ರಾಜ್ಯದ 19 ಜಿಲ್ಲಾಸ್ಪತ್ರೆಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್ ಸ್ಕ್ರೀನಿಂಗ್ ತಂತ್ರಜ್ಞಾನ ಅಳವಡಿಕೆ

ಬೆಂಗಳೂರು: ರಾಜ್ಯದ 19 ಜಿಲ್ಲೆಗಳ ಜಿಲ್ಲಾಸ್ಪತ್ರೆಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್ ಪತ್ತೆ ಹಚ್ಚುವ AI ಆಧಾರಿತ ತಂತ್ರಜ್ಞಾನ ಅಳವಡಿಸಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಈ ನಿಟ್ಟಿನಲ್ಲಿ ವಿಕಾಸ ಸೌಧದಲ್ಲಿ ಇಂದು ಅಷ್ಟ್ರಾಜೆನಕಾ ಇಂಡಿಯಾ ಸಂಸ್ಥೆಯೊಂದಿಗೆ ಒಡಂಬಡಿಕೆಗೆ ಸಹಿ ಹಾಕುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ಈ ಸೇವೆ ರಾಜ್ಯದ ಜನರಿಗೆ ಹೆಚ್ಚು ಉಪಯೋಗವಾಗಲಿದೆ ಎಂದರು.

ಆರಂಭಿಕ ಹಂತದಲ್ಲಿಯೇ ಶ್ವಾಸಕೋಶದ ಕ್ಯಾನ್ಸರ್ ಪತ್ತೆ ಹಚ್ಚುವ AI ಆಧಾರಿತ ತಂತ್ರಜ್ಞಾನವನ್ನ ಅಷ್ಟ್ರಾಜೆನಕಾ ಸಂಸ್ಥೆಯವರು ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಅಳವಡಿಸಲು ಮುಂದೆ ಬಂದಿದ್ದಾರೆ. ಉಚಿತವಾಗಿ ಸೇವೆ ಒದಗಿಸಲು ಆರೋಗ್ಯ ಇಲಾಖೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದಾರೆ. ಮೊದಲ ಹಂತದಲ್ಲಿ ರಾಜ್ಯದ 19 ಜಿಲ್ಲಾಸ್ಪತ್ರೆಗಳಲ್ಲಿ ಈ ಸೇವೆ ಲಭ್ಯವಾಗಲಿದೆ. ಒಂದು ವರ್ಷದ ವರೆಗೆ ಉಚಿತ ಸೇವೆ ನೀಡಲು ಅಸ್ಟ್ರಾಜೆನಿಕಾ ಸಂಸ್ಥೆಯವರು ಒಪ್ಪಿಕೊಂಡಿದ್ದಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

 

ಒಂದು ವರ್ಷದ ವರೆಗೆ ತಂತ್ರಜ್ಞಾನದ ಸದುಪಯೋಗನ್ನ ಪರಿಶೀಲಿಸಿ ಬಳಿಕ ಉಳಿದ ಜಿಲ್ಲೆಗಳಿಗೂ ಈ ಸೇವೆಯನ್ನ ವಿಸ್ತರಿಸುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ಅಲ್ಲದೇ ನಾಳೆಯಿಂದಲೇ ಬೆಂಗಳೂರಿನ ಕೆ.ಸಿ ಜನರಲ್ ಆಸ್ಪತ್ರೆಯಲ್ಲಿ ತಂತ್ರಜ್ಞಾನ ಅಳವಡಿಕೆಯಾಗಲಿದ್ದು, ಸಾರ್ವಜನಿಕರು ಇದರ ಉಪಯೋಗ ಪಡೆಯುವಂತೆ ಇದೇ ವೇಳೆ ಸಚಿವರು ಹೇಳಿದರು. 

