ಪ್ರಜಾಪ್ರಭುತ್ವದಲ್ಲಿ ಮೋದಿಯವರಿಗೆ ಬದ್ಧತೆಯಿದ್ದರೆ ಮಣಿಪುರದಲ್ಲಿ ಶಾಂತಿ ನೆಲೆಸುವಂತೆ ಮಾಡಲಿ

ಬೆಂಗಳೂರು:ಪ್ರಧಾನಿ ನರೇಂದ್ರ ಮೋದಿಯವರಿಗೆ ಮತ್ತು ಭಾರತೀಯ ಜನತಾ ಪಕ್ಷದವರಿಗೆ ಸಂವಿಧಾನದಲ್ಲಿ ಮತ್ತು ಪ್ರಜಾಪ್ರಭುತ್ವದಲ್ಲಿ ಬದ್ಧತೆಯಿದ್ದರೆ ಈ ಕೂಡಲೇ ಮಣಿಪುರದ ಸರ್ಕಾರವನ್ನು ಉಚ್ಚಾಟನೆ ಮಾಡಿ, ರಾಷ್ಟ್ರಪತಿ ಆಡಳಿತವನ್ನು ಜಾರಿಗೊಳಿಸಿ ಶಾಂತಿ ಕಾಪಾಡಲಿ ಎಂದು ಮಾಜಿ ಸಂಸದರು ಹಾಗೂ ಕಾಂಗ್ರೆಸ್ ವಕ್ತಾರರಾದ ಉಗ್ರಪ್ಪನವರು ಆಗ್ರಹಿಸಿದ್ದಾರೆ.

 

ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಮಾತನಾಡಿದ ಮಾಜಿ ಸಂಸದರಾದ ಉಗ್ರಪ್ಪನವರು, “ಪ್ರಧಾನಿ ಮೋದಿಯವರು ಗಲಭೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತಿಲ್ಲ, ಪ್ರಕೃತಿ ವಿಕೋಪದಿಂದ ಅನೇಕ ಜನ ಸಾಯುತ್ತಾ ಇದ್ದಾರೆ ಅದಕ್ಕೆ ಪ್ರತಿಕ್ರಿಯಿಸಲು ಸಹ ನಮ್ಮ ಪ್ರಧಾನಿಯವರಿಗೆ ಸಮಯವಿಲ್ಲ. ‘ವೆನ್ ರೂಂ ವಾಸ್ ಬರ್ನಿಂಗ್  ನೇರೋ ಪ್ಲೇಯಿಂಗ್ ಪಿಯಾನೋ’ ಎನ್ನುವಂತೆ ಮೋದಿಯವರು ಮೆಡಲ್ ಗಳ ಜೊತೆಗೆ ಆಟವಾಡುತ್ತಿದ್ದಾರೆ. ನೆನ್ನೆ ತಿಲಕರ ಮೆಡಲ್ ಪಡೆಯಲು ಪೂನಾಗೆ ಹೋಗಿದ್ದಾರೆ. ಆದರೆ ಈ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಸಲಿಕ್ಕೆ ಬದ್ದತೆ ಇರುವಂತಹ ರಾಜಕಾರಣಿಯಾಗಿ ಅವರು ನನಗೆ ಕಾಣುತ್ತಿಲ್ಲ. ಈ ದೇಶ ಕಂಡಂತಹ ಅತ್ಯಂತ ಶೋಕಿಲಾಲ್ ಪ್ರಧಾನಿ ಯಾರಾದರೂ ಇದ್ದರೆ ಅದು ಮಿಸ್ಟರ್ ಮೋದಿ.” ಎಂದು ಟೀಕಿಸಿದರು.

 

