ತಂತ್ರಜ್ಞಾನದ ಮೂಲಕ ಆರೋಗ್ಯ ವಲಯದ ಸುಧಾರಣೆ

ಬೆಂಗಳೂರು : ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ತಂತ್ರಜ್ಞಾನದ ಮೂಲಕ ಸುಧಾರಣೆ ತರುವ ಪ್ರಯತ್ನಕ್ಕೆ ಆರೋಗ್ಯ ಇಲಾಖೆ ಎಸ್ಟೋನಿಯಾದ ಜೊತೆ ಹೊಸ ಒಡಂಬಡಿಕೆಯನ್ನು ಮಾಡಿಕೊಂಡಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಎಸ್ಟೋನಿಯಾ ದೇಶದ ಭಾರತದ ರಾಯಭಾರಿ ಕತ್ರಿನ್ ಕಿವ್ ನೇತೃತ್ವದ ಉನ್ನತ ನಿಯೋಗ ಬೆಂಗಳೂರಿನಲ್ಲಿ ಸಚಿವರನ್ನು ಭೇಟಿ ಮಾಡಿ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಿತು. ಎಸ್ಟೋನಿಯಾ ಚಿಕ್ಕ ದೇಶವಾದರೂ ಅತೀ ಹೆಚ್ಚು ನವೋದ್ಯಮಗಳನ್ನು ಹೊಂದಿದೆ. ಹಾಗೆಯೇ ತಂತ್ರಜ್ಞಾನಕ್ಕೆ ಹೆಸರಾಗಿದೆ. ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಅಭಿವೃದ್ಧಿ ಸಾಧಿಸಿದೆ. ಹೀಗಾಗಿ ನಿಯೋಗದ ಭೇಟಿ ರಾಜ್ಯಕ್ಕೆ ಲಾಭವಾಗಲಿದೆ ಎಂದು ಹೇಳಿದರು. ಎಸ್ಟೋನಿಯಾ ದೇಶದ ಎಲ್ಲಾ ಪ್ರಜೆಗಳು ಹೆಲ್ತ್ ರಿಜಿಸ್ಟ್ರಿ ಮಾಡಿಕೊಂಡಿದ್ದಾರೆ. ಆ ದೇಶದಲ್ಲಿ ಟೆಲಿ ಮೆಡಿಸಿನ್ ವ್ಯವಸ್ಥೆ ಇದೆ. 400 ವರ್ಷಗಳ ಹಳೆಯ ವಿಶ್ವವಿದ್ಯಾನಿಲಯ ಕೂಡ ಇವೆ. ಇಂತಹ ದೇಶದ ಜೊತೆ ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯ Exchange Programme ಒಡಂಬಡಿಕೆಯನ್ನು ಮಾಡಿಕೊಂಡಿದೆ. ಇದರಿಂದ ಆ ದೇಶದ ಆರೋಗ್ಯ ವ್ಯವಸ್ಥೆ ಬಗ್ಗೆ ಪರಿಚಯ ಸಿಗುವುದರ ಜೊತೆಗೆ ನಮ್ಮ ದೇಶದ ಆರೋಗ್ಯ ವ್ಯವಸ್ಥೆಯ ಬಗ್ಗೆ ಅವರಿಗೂ ತಿಳಿವಳಿಕೆ ಸಿಗಲಿದೆ ಎಂದು ಹೇಳಿದರು.

ಎಸ್ಟೋನಿಯಾದಲ್ಲಿ ಜೆನೊಮಿಕ್ ಲ್ಯಾಬ್ ಇದೆ. ವ್ಯಕ್ತಿಯ ಡಿಎನ್ ಎ ಮೂಲಕ ಯಾವ ವ್ಯಕ್ತಿಗೆ ಕ್ಯಾನ್ಸರ್, ಪಾರ್ಕಿನ್ಸನ್, ಸಾಂಕ್ರಾಮಿಕ ರೋಗಗಳು ಸೇರಿದಂತೆ ಯಾವ ಕಾಯಿಲೆ ಬರಬಹುದು ಅನ್ನುವುದನ್ನು ಸಂಶೋಧನೆ ಮಾಡಲಾಗುತ್ತದೆ. ಈ ಮೂಲಕ ಕಾಯಿಲೆಯನ್ನು ಬೇಗನೆ ಪತ್ತೆ ಹಚ್ಚಿ ಅದಕ್ಕೆ ಚಿಕಿತ್ಸೆ ನೀಡುವ ವ್ಯವಸ್ಥೆ ಇದೆ. ಈ ವ್ಯವಸ್ಥೆಯನ್ನು ಹೇಗೆ ಅರ್ಥಪೂರ್ಣವಾಗಿ ಬಳಸಿಕೊಳ್ಳಬಹುದು ಅನ್ನುವ ಬಗ್ಗೆ ಮಾತುಕತೆ ನಡೆದಿದೆ. ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬಹುದು ಅನ್ನುವ ಬಗ್ಗೆಯೂ ಮಾತುಕತೆ ನಡೆದಿದೆ ಎಂದು ಹೇಳಿದರು.

Leave a Comment

Your email address will not be published. Required fields are marked *

Translate »
Scroll to Top