ಒಂದೇ ಬಾರಿಗೆ 29 ಶ್ವಾಸಕೋಶದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಯನ್ನು ಪರೀಕ್ಷಿಸುವ Qure.ai ಅಭಿವೃದ್ಧಿಪಡಿಸಿದ AI ಆಧಾರಿತ ಶ್ವಾಸಕೋಶದ ಕ್ಯಾನ್ಸರ್ ಸ್ಕ್ರೀನಿಂಗ್ ತಂತ್ರಜ್ಞಾನ ಇದಾಗಿದೆ. ಡಿಜಿಟಲ್‌ ಎದೆಯ ಎಕ್ಸ್‌-ರೇ ಬಳಸಿಕೊಂಡು ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿರುವ ರೋಗಿಗಳನ್ನು ಗುರುತಿಸಲು ಸಹಾಯಕಾರಿಯಾಗಿದೆ.

“ಕ್ಯಾನ್ಸರ್‌ ಅನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿದರ ಚಿಕಿತ್ಸೆ ನೀಡಬಹುದು. ವಿಶೇಷವಾಗಿ ಆರ್ಥಿಕ ಸಮಸ್ಯೆಯಿಂದ ಪ್ರಾಥಮಿಕ ಆರೈಕೆ ಪಡೆಯಲು ಸಾಧ್ಯವಾಗದ ವ್ಯಕ್ತಿಗಳಿಗೆ ಇದು ಅತ್ಯಂತ ಪ್ರಯೋಜನಾಕಾರಿ ಮಾರ್ಗವಾಗಿ ಹೊರಹೊಮ್ಮುತ್ತದೆ ಎಂದು ಆರೋಗ್ಯ ಸಚಿವರಾದ ದಿನೇಶ್‌ ಗುಂಡೂರಾವ್‌ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.‌

ಕರ್ನಾಟಕದಲ್ಲಿ, ಪುರುಷರು ಮತ್ತು ಮಹಿಳೆಯರಲ್ಲಿ ಕ್ಯಾನ್ಸರ್ ಪ್ರಮಾಣವು ಪ್ರತಿ ವರ್ಷ ಸುಮಾರು 1% ರಷ್ಟು ಹೆಚ್ಚುತ್ತಿದೆ. ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್ (ICMR) ನಡೆಸಿದ ಅಧ್ಯಯನದ ಪ್ರಕಾರ, 2025 ರ ವೇಳೆಗೆ ಕರ್ನಾಟಕದಲ್ಲಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುವ ವರದಿಗಳ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಹೊಸ ತಂತ್ರಜ್ಞಾಗಳೊಂದಿಗೆ ರೋಗಿಗಳಿಗೆ ನೆರವಾಗುತ್ತಿದೆ.

ಕಳೆದ 40 ವರ್ಷಗಳಿಂದ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಉತ್ತಮ ಕಾರ್ಯನಿರ್ವಹಿಸುತ್ತಿರುವ

 AstraZeneca ಇಂಡಿಯಾದವರು, ಕೋವಿಡ್ ಸಂದರ್ಭದಲ್ಲಿ ಉತ್ತಮ ಲಸಿಕೆ ತಯಾರಿಸಿಕೊಡುವಲ್ಲಿಯೂ ಶ್ರಮ ವಹಿಸಿದ್ದರು. ಇದೀಗ ಕರ್ನಾಟಕದಲ್ಲೇ ಕ್ಯಾನ್ಸರ್ ಪತ್ತೆಯ ಉಚಿತ ಸೇವೆ ಒದಗಿಸಲು ಮುಂದೆ ಬಂದಿರುವುದು ಸಂತಸದ ಸಂಗತಿ ಎಂದು ಅರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ದೇಶದ ಅಧ್ಯಕ್ಷರಾದ ಡಾ ಸಂಜೀವ್ ಪಾಂಚಾಲ್ ಅವರಿಗೆ ಧನ್ಯವಾದ ಸಲ್ಲಿಸಿದರು.‌

 

ಆರೋಗ್ಯ ಇಲಾಖೆ ಆಯುಕ್ತ ರಂದೀಪ್, ಅಷ್ಟ್ರಾಜೆನಿಕಾ ಸಂಸ್ಥೆಯ ಸಂಜೀವ್ ಪಾಂಚಾಲ್ ಅವರು ಪರಸ್ಪರ ಒಡಂಬಡಿಕೆ ಹಸ್ತಾಂತರಿಸಿಕೊಂಡರು.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top