“ನಾನು ಇವತ್ತು ಮನೆಯಿಂದ ಹೊರಡುವಾಗ ಯಾರೋ ಕೆಲವು ಹೆಣ್ಣು ಮಕ್ಕಳು ಕೆಲವು ಸಮಸ್ಯೆಗಳನ್ನು ತೆಗೆದುಕೊಂಡು ಬಂದಿದ್ದರು ನಾನು ಪೇಪರ್ ಓದುತ್ತಿರುವಾಗ ಅವರು ಹೇಳಿದರು ‘ಸರ್ ಅವರ ತನ್ನ ಕುಟುಂಬದವರನ್ನೇ ಪಾಲನೆ, ಪೋಷಣೆ ಮತ್ತು ರಕ್ಷಣೆ ಮಾಡದೇ ಇರುವಂತಹ ಪ್ರಧಾನಿಗಳು,  ಇನ್ನು ದೇಶದ, ಮಣಿಪುರವೋ, ಹರಿಯಾಣವೋ, ಅಥವಾ ಈ ದೇಶದ ಹೆಣ್ಣು ಮಕ್ಕಳ ರಕ್ಷಣೆ ಮಾಡಲಿಕ್ಕೆ ಅವರಿಂದ ಸಾಧ್ಯವೇ’ ಎಂದು ನನ್ನ ಗಮನಕ್ಕೆ ತಂದರು. ನನಗೆ ಇದು ನಿಜಕ್ಕು ಸತ್ಯವಾದ ಮಾತು ಎನಿಸುತ್ತಿದೆ. ನಿಜಕ್ಕು ನಮ್ಮ ಸಂವಿಧಾನದ ಮೇಲೆ ಬದ್ಧತೆ ಇದ್ದರೆ ಮೊದಲು ಪ್ರಧಾನಿಯವರು ಪಾರ್ಲಿಮೆಂಟಿಗೆ ಹಾಜಾರಾಗಬೇಕು. ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿರುವ ಅಭಿಪ್ರಾಯದಂತೆ ಸಂವಿಧಾನದ ಸಂಸ್ಥೆಗಳು ಮುರಿದು ಬಿದ್ದಿರುವ ಹಿನ್ನಲೆಯಲ್ಲಿ ಮಣಿಪುರ ಸರ್ಕಾರವನ್ನು ಉಚ್ಚಾಟನೆ ಮಾಡಿ ರಾಷ್ಟ್ರಪತಿ ಆಡಳಿತವನ್ನು ತಂದು ಅಲ್ಲಿರುವಂತಹ ಎಲ್ಲಾ ಜನರ ರಕ್ಷಣೆ ಮಾಡಬೇಕಾದಂತಹ ಕೆಲಸ ಮಾಡಬೇಕು ಮತ್ತು ಯಾರೆಲ್ಲಾ ತಪ್ಪಿತಸ್ಥರು ಇದ್ದಾರೆ ಅಂತವರಿಗೆ ಕಠಿಣ ಶಿಕ್ಷೆ ವಿಧಿಸಬೇಕು” ಎಂದು ಒತ್ತಾಯಿಸಿದರು.

 

“ನಿರ್ಭಯ ಪ್ರಕರಣ ಹಾಗೂ ಬೆಂಗಳೂರಿನಲ್ಲಿ ಒಂದಷ್ಟು ಅತ್ಯಾಚಾರ ಪ್ರಕರಣಗಳು ಆದಂತಹ ಸಂಧರ್ಭದಲ್ಲಿ ಬಿಜೆಪಿ ಮುಖಂಡರುಗಳು ಏನೆಲ್ಲಾ ಮಾತನಾಡಿದ್ದರು. ಆ ವಿಚಾರದಲ್ಲಿ ನನ್ನ ನೇತೃತ್ವದಲ್ಲಿ ಒಂದು ಸಮಿತಿಯನ್ನು ಮಾಡಿ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಶೋಷಣೆ, ಅತ್ಯಾಚಾರದ ಬಗ್ಗೆ ಆರು ಸಾವಿರ ಪುಟಗಳ ವರದಿಯನ್ನು ಸರ್ಕಾರಕ್ಕೆ 24 ಮಾರ್ಚ್ 2018 ರಲ್ಲಿ ಮಂಡಿಸಿದ್ದೇನೆ.

“ಅಧಿಕಾರ ಯಾರಿಗೂ ಶಾಶ್ವತ ಅಲ್ಲ ಮಿಸ್ಟರ್ ಮೋದಿ. ಈ ದೇಶ ಶಾಶ್ವತ, ನಮ್ಮ ಸಂವಿಧಾನ ಶಾಶ್ವತ. ಈ ದೇಶದ ಜನರಿಗೆ ರಕ್ಷಣೆ ಮಾಡುವಂತಹದ್ದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿರುತ್ತದೆ. ಇದು ಆಗಲಿಲ್ಲ ಎಂದ ಮೇಲೆ ಒಂದು ಪಾರ್ಲಿಮೆಂಟ್ ಗೆ ಹಾಜಾರಾಗಬೇಕು, ಎರಡನೆಯದು ಮಣಿಪುರದ ಜನರಿಗೆ ರಕ್ಷಣೆ ನೀಡಬೇಕು ಆ ಸರ್ಕಾರ ವಿಫಲ ಆಗಿರೋದ್ರಿಂದ ಈ ಕೂಡಲೆ ಆ ಸರ್ಕಾರವನ್ನು ಉಚ್ವಾಟನೆ ಮಾಡಿ ಅಲ್ಲಿ ರಕ್ಷಣೆಯ ದೃಷ್ಟಿಯಿಂದ ಹೊಸ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸುತ್ತೇವೆ” ಎಂದರು.

