ಹೊಸಪೇಟೆ,ಫೆ.12: ವಿಜಯನಗರ ಜಿಲ್ಲೆಯ ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹೊಸಪೇಟೆ ವಿಭಾಗದ ವತಿಯಿಂದ ಹೊಸಪೇಟೆ ಕೇಂದ್ರ ಬಸ್ ನಿಲ್ದಾಣದಲ್ಲಿ ನಿರ್ಮಿಸಲಾಗಿರುವ 26 ವಾಣಿಜ್ಯ ಮಳಿಗೆಗಳನ್ನು ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರಾದ ಬಿ.ಶ್ರೀರಾಮುಲು ಅವರು ಶನಿವಾರ ಸಂಜೆ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಅವರು ಅಪಘಾತ ಮತ್ತು ಅಪರಾಧ ರಹಿತ ಸೇವೆ ಸಲ್ಲಿಸಿದ ಇಬ್ಬರು ಚಿನ್ನ ಪದಕ ವಿಜೇತ ಚಾಲಕರಿಗೆ ಪದಕ ವಿತರಿಸಿ,ಪ್ರಶಸ್ತಿ ಮತ್ತು ಸ್ಮರಣಿಕೆ ನೀಡಿ ಗೌರವಿಸಿದರು.
ಸರ್ಕಾರದ ಮೀಸಲಾತಿ ನಿಯಮಾನುಸಾರ ಸದರಿ ಮಳಿಗೆಗಳನ್ನು ಹಂಚಿಕೆ ಮಾಡಲಾಗುತ್ತದೆ.ಸಂಸ್ಥೆಯಲ್ಲಿ 15 ವರ್ಷ ಅಪಘಾತ ಮತ್ತು ಅಪರಾಧ ರಹಿತ ಸೇವೆ ಸಲ್ಲಿಸಿದ ಚಾಲಕರಿಗೆ ಬಂಗಾರದ ಪದಕ ವಿತರಿಸಲಾಗುತ್ತಿದೆ. ಅಪಘಾತ ರಹಿತ ಚಾಲಕರನ್ನು ಪ್ರೋತ್ಸಾಹಿಸಲು ಮತ್ತು ಇತರರಿಗೆ ಮಾದರಿಯಾಗಿ ಅಪಘಾತಗಳನ್ನು ಕಡಿಮೆಗೊಳಿಸಿ ಚಾಲಕರಲ್ಲಿ ಉತ್ತಮ ಚಾಲನಾ ಅವಶ್ಯಗಳನ್ನು ಅಭಿವೃದ್ಧಿಪಡಿಸುವ ಸಲುವಾಗಿ ನಿಗಮದಲ್ಲಿ 1982ರಿಂದ ಬೆಳ್ಳಿ ಪದಕ ಮತ್ತು ಚಿನ್ನದ ಪದಕ ನೀಡಲಾಗುತ್ತದೆ. ಹೊಸಪೇಟೆ ಘಟಕದ 1671ರ ಚಾಲಕರರಾದ ಭಾಷಾ ಸಾಹೇಬ್ ಹಾಗೂ ಹಡಗಲಿ ಘಟಕದ 20860ರ ಚಾಲಕರಾದ ಟಿ.ಎಚ್.ಶಿವಣ್ಣ ಅವರುಗಳಿಗೆ ಚಿನ್ನದ ಪದಕಗಳನ್ನು ನೀಡಿ ಗೌರವಿಸಲಾಯಿತು. ಪ್ರವಾಸೋದ್ಯಮ ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರರಾದ ಆನಂದ್ ಸಿಂಗ್, ನಗರಸಭೆ ಅಧ್ಯಕ್ಷರಾದ ಸುಂಕಮ್ಮ, ಹುಡಾ ಅಧ್ಯಕ್ಷ ಅಶೋಕ ಜೀರೆ,ಹೊಸಪೇಟೆ ವಿಭಾಗದ ಕಕರಸಾ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ನಾರಾಯಣ ಗೌಡಗೇರಿ ಮತ್ತಿತರರು ಇದ್ದರು.