ಬಳ್ಳಾರಿ: ಅಧಿಕ ಲಾಭಾಂಶದ ಆಮಿಷವೊಡ್ಡಿ, ಅಕ್ರಮವಾಗಿ ಚೀಟಿ ವ್ಯವಹಾರ ನಡೆಸುತ್ತ, ಹಣ ಪಡೆದು ವಂಚಿಸುತ್ತಿದ್ದ ‘ಸ್ವಗೃಹ ಹೋಮ್ ನೀಡ್ಸ್ ಮಳಿಗೆ’ಯ ಮಾಲೀಕ ವಿಶ್ವನಾಥ್ ಪರಾರಿಯಾಗಿದ್ದು, ಹಣ ಕಟ್ಟಿದ್ದ ಜನ ಕಂಗಾಲಿದ್ದಾರೆ.
ಹೀಗಾಗಿ ಸ್ವಗೃಹ ಹೋಮ್ ನೀಡ್ಸ್ ಕಚೇರಿ ಎದುರು ಜನ ಜಾತ್ರೆಯೇ ಸೇರಿತ್ತು. ಎಲ್ಲರೂ ತಮಗೆ ಮೋಸವಾಗಿರುವುದಾಗಿ ವಿಶ್ವನಾಥ್‌ಗೆ ಶಪಿಸುತ್ತಿದ್ದ ದೃಶ್ಯ ಕಂಡು ಬಂತು. ಈ ಸಂಬAಧ ದೂರು ದಾಖಲಿಸಲು ಎಲ್ಲರೂ ಬ್ರೂಸ್ ಪೇಟೆ ಪೊಲೀಸ್ ಠಾಣೆಗೆ ತೆರಳಿದರು.
ಎಲ್ಲರಿಂದಲೂ ದಾಖಲೆ ಸಂಗ್ರಹಿಸಿರುವ ಪೊಲೀಸರು ಈಗಾಗಲೇ ದಾಖಲಾಗಿರುವ ಪ್ರಕರಣದಲ್ಲಿ ಈ ವರದಿಯನ್ನೂ ಸೇರಿಸಲು ತಯಾರಿ ನಡೆಸಿದ್ದಾರೆ. ಮಂಗಳವಾರ ಒಟ್ಟಾರೆ 100ಕ್ಕೂ ಅಧಿಕ ಮಂದಿ ದಾಖಲೆ, ರಶೀದಿಗಳನ್ನು ಪೊಲೀಸ್ ಠಾಣೆಗೆ ನೀಡಿದ್ದಾರೆ ಎಂದು ಗೊತ್ತಾಗಿದೆ. ವಿಶ್ವನಾಥ್ ಅವರಿಂದ ಯಾರಾದರೂ ವಂಚನೆಗೊಳಗಾಗಿದ್ದರೆ ಅವರೂ ರಶೀದಿ, ಆಧಾರ ಪ್ರತಿಯೊಂದಿಗೆ ದೂರು ದಾಖಲಿಸಬಹುದು ಎಂದು ಪೊಲೀಸರು ಹೇಳಿದ್ದಾರೆ.
ಕನಿಷ್ಠ 10 ಸಾವಿರದಿಂದ 5 ಲಕ್ಷದ ವರಗೆ ಸಾವಿರಾರು ಮಂದಿ ವಿಶ್ವನಾಥ್ ಚೀಟಿ ವ್ಯವಹಾರಕ್ಕೆ ಹಣ ಹೂಡಿಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.