ಯು.ಕೆ ದೇಶದ ವ್ಹೊಲ್ವರಹ್ಯಾಂಪ್ಟನ್ ವಿಶ್ವವಿದ್ಯಾನಿಲಯ ಮತ್ತು ಬೆಂಗಳೂರು ನಗರ ವಿಶ್ವವಿದ್ಯಾನಿಲಯಗಳ ಸಂಶೋಧನಾ ಒಡಂಬಡಿಕೆಯ ಉದ್ಘಾಟನೆ

ಬೆಂಗಳೂರು: ಕಳೆದ ತಿಂಗಳು (ಜುಲೈ 2023) ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಲಿಂಗರಾಜ ಗಾಂಧಿ ಅವರು ಯು.ಕೆ. ದೇಶದ ವ್ಹೊಲ್ವರಹ್ಯಾಂಪ್ಟನ್ ವಿಶ್ವವಿದ್ಯಾನಿಲಯದ ಅಹ್ವಾನದ ಮೇಲೆ ಸಂದರ್ಶಕ ಸಂಶೋಧನಾ ವಿದ್ವಾಂಸರಾಗಿ ಭೇಟಿ ನೀಡಿದ ಸಂದರ್ಭದಲ್ಲಿ ಜರುಗಿದ ಚರ್ಚೆ ಮತ್ತು ಸಮಾಲೋಚನೆಗಳ ಫಲಿತಾಂಶ ರೂಪದ ಶೈಕ್ಷಣಿಕ/ಸಂಶೋಧನಾ ಒಡಂಬಡಿಕೆಗೆ ಇಂದು ಜರುಗಿದ ಸರಳ ಸಮಾರಂಭದಲ್ಲಿ ಅಧಿಕೃತವಾಗಿ ಚಾಲನೆ ನೀಡಿ ಉದ್ಘಾಟಿಸಲಾಯಿತು.

ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಲಿಂಗರಾಜ ಗಾಂಧಿ ಯವರ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ, ವ್ಹೊಲ್ವರಹ್ಯಾಂಪ್ಟನ್ ವಿಶ್ವವಿದ್ಯಾನಿಲಯದಿಂದ ಸಂಶೋಧಕ ಪ್ರಾಧ್ಯಾಪಕರಾದ ಡಾ. ಸುರೇಶ ರೇಣುಕಪ್ಪ ಮತ್ತು ಸ್ನಾತಕೋತ್ತರ ಸಂಶೋಧನಾ ನಿರ್ದೇಶಕರಾಗಿರುವ ಡಾ. ಸುಭಾಶಿನಿ ಸುರೇಶ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿ, ವಿಶ್ವವಿದ್ಯಾನಿಲಯದ, ಕುಲಸಚಿವರು (ಆಡಳಿತ) ಜವರೇಗೌಡ. ಟಿ, ಕುಲಸಚಿವರು (ಮೌಲ್ಯಮಾಪನ) ಡಾ. ವಿ ಲೋಕೇಶ, ವಿತ್ತಾಧಿಕಾರಿಗಳಾದ ಜಿ.ಪಿ. ರಘು ರವರ ಉಪಸ್ಥಿತಿಯಲ್ಲಿ ಉದ್ಘಾಟನಾ ಕಾರ್ಯಕ್ರಮ ಜರುಗಿತು. 

