ಬೆಂಗಳೂರು: ರಾಜ್ಯದಲ್ಲಿ ಅಸ್ತಿತ್ವದಲ್ಲೇ ಇಲ್ಲದ ಮದ್ಯದಂಗಡಿಗಳನ್ನು ರಾಜ್ಯ ಸರ್ಕಾರ ಕಾನೂನು ಬಾಹಿರವಾಗಿ ಹರಾಜು ಮಾಡುತ್ತಿರುವುದಕ್ಕೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷ ವಿರೋಧ ವ್ಯಕ್ತಪಡಿಸಿದ್ದು, ರಾಜ್ಯದಲ್ಲೂ ದೆಹಲಿ ಮಾದರಿಯಲ್ಲಿ ಬಹುಕೋಟಿ ಅಬಕಾರಿ ಹಗರಣ ಸಂಭವಿಸುವ ಮುನ್ಸೂಚನೆ ಕಾಣುತ್ತಿದೆ ಎಂದು ಎರಡೂ ಪಕ್ಷಗಳು ಹೇಳಿವೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಪ್ರತಿಪಕ್ಷ ನಾಯಕ ರ್. ಅಶೋಕ್, ಅಸ್ತಿತ್ವದಲ್ಲಿ ಇಲ್ಲದ ಮದ್ಯದಂಗಡಿಗಳನ್ನು ಕಾನೂನು ಬಾಹಿರವಾಗಿ ಹರಾಜು ಹಾಕಲು ಮುಂದಾಗಿರುವ ರಾಜ್ಯ ಸರ್ಕಾರ ರಾಜ್ಯವನ್ನು ಲೂಟಿ ಮಾಡಲು ಮತ್ತೊಂದು ಅಡ್ಡ ದಾರಿ ಹಿಡಿಯಲು ಹೊರಟಿದೆ ಎಂದು ಕಿಡಿಕಾರಿದ್ದಾರೆ. ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕ್ರೇಜಿವಾಲ್ ಜೈಲು ಪಾಲಾಗಿ ಅಧಿಕಾರ ಕಳೆದುಕೊಳ್ಳಲು ಕಾರಣವಾದ ಬಹುಕೋಟಿ ಅಬಕಾರಿ ಹಗರಣ ಮಾದರಿಯಲ್ಲೇ ರಾಜ್ಯದಲ್ಲೂ ಅಬಕಾರಿ ಹಗರಣವೊಂದು ಸಂಭವಿಸುವ ಮನ್ಸೂಚನೆ ಕಾಣುತ್ತದೆ ಎಂದು ಅವರು ಹೇಳಿದ್ದಾರೆ.
ಅಸ್ತಿತ್ವದಲ್ಲಿಲ್ಲದ ಮದ್ಯದಂಗಡಿಗಳ ಹರಾಜನ್ನು ಜೆಡಿಎಸ್ ಸಹ ಟೀಕೆ ಮಾಡಿ ಟ್ವೀಟ್ ಮಾಡಿದ್ದು, ದೆಹಲಿ ಅಬಕಾರಿ ಹಗರಣ ಮೀರಿಸುತ್ತಿದೆ ರಾಜ್ಯದ ಈ ಅಬಕಾರಿ ಹಗರಣ ಎಂದು ಲೇವಡಿ ಮಾಡಿದೆ.
ರಾಜ್ಯವನ್ನು ದಿವಾಳಿ ಎಬ್ಬಿಸಿರುವ ಬರಗೆಟ್ಟ ಕಾಂಗ್ರೆಸ್ ಸರ್ಕಾರ ಆದಾಯ ಹೆಚ್ಚಿಸಿಕೊಳ್ಳಲು ಇನ್ನಿಲ್ಲದ ಕುತಂತ್ರ ನಡೆಸುತ್ತದೆ. ಕಾನೂನು ರೀತಿಯಲ್ಲಿ ಅಸ್ತಿತ್ವದಲ್ಲಿಲ್ಲದ ಮದ್ಯದಂಡಗಳ ಪರವಾನಗಿಗಳ ಮಾರಾಟಕ್ಕೆ ಮುಂದಾಗಿರುವುದು ಸರಿಯಲ್ಲ ಎಂದು ಜೆಡಿಎಸ್ ಹೇಳಿದೆ.