ಬೆಂಗಳೂರು : ಬಿಜೆಪಿಯವರಿಗೆ ಮೊದಲಿನಿಂದಲೂ ಅಧಿಕಾರಿಗಳ ವರ್ಗಾವಣೆ, ಸರ್ಕಾರಿ ಹುದ್ದೆಗಳ ಮಾರಾಟ ಮಾಡಿಕೊಂಡು ಅಭ್ಯಾಸವಿದೆ. ಇದನ್ನು ಸ್ವತಃ ಯತ್ನಾಳ್ ಅವರೇ ಹೇಳಿದ್ದಾರೆ. ಆದರೆ ಅವರು ನಮ್ಮ ಬಗ್ಗೆ ಮಾತನಾಡುವಾಗ ನಾಲಿಗೆ ಮೇಲೆ ನಿಯಂತ್ರಣ ಇಟ್ಟುಕೊಳ್ಳಬೇಕು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸಭೆ ಕಲಾಪದ ಶೂನ್ಯ ವೇಳೆಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಅಧಿಕಾರಿಗಳ ವರ್ಗಾವಣೆಯಲ್ಲಿ ವ್ಯವಹಾರ ಮಾಡಿಕೊಂಡಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಯತ್ನಾಳ್ ಹಾಗೂ ಸಚಿವ ಭೈರತಿ ಸುರೇಶ್ ಮಧ್ಯೆ ಮಾತಿನ ಚಕಮಕಿ ಏರ್ಪಟ್ಟಿತು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಯತ್ನಾಳ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು ಹೀಗೆ
“ಬಿಜೆಪಿಯವರಿಗೆ ಮೊದಲಿನಿಂದಲೂ ಈ ರೀತಿ ವ್ಯವಹಾರ ಮಾಡಿಕೊಂಡು ಬಂದಿರುವ ಅಭ್ಯಾಸ ಇದೆ. ಮುಖ್ಯಮಂತ್ರಿ ಹುದ್ದೆಯನ್ನು ₹2500 ಕೋಟಿ, ಮಂತ್ರಿ ಹುದ್ದೆಯನ್ನು ₹100 ಕೋಟಿಗೆ ಮಾರಾಟ ಮಾಡಲಾಗಿದೆ ಎಂದು ಯತ್ನಾಳ್ ಅವರೇ ಆರೋಪಿಸಿದ್ದಾರೆ” ಎಂದರು.
ಆಗ ಯತ್ನಾಳ್ ಅವರು ಮಧ್ಯ ಪ್ರವೇಶ ಮಾಡಲು ಮುಂದಾದಾಗ, “ಕೂತುಕೊಳ್ಳಯ್ಯ ನೀವೇನು ಹೇಳಿದ್ದೀರಿ, ಮಾತನಾಡಿದ್ದೀರಿ ಎಂಬ ಇತಿಹಾಸ ನಮ್ಮ ಬಳಿ ಇದೆ. ನೀವು ನೀಡಿದ ಹೇಳಿಕೆಯನ್ನು ನಿಮ್ಮ ಮುಖ್ಯಮಂತ್ರಿಗಳು ಕೇಳಿಸಿಕೊಂಡು ಸುಮ್ಮನೆ ಕೂತಿರಬಹುದು. ಆದರೆ ನಾವು ಹಾಗೆ ಕೇಳಿಸಿಕೊಂಡಿರಲು ಸಾಧ್ಯವಿಲ್ಲ. ನೀನು ನಾಲಿಗೆ ಮೇಲೆ ಹಿಡಿತವಿಟ್ಟುಕೊಂಡು ಮಾತನಾಡಬೇಕು.
ನಿಮ್ಮ ನಾಯಕರಾಗಿದ್ದಕ್ಕೆ ನಿಮ್ಮ ಮಾತನ್ನು ಕೇಳಿಸಿಕೊಂಡು ಅವರು ಸುಮ್ಮನೆ ಇದ್ದಾರೆ. ನನ್ನಂತಹವನಾಗಿದ್ದರೆ ನಿಮ್ಮನ್ನು 24 ತಾಸಿನಲ್ಲಿ ಪಕ್ಷದಿಂದ ವಜಾ ಮಾಡುತ್ತಿದ್ದೆ. ನಿಮ್ಮಂತಹವರಿಂದ ಇಂದು ನೀವು (ಬಿಜೆಪಿ) ಆ ಕಡೆ ಸ್ಥಾನದಲ್ಲಿ ಕೂತಿದ್ದೀರಿ” ಎಂದು ಹರಿಹಾಯ್ದರು.