 

“ಮಣಿಪುರದ ತನಿಖೆಯನ್ನು ಸಹ ನಡೆಸಿದ ಸುಪ್ರೀಂ ಕೋರ್ಟ್ ಅನ್ನು ನಾನು ಈ ಮೂಲಕ ಅಭಿನಂದಿಸುತ್ತೇನೆ. ಅವರ ಮಾರ್ಗದರ್ಶನದಲ್ಲಿ ಅಲ್ಲಿಯ ಪ್ರತಿಯೊಬ್ಬ ಪ್ರಜೆಯ ಮೂಲಭೂತ ಹಕ್ಕುಗಳ ರಕ್ಷಣೆ ಮಾಡತಕ್ಕಂತಹ ಪೋಲಿಸ್ ಇಲಾಖೆ ಅಥವಾ ಯಾವ ವ್ಯವಸ್ಥೆಯಿಂದ ನಿಯಂತ್ರಣಕ್ಕೆ ತರುತ್ತಾರೋ ಅದು ಸುಪ್ರೀಂ ಕೋರ್ಟ್ ಹಾಗೂ ಕೇಂದ್ರ ಸರ್ಕಾರಕ್ಕೆ ಬಿಟ್ಟದ್ದು. ಆದರೆ ಇಷ್ಟು ಹೇಳಬಲ್ಲೆ, ಈ ದೇಶದ ಒಬ್ಬ ಪ್ರಜೆಯಾಗಿ ಈ ದೇಶದಲ್ಲಿ ಒಂದಷ್ಟು ದಿವಸ ನಾನು ಪಾರ್ಲಿಮೆಂಟ್ ಸದಸ್ಯನಾಗಿ ಕೆಲಸ ಮಾಡಿರುವುದರಿಂದ ನಾನು ಅತ್ಯಂತ ಆಗ್ರಹಪೂರ್ವಕವಾಗಿ ನಮ್ಮ ಪಕ್ಷದ ಪರವಾಗಿ ಕೇಂದ್ರ ಸರ್ಕಾರವನ್ನು ಮುಖ್ಯವಾಗಿ ಪ್ರಧಾನಿಯವರನ್ನು ಮತ್ತು ರಾಷ್ಟ್ರಪತಿಗಳನ್ನು ಒತ್ತಾಯ ಮಾಡುತ್ತಾ ಈ ದಿಕ್ಕಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಒತ್ತಾಯಿಸುತ್ತೇನೆ. ಇಲ್ಲದಿದ್ದರೆ ಜನರ ತಾಳ್ಮೆಯನ್ನು ಪರೀಕ್ಷೆ ಮಾಡುವುದಕ್ಕೆ ಹೋದರೆ ಈ ದೇಶದ ಜನ ನಿಮಗೆ ಬುದ್ಧಿ ಕಲಿಸಿ ಮನೆಗೆ ಕಳಿಸುವ ದಿನಗಳು ದೂರವಿಲ್ಲ ಎಂದು ಎಚ್ಚರಿಕೆ ನೀಡಿದರು.

 

