ಸರ್ಕಾರದ ದೃಷ್ಟಿಯಲ್ಲಿ ಎಲ್ಲರೂ ಸಮಾನ

ಬೆಂಗಳೂರು : ಯಾವುದೇ ಸಮಾಜ, ಸಂಘಟನೆಯಾಗಲಿ ಕಾನೂನನ್ನು ಕೈಗೆ ತೆಗೆದುಕೊಳ್ಳದಂತೆ ಶಾಂತಿ ಸುವ್ಯವಸ್ಥೆ ಕಾಪಾಡಲು ಎಲ್ಲ ಕ್ರಮ ತೆಗೆದುಕೊಳ್ಳಲಾಗುವುದು. ಸರ್ಕಾರದ ದೃಷ್ಟಿಯಲ್ಲಿ ಎಲ್ಲರೂ ಸಮಾನರು. ಯಾವುದೇ ಭೇಧಭಾವವಿಲ್ಲದೆ ಕೆಲಸ ಮಾಡುವುದಾಗಿ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಏಪ್ರಿಲ್ 16 ರಿಂದ ಪ್ರತಿಭಟನೆ ಮಾಡುವುದಾಗಿ ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಪ್ರತಿಭಟಿಸುವ ಹಕ್ಕಿದೆ. ಆದರೆ ಆಧಾರರಹಿತವಾದ ಹೇಳಿಕೆಗೆ ನಾನು ಉತ್ತರಿಸುವುದಿಲ್ಲ. ಬಿ.ಜೆ.ಪಿ ರಾಷ್ಟ್ರೀಯ ಪಕ್ಷ. ಕರ್ನಾಟಕ ಜನತೆಯ ಆಶೀರ್ವಾದ ಇದೆ. ಬರುವ ದಿನಗಳಲ್ಲಿ ಇನ್ನಷ್ಟು ಉತ್ತಮ ಆಡಳಿತ ನೀಡುವ ವಿಶ್ವಾಸವಿದೆ. ಹೇಳಿಕೆಗಳಿಂದ ಸಮಸ್ಯೆ ಇತ್ಯರ್ಥವಾಗುವುದಿಲ್ಲ. ಹಲವಾರು ವಿಚಾರಗಳು ಹಿಂದಿರುವ ವಿಚಾರ. 2001, 2002 ರ ಆದೇಶಗಳು. ನಾವು ಯಾವುದೇ ಹೊಸ ಆದೇಶವನ್ನು ಹೊರಡಿಸಿಲ್ಲ. ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಕಾರ್ಯ ನಿರ್ವಹಿಸುವುದಾಗಿ ತಿಳಿಸಿದರು.

ಆಜಾನ್: ಎಲ್ಲರನ್ನು ವಿಶ್ವಾಸಕ್ಕೆ ಪಡೆಯಲಾಗುವುದು ಆಜಾನ್ ಬಗ್ಗೆ ಈಗಾಗಲೇ ಉಚ್ಚನ್ಯಾಯಾಲಯದ ಆದೇಶವಿದೆ. ಆದೇಶ ಅನುಷ್ಠಾನ ಏಕಾಗಿಲ್ಲ ಎಂದು ಮತ್ತೊಂದು ಆದೇಶವಿದೆ. ಎಷ್ಟು ಡೆಸಿಬಲ್ ಇರಬೇಕು ಎಂದು ಸೂಚಿಸಲಾಗಿದೆ. ಡೆಸಿಬಲ್ ಮೀಟರ್ ಗಳನ್ನು ಜಿಲ್ಲಾ ಮಟ್ಟದಲ್ಲಿ ಖರೀದಿಸಲು ಆದೇಶವಿದೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾಡುವ ಕೆಲಸವಿದು. ಒತ್ತಾಯಪೂರ್ವಕವಾಗಿ ಮಾಡುವಂಥದ್ದಲ್ಲ. ಕ್ಷೇತ್ರ ಮಟ್ಟದಲ್ಲಿ ಹಲವಾರು ಸಂಘಟನೆಗಳ ಜೊತೆಗೆ ಪೊಲೀಸ್ ಠಾಣೆಯಿಂದ ಹಿಡಿದು ಜಿಲ್ಲಾ ಮಟ್ಟದಲ್ಲಿ ಹಿಂದೆಯೇ ಮಾಡಲಾಗಿದೆ. ಮುಂದೂ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಸಚಿವ ಸಂಪುಟ ವಿಸ್ತರಣೆ : ಸಚಿವ ಸಂಪುಟ ವಿಸ್ತರಣೆ ಬಗ್ಗೆ ಇದುವರೆಗೂ ಯಾವುದೇ ಚರ್ಚೆ ಯಾಗಿಲ್ಲ. ಅಮಿತ್ ಷಾ ಮತ್ತು ಜೆ.ಪಿ.ನಡ್ಡಾ ಅವರನ್ನು ಭೇಟಿ ಯಾದ ಸಂದರ್ಭದಲ್ಲಿ ವಿಚಾರ ಪ್ರಸ್ತಾಪ ವಾಗುವ ನಿರೀಕ್ಷೆ ಇದೆ ಎಂದರು.

ಕೆ.ಟಿ.ರಾಮರಾವ್ ಟ್ವೀಟ್ ಹಾಸ್ಯಾಸ್ಪದ : ಆಂಧ್ರಪ್ರದೇಶದ ಐ.ಟಿ. ಬಿ.ಟಿ ಸಚಿವ ಕೆ.ಟಿ.ರಾಮರಾವ್ ಅವರು ಮಾಡಿರುವ ಟ್ವೀಟ್ ಅತ್ಯಂತ ಹಾಸ್ಯಾಸ್ಪದವಾಗಿದೆ. ಇಡೀ ಜಗತ್ತಿನ ಜನ ಬೆಂಗಳೂರಿಗೆ ಬರುತ್ತಿದ್ದಾರೆ. ಹೆಚ್ಚಿನ ಯೂನಿಕಾರ್ನ್ ಮತ್ತು ಸ್ಟಾರ್ಟ್ ಅಪ್ ಗಳು ಬೆಂಗಳೂರಿನಲ್ಲಿವೆ ಎಂದರು.

Leave a Comment

Your email address will not be published. Required fields are marked *

Translate »
Scroll to Top