗಳೂರು,ಜನವರಿ,25 : ಬೆಂಬಲ ಬೆಲೆಯಲ್ಲಿ ರಾಗಿಯನ್ನು ಖರೀದಿಸಲು ವಿಧಿಸಿರುವ ನಿರ್ಬಂಧಗಳನ್ನು ತೆಗೆದು ಹಾಕಬೇಕು ಎಂದು ವಿಧಾನಸಭೆ ವಿಪಕ್ಷ ನಾಯಕ‌ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.‌ ರಾಗಿ, ಭತ್ತ ಮುಂತಾದ ಉತ್ಪನ್ನಗಳಿಗೆ ನಿಗಧಿಗೊಳಿಸಿರುವ ಬೆಲೆಯನ್ನು ಹೆಚ್ಚಿಸಬೇಕೆಂದು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ. ಇಡೀ ವರ್ಷ ಪದೇ ಪದೇ ಸುರಿದ ಮಳೆಯ ನಡುವೆಯೂ ರಾಗಿ, ಭತ್ತ ಮುಂತಾದ ಬೆಳೆಗಳನ್ನು ಕೊಯಿಲು ಮಾಡಿ ಮಾರುಕಟ್ಟೆಗೆ ತರುತ್ತಿದ್ದಾರೆ. ಸರ್ಕಾರವು ಈ ವರ್ಷ ಜನವರಿ ೧ ರಿಂದ ರಾಗಿಯನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ದಕ್ಷಿಣ ಕರ್ನಾಟಕದ ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ಮೈಸೂರು, ತುಮಕೂರು, ಹಾಸನ, ಚಿತ್ರದುರ್ಗ, ಚಿಕ್ಕಮಗಳೂರು, ಚಾಮರಾಜನಗರ, ಬೆಂಗಳೂರು ನಗರ ಜಿಲ್ಲೆಗಳ ಪ್ರಮುಖ ಬೆಳೆಯಾದ ರಾಗಿಯನ್ನು ಬೆಳೆಯುತ್ತಾರೆ.

ಕೃಷಿ ಇಲಾಖೆಯ ಅಂದಾಜಿನ ಪ್ರಕಾರ ನಮ್ಮ ರೈತರು ಈ ವರ್ಷ ಸುಮಾರು ೧೭.೫ ಲಕ್ಷ ಎಕರೆ ಪ್ರದೇಶದಲ್ಲಿ ಬೆಳೆದಿದ್ದಾರೆ. ಕೃಷಿ ಇಲಾಖೆಯ ದಾಖಲೆಗಳ ಪ್ರಕಾರ ಈ ಬಾರಿ ಕನಿಷ್ಟ ಅಂದರೂ ೧೪-೧೫ ಲಕ್ಷ ಟನ್ ಇಳುವರಿಯ ನಿರೀಕ್ಷೆ ಮಾಡಲಾಗಿದೆ. ಆದರೆ, ಅತಿವೃಷ್ಟಿಯ ಕಾರಣದಿಂದ ದೊಡ್ಡ ಮಟ್ಟದ ಬೆಳೆ ನಷ್ಟವಾಗಿತ್ತು. ಆದರೂ ರೈತರು ಬೆಂಬಲ ಬೆಲೆಯಡಿ ರಾಗಿಯನ್ನು ಮಾರಾಟ ಮಾಡಲು ಉತ್ಸಾಹ ತೋರಿಸುತ್ತಿದ್ದಾರೆ. ಮಾತೆತ್ತಿದರೆ ರೈತರ ಆದಾಯ ದ್ವಿಗುಣ ಗೊಳಿಸಲಾಗುವುದು ಎಂದು ಮಾತನಾಡುವ ಪ್ರಧಾನಿ ಮೋದಿಯವರ ಸರ್ಕಾರ ಈ ಬಾರಿ ರಾಜ್ಯದ ರೈತರಿಂದ ಕೇವಲ ೨.೧೦ ಲಕ್ಷ ಟನ್ ರಾಗಿಯನ್ನು ಮಾತ್ರ ಖರೀದಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ. ಈ ಸೂಚನೆಯನ್ನು ಆಧರಿಸಿ ರಾಜ್ಯದ ಬಿಜೆಪಿ ಸರ್ಕಾರವು ರೈತರಿಂದ ರಾಗಿ ಖರೀದಿಸಲು ವಿಪರೀತ ನಿಬಂಧನೆಗಳನ್ನು ವಿಧಿಸಿದೆ. ಅದರಲ್ಲಿ ಒಬ್ಬ ರೈತರಿಂದ ಕೇವಲ ೨೦ ಕ್ವಿಂಟಾಲ್ ರಾಗಿಯನ್ನು ಮಾತ್ರ ಖರೀದಿ ಮಾಡಲಾಗುವುದೆಂದು ತಿಳಿಸಿ ಆದೇಶ ಹೊರಡಿಸಿದೆ.

