ಬಳ್ಳಾರಿ: ಬಳ್ಳಾರಿ ನಗರದ ಬಹು ನಿರೀಕ್ಷಿತ ಕನಕದುರ್ಗಮ್ಮ ಗುಡಿ ರೈಲ್ವೆ ಅಂಡರ್’ಪಾಸ್ ಅನ್ನು ಭಾನುವಾರ ಸಂಜೆ ಹರ ಗುರು ಚರ ಮೂರ್ತಿಗಳು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.
ಉದ್ಘಾಟನೆಗೂ ಮುನ್ನ ಕೊಟ್ಟೂರು ಸಂಸ್ಥಾನ ಮಠದ ಕೊಟ್ಟೂರು ಮಹಾಸ್ವಾಮಿ ಹಾಗೂ ಎಮ್ಮಿಗನೂರು ಹಂಪಿಸಾವಿರ ಮಠದ ವಾಮದೇವ ಶಿವಾಚಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಗಣ್ಯರಿಗೆ ಆಶೀರ್ವದಿಸಿದ ನಂತರ ಅಂಡರ್’ಪಾಸ್ ಅನ್ನು ಉದ್ಘಾಟಿಸಿದರು.
ರಾಜ್ಯಸಭಾ ಸದಸ್ಯ ಡಾ.ಸಯ್ಯದ್ ನಾಸಿರ್ ಹುಸೇನ್, ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಮೇಯರ್ ಮುಲ್ಲಂಗಿ ನಂದೀಶ್, ವಕ್ಫ್ ಬೋರ್ಡ್ ಅಧ್ಯಕ್ಷ ಹುಮಾಯುನ್ ಖಾನ್, ಉಪಮೇಯರ್ ಡಿ.ಸುಕುಂ, ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ, ಕಮ್ಮ ಮಹಾಜನ ಸಂಘದ ಅಧ್ಯಕ್ಷ ಮುಂಡ್ಲೂರು ಅನುಪಕುಮಾರ್, ರೆಡ್ಡಿ ಮಹಾಜನ ಸಂಘದ ನಾರಾ ಪ್ರತಾಪ್ ರೆಡ್ಡಿ, ಅಖಿಲ ಭಾರತ ವೀರಶೈವ ಮಹಾಸಭಾದ ದಂಡಿನ ಶಿವಾನಂದ, ಎ.ಮಾನಯ್ಯ, ಅಯಾಜ್ ಅಹ್ಮದ್, ಅಸ್ಲಂ ಫರವೇಜ್, ಮಹಾನಗರ ಪಾಲಿಕೆಯ ಸದಸ್ಯರು, ಚಾನಾಳ್ ಶೇಖರ್, ವೆಂಕಟೇಶ್ ಹೆಗಡೆ, ಗುಡ್ಲೂರು ರವಿ, ಚಂಪಾ ಚವ್ಹಾಣ್, ರಾಮು ಚವ್ಹಾಣ್, ಶಮೀಮ್ ಜೊಹ್ರಾ, ಸಲ್ಮಾ ಎಸ್.ಕೆ, ಅಖಿಲಾ ಇತರರು ಹಾಜರಿದ್ದರು.
ಉದ್ಘಾಟನೆಗೆ ಸೇರಿದ ಜನಸಾಗರ
ಅಂಡರ್’ಪಾಸ್ ಉದ್ಘಾಟನೆ ಯಾವಾಗ ಆಗಲಿದೆ ಎಂದು ಬಹು ದಿನಗಳಿಂದ ಜನರು ಕಾತರದಿಂದ ಇದ್ದರು. ಕಾಮಗಾರಿ ಉದ್ಘಾಟನೆಯ ಘಳಿಗೆಯನ್ನು ಕಣ್ತುಂಬಿಕೊಳ್ಳಲು ಕನಕದುರ್ಗಮ್ಮ ದೇವಸ್ಥಾನದ ಬಳಿ ಸಾವಿರಾರು ಜನರು ಸೇರಿದ್ದರು.
ಅಂಡರ್’ಪಾಸಿನ ಎರಡೂ ಬದಿಯ ಗೋಡೆಗಳನ್ನು ದೀಪಗಳಿಂದ ಅಲಂಕರಿಸಲಾಗಿತ್ತು. ಪುಟ್’ಪಾತಿನ ಕಂಬಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ತಾಷಾ ರಾಂಡೋಲುಗಳನ್ನು ವಾದ್ಯಗಳ ಮೂಲಕ, ಆಕಾಶದಲ್ಲಿ ಚಿತ್ತಾರ ಮೂಡಿಸುವ ಪಟಾಕಿಗಳ ಸದ್ದಿನೊಂದಿಗೆ ಅತಿಥಿಗಳನ್ನು ಸ್ವಾಗತಿಸಲಾಯಿತು.
ಶಾಸಕ ನಾರಾ ಭರತ್ ರೆಡ್ಡಿ, ರಾಜ್ಯಸಭಾ ಸಂಸದ ಡಾ.ಸಯ್ಯದ್ ನಾಸಿರ್ ಹುಸೇನ್ ಅವರಿಗೆ ಕ್ರೇನ್ ಮೂಲಕ ಹಾರ ಹಾಕುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸಿದರು.
ಹರ ಗುರು ಚರ ಮೂರ್ತಿಗಳಿಂದ ರಸ್ತೆ ಉದ್ಘಾಟನೆಯಾದ ನಂತರ ಅತಿಥಿಗಳು, ಶಾಸಕರು, ಸಂಸದರು ರಸ್ತೆಯಲ್ಲಿ ನಡೆದುಕೊಂಡು ಹೋದರು. ತದನಂತರ ಸ್ವಾಮೀಜಿಗಳ ವಾಹನಗಳು ಸಂಚರಿಸುವ ಮೂಲಕ ರಸ್ತೆಯನ್ನು ವಿದ್ಯುಕ್ತವಾಗಿ ಉದ್ಘಾಟಿಸಲಾಯಿತು.