ಬಳ್ಳಾರಿ: ಬೀದರ್ ನ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ಶನಿವಾರ ಜರುಗಿದ ಭಾರತೀಯ ವೈದ್ಯಕೀಯ ಸಂಘದ(ಐಎಂಎ) 89ನೇ ರಾಜ್ಯ ಸಮ್ಮೇಳನದಲ್ಲಿ ಕನ್ನಡಪ್ರಭ ದಿನ ಪತ್ರಿಕೆಯ ಬಳ್ಳಾರಿ ಜಿಲ್ಲಾ ಪ್ರಧಾನ ವರದಿಗಾರ ಕೆ.ಎಂ.ಮಂಜುನಾಥ್ ಅವರಿಗೆ ರಾಜ್ಯಮಟ್ಟದ ಪತ್ರಿಕೋದ್ಯಮ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಅರಣ್ಯ ಸಚಿವ ಈಶ್ವರ ಖಂಡ್ರೆ ಹಾಗೂ ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಪದಾಧಿಕಾರಿಗಳು ಸಮಾರಂಭದಲ್ಲಿ ಪಾಲ್ಗೊಂಡು ಕೆ.ಎಂ.ಮಂಜುನಾಥ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ಇದೇ ವೇಳೆ ಮಂಜುನಾಥ್ ಅವರ ಪತ್ರಿಕೋದ್ಯಮ ಸೇವೆಯನ್ನು ಸ್ಮರಿಸಿದ ಗಣ್ಯರು, ಪತ್ರಕರ್ತರು ಮತ್ತಷ್ಟೂ ವಸ್ತುನಿಷ್ಠ ವರದಿಗಳ ಮೂಲಕ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡೂರಾವ್, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಮಾಜಿ ಶಾಸಕ ವಿಜಯಸಿಂಗ್, ಐಎಂಎ ರಾಷ್ಟ್ರೀಯ ನಿಯೋಜಿತ ಅಧ್ಯಕ್ಷ ಡಾ. ಆರ್‌ವಿ ಅಶೋಕನ್, ರಾಜ್ಯಾಧ್ಯಕ್ಷ ಡಾ. ಶಿವಕುಮಾರ ಲಕ್ಕೋಳ್, ಐಎಂಎ ರಾಜ್ಯ ಕಾರ್ಯದರ್ಶಿ ಡಾ. ಕರುಣಾಕರ ಬಿ.ಪಿ, ಚುನಾಯತ ಅಧ್ಯಕ್ಷ ಡಾ. ವಿ.ಪಿ ಚಿನ್ನಿವಾಲರ್, ಶಿಷ್ಟಾಚಾರ ಅಧಿಕಾರಿ ಡಾ. ಯೋಗಾನಂದ ರೆಡ್ಡಿ, ಡಾ.ಮಧುಸೂದನ್ ಕಾರಿಗನೂರು,
ಬೀದರ್‌ನ ಡಾ. ಚಂದ್ರಕಾಂತ ಗುದಗೆ, ಡಾ. ವಿಜಯಶ್ರೀ ಬಶೆಟ್ಟಿ ಹಾಗೂ ಡಾ. ಮಲ್ಲಿಕಾರ್ಜುನ ಪನಶೆಟ್ಟಿ ಸೇರಿದಂತೆ ಮತ್ತಿತರರು ಇದ್ದರು.
ಪತ್ರಕರ್ತ ಕೆ.ಎಂ.ಮಂಜುನಾಥ್ ಅವರು ಕಳೆದ ಹದಿನೇಳು ವರ್ಷಗಳಿಂದ ಪತ್ರಿಕೋದ್ಯಮ ಕ್ಷೇತ್ರದ ಸೇವೆಯಲ್ಲಿದ್ದು, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದು ಕಳೆದ 7 ವರ್ಷಗಳಿಂದ ಕನ್ನಡಪ್ರಭ ಬಳ್ಳಾರಿ ಜಿಲ್ಲಾ ಪ್ರಧಾನ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶೋಷಿತ ಸಮುದಾಯಗಳು ಎದುರಿಸುವ ಅನೇಕ ಸಮಸ್ಯೆಗಳ ಕುರಿತು ತಮ್ಮ ವಸ್ತುನಿಷ್ಠ ವರದಿಗಳ ಮೂಲಕ ಬೆಳಕು ಚೆಲ್ಲಿದ್ದಾರೆ. ಅಭಿವೃದ್ಧಿ ಪತ್ರಿಕೋದ್ಯಮದ ಬಗ್ಗೆ ಹೆಚ್ಚು ಆಸ್ಥೆವಹಿಸಿ ಕಳೆದ ಒಂದೂವರೆ ದಶಕಕ್ಕೂ ಹೆಚ್ಚು ಕಾಲ ಪತ್ರಿಕೋದ್ಯಮ ಸೇವೆಯಲ್ಲಿ ನಿರತ ರಾಗಿರುವ ಮಂಜುನಾಥ್ ಅವರ ಸೇವೆಯನ್ನು ಪರಿಗಣಿಸಿ ರಾಜ್ಯ ಮಟ್ಟದ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.