ಸಮಾರಂಭದ ಆಶಯಭಾಷಣ ನೀಡಿದ ಪ್ರೊ. ಲಿಂಗರಾಜ ಗಾಂಧಿಯವರು ಪ್ರಸ್ತುತ ಸನ್ನಿವೇಷದ ಸಂಶೋಧನೆಗಳು, ಬಹುಶಿಸ್ತೀಯ ಸಂಶೋಧನೆಗಳಾಗಿದ್ದು, ವಿವಿಧ ನಿಕಾಯ ಹಾಗೂ ವಿಭಾಗಗಳನ್ನು ಒಳಗೊಂಡ ಸಂಶೋಧನೆ ಇಂದಿನ ಕಾಲಘಟ್ಟದ ಅನಿವಾರ್ಯತೆಯಾಗಿದೆ. ಸರ್ಕಾರ, ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ಉದ್ಯಮಗಳು ಸಂಶೋಧನೆಯ ಅವಿಭಾಜ್ಯ ಅಂಗಗಳಾಗಿವೆ. ಬಹುಮುಖ ಸಂಶೋಧನೆಗಳಲ್ಲಿ, ತಂತ್ರಜ್ಞಾನ ಅವಲಂಬಿತವಾಗಿದ್ದು, ಸಮಾಜದ ಅಭಿವೃಧಿಯಲ್ಲಿ ಅವುಗಳ ಕೊಡುಗೆ ಇದೆ. ಹೀಗಾಗಿ, ಎಲ್ಲ ನಿಕಾಯಗಳು ಮತ್ತು ವಿಭಾಗಗಳ ಸಂಶೋಧನಾಸಕ್ತರಿಗೆ ವಿಫುಲವಾದ ಅವಕಾಶಗಳಿವೆ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಭಾಗವಹಿಸಿದ ಡಾ. ಸುಭಾಶಿನಿ ಸುರೇಶ ಮತ್ತು ಡಾ. ಸುರೇಶ ರೇಣುಕಪ್ಪ ರವರು, ಪ್ರಸ್ತುತ ಕಾಲಮಾನದ ಸಂಶೋಧನೆಗಳು ಬಹುಶಿಸ್ತೀಯ ಸಂಶೋಧನೆಗಳಾಗಿದ್ದು, ಇವುಗಳಲ್ಲಿ, ವಿಶ್ವವಿದ್ಯಾನಿಲಯ, ಉದ್ಯಮ ಹಾಗೂ ಸರ್ಕಾರಗಳು ಒಳಗೊಂಡಿರುತ್ತವೆ.  ಸರ್ಕಾರದ ಯೋಜನೆಗಳ ಪರಿಕಲ್ಪನೆ, ಅನುಷ್ಠಾನ ಮತ್ತು ವಿಶ್ಲೇಷಣೆಗಾಗಿ ಸಂಶೋಧನೆಗಳ ಪ್ರಸ್ತುತತೆ ಕುರಿತು ವಿವರಿಸಿ, ಸಂಶೋಧನೆಗಳು ಒಂದು ವಿಭಾಗ/ನಿಕಾಯಕ್ಕೆ ಸೀಮಿತವಾಗಿರದೆ, ಬಹು ವಿಭಾಗಗಳು ಒಳಗೊಳ್ಳುವ ಅನಿವಾರ್ಯತೆ ಉಂಟಾಗಿದೆ ಎಂದು ಹೇಳಿದರು. ಹೀಗಾಗಿ ಸಂಶೋಧನೆ ಕುರಿತು ಒಲವು ಹೊಂದಿದ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರುಗಳಿಗೆ ಅಪಾರವಾದ ಅವಕಾಶಗಳೂ ಲಭ್ಯವಿವೆ ಎಂದು ಹೇಳಿದರು.  

          ವ್ಹೊಲ್ವರಹ್ಯಾಂಪ್ಟನ್ ವಿಶ್ವವಿದ್ಯಾನಿಲಯದಿಂದ ಸಂಶೋಧಕ ಪ್ರಾಧ್ಯಾಪಕರು 19 ಆಗಸ್ಟ 2023ರ ವರೆಗೆ ವಿಶ್ವವಿದ್ಯಾನಿಲಯದ ವಿವಿಧ ವಿಭಾಗಗಳಿಗೆ ಭೇಟಿ ನೀಡಿ, ಅಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳೊಂದಿಗೆ ಮತ್ತು ಎರಡು ಸಂಯೋಜಿತ ಮಹಾವಿದ್ಯಾಲಯಗಳಾದ ಮೌಂಟ್ ಕಾರ್ಮೆಲ್ ಮಹಿಳಾ ಕಾಲೇಜು ಹಾಗೂ ಇಂಟರನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸೈಕಾಲಾಜಿಕಲ್ ರಿಸರ್ಚ ಸಂಸ್ಥೆಗಳ ಅಧ್ಯಪಕರು ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸುವರು. 

ಕಾರ್ಯಕ್ರಮದಲ್ಲಿ, ಎಲ್ಲಾ ನಿಕಾಯಗಳ ಡೀನರು, ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು, ಅತಿಥಿ ಉಪನ್ಯಾಸಕರು ಮತ್ತು ಸಂಶೋಧನಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.  

Facebook
Twitter
LinkedIn
Telegram
WhatsApp
Email
Print
Skype

Leave a Comment

Your email address will not be published. Required fields are marked *

Translate »
Scroll to Top