ಯೂಕಲಿಪ್ಟಸ್ ಬೆಳೆಯನ್ನು ಬೆಳೆಯುತ್ತಿದ್ದ ರೈತರು ಕಳೆದ ಎರಡು ವರ್ಷಗಳಿಂದ ಈಚೆಗೆ ತಮ್ಮ ಹೊಲಗಳಲ್ಲಿ ಬೆಳೆದಿದ್ದ ಯೂಕಲಿಪ್ಟಸ್ ಬೆಳೆಯನ್ನು ತೆಗೆದು ಹಾಕಿ ರಾಗಿ ಬೆಳೆಯಲಾರಂಭಿಸಿದ್ದಾರೆ. ಹಾಗಾಗಿ ಸಹಜವಾಗಿಯೆ ರಾಗಿಯ ಉತ್ಪಾದನೆ ಹೆಚ್ಚಾಗಿದೆ. ರಾಗಿಗೆ ನೀಡುತ್ತಿರುವ ಬೆಂಬಲ ಬೆಲೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಒಂದು ಕ್ವಿಂಟಾಲಿಗೆ ಕೇವಲ ೮೨ ರೂಪಾಯಿಗಳಷ್ಟು ಮಾತ್ರ ಏರಿಕೆ ಮಾಡಲಾಗಿದೆ. ಕಳೆದ ವರ್ಷ ಒಂದು ಕ್ವಿಂಟಾಲಿಗೆ ೩೨೯೫ ರೂ ನೀಡುತ್ತಿದ್ದರೆ ಈ ವರ್ಷ ೩೩೭೭ ಗಳಿಗೆ ಏರಿಕೆ ಮಾಡಲಾಗಿದೆ. ಆದರೆ ರೈತರು ೨೦೧೯-೨೦ ರಲ್ಲಿ ಟ್ರಾಕ್ಟರ್‌ನಲ್ಲಿ ಒಂದು ಗಂಟೆ ಹೊಲ ಉಳಲು ೭೫೦ ರೂಪಾಯಿ ನೀಡುತ್ತಿದ್ದರೆ ಈ ವರ್ಷ ೧೨೫೦-೧೩೦೦ ರೂ ನೀಡಬೇಕಾಗಿದೆ. ಬೆಳೆಯನ್ನು ಕಟಾವು ಮಾಡುವ ಯಂತ್ರಕ್ಕೆ ಕೂಡ ಗಂಟೆಗೆ ಸುಮಾರು ೭೫೦ ರೂಪಾಯಿಗಳಷ್ಟು ಹೆಚ್ಚಾಗಿದೆ. ಪೆಟ್ರೋಲ್, ಡೀಸೆಲ್ ಸೇರಿದಂತೆ ಎಲ್ಲ ಅವಶ್ಯ ವಸ್ತುಗಳ ಬೆಲೆ ಏರಿಕೆಯಾಗಿವೆ. ರೈತರು ಬಳಸುವ ಪ್ಲಾಸ್ಟಿಕ್ ಮುಂತಾದ ಉತ್ಪನ್ನಗಳ ಮೇಲಿನ ಜಿಎಸ್‌ಟಿಯನ್ನು ಸಹ ಹೆಚ್ಚಿಸಲಾಗಿದೆ. ಇದೆಲ್ಲದರಿಂದಾಗಿ ರೈತರು ಬೆಳೆಗಳನ್ನು ಬೆಳೆಯಲು ಉತ್ಪಾದನಾ ವೆಚ್ಚ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಡಾ.ಸ್ವಾಮಿನಾಥನ್ ಅವರ ವರದಿಯಲ್ಲಿನ ಸೂತ್ರಗಳನ್ನು ಪೂರ್ತಿಯಾಗಿ ಅಳವಡಿಸಿದರೆ ಒಂದು ಕ್ವಿಂಟಾಲ್ ರಾಗಿಗೆ ಈಗ ನಿಗಧಿಪಡಿಸಿರುವ ಬೆಂಬಲ ಬೆಲೆಯ ಎರಡರಷ್ಟನ್ನು ರೈತರಿಗೆ ನೀಡಬೇಕಾಗುತ್ತದೆ.

ದೊಡ್ಡಬಳ್ಳಾಪುರ ಮುಂತಾದ ಕಡೆ ರೈತರು, ರೈತ ಸಂಘದವರು ರಾಗಿ ಖರೀದಿಗೆ ವಿಧಿಸಿರುವ ನಿಬಂಧನೆಗಳನ್ನು ತೆಗೆದು ಹಾಕುವಂತೆ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಕಳೆದ ವರ್ಷ ಸುಮಾರು ೪.೭ ಲಕ್ಷ ಟನ್ ಗಳಷ್ಟು ರಾಗಿಯನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿದರೆ ಈ ಬಾರಿ ರಾಜ್ಯದಿಂದ ಕೇವಲ ೨.೧೦ ಲಕ್ಷ ಟನ್ ರಾಗಿಯನ್ನು ಖರೀದಿಸಲು ಮಾತ್ರ ರಾಜ್ಯಕ್ಕೆ ಅನುಮತಿ ನೀಡಲಾಗಿದೆ. ರೈತರು ೧೪-೧೫ ಲಕ್ಷ ಟನ್ ರಾಗಿ ಬೆಳೆದರೆ ಅವರು ತಮ್ಮ ಸ್ವಂತ ಬಳಕೆಗೆ ಶೇ.೫೦ ರಷ್ಟನ್ನು ಬಳಸುತ್ತಾರೆಂದರೆ ಉಳಿದದ್ದನ್ನು ಅವರು ಮಾರಲೇಬೇಕು. ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ರೈತರ ಉತ್ಪನ್ನಗಳನ್ನು ಖರೀದಿಸದಿದ್ದರೆ ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾರೆ. ರೈತರು ಎಷ್ಟು ಕ್ವಿಂಟಾಲ್ ಖರೀದಿ ಕೇಂದ್ರಗಳಿಗೆ ತರುತ್ತಾರೊ ಅಷ್ಟನ್ನೂ ಖರೀದಿಸಬೇಕು. ಇಂದೇ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಕೇವಲ ೨.೧೦ ಲಕ್ಷ ಟನ್ ಖರೀದಿಸಲು ವಿಧಿಸಿರುವ ನಿರ್ಬಂಧವನ್ನು ತೆಗೆದು ಹಾಕಬೇಕೆಂದು ಒತ್ತಾಯಿಸಬೇಕು. ಸ್ಥಗಿತಗೊಳಿಸಿರುವ ನೋಂದಣಿ ಕೇಂದ್ರಗಳನ್ನು ಕೂಡಲೆ ಪುನರಾರಂಭಿಸಬೇಕು ಎಂದು ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ.

Leave a Comment

Your email address will not be published. Required fields are marked *

Translate »
Scroll to Top