ಮಾಜಿ ವಿಧಾನ ಪರಿಷತ್ ಸದಸ್ಯರಾದ ಹೆಚ್. ಎಂ ರೇವಣ್ಣನವರು ಮಾತನಾಡಿ, “ಈ ರಾಷ್ಟ್ರದಲ್ಲಿ ವಿರೋಧ ಪಕ್ಷಗಳನ್ನು ಮಾನ್ಯ ಮೋದಿಯವರು ಯಾವ ರೀತಿ ನಡೆಸಿಕೊಳ್ಳುತ್ತಿದ್ದಾರೆ, ನೋಡುತ್ತಿದ್ದಾರೆ ಎಂಬುದನ್ನು ಮಾಧ್ಯಮದ ಗಮನಕ್ಕೆ ತರಲು ಇಷ್ಟ ಪಡುತ್ತೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಎರಡು ಬಲಿಷ್ಠವಾಗಿ ಇದ್ದಂತಹ ಸಂಧರ್ಭದಲ್ಲಿ ಮಾತ್ರ ರಾಷ್ಟ್ರ ಏಳಿಗೆಯನ್ನು ಸಾಧಿಸುತ್ತೆ ಮತ್ತು ಪ್ರಜಾಪ್ರಭುತ್ವಕ್ಕೆ ಒಳ್ಳೆಯ ಗೌರವ ಸಿಗುತ್ತೆ. ಅದರೆ ಇವತ್ತು ಏನು ಭಾರತದ ಪ್ರಧಾನಿಗಳಾದ ಮೋದಿಯವರು ವಿರೋಧ ಪಕ್ಷಗಳು ಒಗ್ಗೂಡುವಂತಹ ಸಂಧರ್ಭದಲ್ಲಿ, ಯಾವತ್ತೂ ಯಾವ ವಿಷಯಕ್ಕೂ ಮಾತನಾಡದೆ ಪ್ರಚಲಿತ ವಿಷಯಗಳ ಕುರಿತು ಚರ್ಚೆಯೇ ಮಾಡದಿರುವಂತಹ ಈ ಮೋದಿಯವರು ವಿರೋಧ ಪಕ್ಷದವರು ಒಗ್ಗಟ್ಟಾಗುತ್ತಿರುವ ಒಂದೇ ಉದ್ದೇಶಕ್ಕೆ ಅವರನ್ನು ತೆಗಳುವಂತಹ, ಅವರನ್ನು ಒಂದು ರೀತಿ ದೇಶದ್ರೋಹಿಗಳು, ಭ್ರಷ್ಟರು ಎನ್ನುವ ರೀತಿಯಲ್ಲಿ ಮಾತನಾಡುತ್ತಿರುವುದು ಎಷ್ಟು ಸಮಂಜಸ ಎಂದು ನಾನು ಮಾಧ್ಯಮದ ಮೂಲಕ ಪ್ರಶ್ನಿಸುತ್ತಿದ್ದೇನೆ” ಎಂದರು. 

ಮುಂದುವರೆದು ಮಾತನಾಡುತ್ತಾ “ಇವತ್ತು ಇಂಡಿಯಾ ಎಂದು ಸ್ಥಾಪನೆಯಾಗಿದೆ. ಈ ಹಿಂದೆನೂ ಈ ರೀತಿ ನಡೆದಿರುವಂತಹ ಅನೇಕ ಸಂಧರ್ಭಗಳಿವೆ ಆದರೆ ಈಗಲೂ ಕೂಡ ಕೇಂದ್ರದಲ್ಲಿ ಇರುವಂತಹದ್ದು ಎನ್‌ಡಿ‌ಎ ಸಮಿಶ್ರ ಸರ್ಕಾರವೇ, ಈ ಹಿಂದೆ ಯುಪಿಎ ಇತ್ತು. ಇವತ್ತಿನ ಪರಿಸ್ಥಿತಿಯಲ್ಲಿ ಇಂಡಿಯಾ ಎಂದು ಮಾಡಿಕೊಂಡ ಸಂಧರ್ಭದಲ್ಲಿ ಅದನ್ನು ಯಾವುದಕ್ಕೆ ಹೋಲಿಸುತ್ತಿದ್ದಾರೆ ಈ ಮೌನೇಶ್ವರ ಎಂಬುದನ್ನು ತಾವೆಲ್ಲಾ ಕಂಡಿದ್ದೀರಿ. ಇದನ್ನು ಪಿಎಫ್‌ಐ ಎನ್ನೋದು ಅಥವಾ ಇಸ್ಟ್ ಇಂಡಿಯಾ ಕಂಪನಿ ಎನ್ನೋದು, ಇಂಡಿಯಾ ಅಂದ್ರೆ ಲೂಟ್ ಎನ್ನುವಂತಹ ಮಾತುಗಳನ್ನು ಆಡುತ್ತಿರುವುದು ವಿಷಾದನೀಯ” ಎಂದರು.

 “ಇಂತಹ ಎಷ್ಟು ಘಟನೆಗಳು ನಡೆದಿದೆ, ರೈತರು ಎಷ್ಟು ತಿಂಗಳುಗಳ ಕಾಲ ಈ ರಾಷ್ಟ್ರದಲ್ಲಿ ಪ್ರತಿಭಟನೆಯನ್ನು ಮಾಡಿದರು, ಎಷ್ಟು ಜನ ಪ್ರಾಣ ಕೊಟ್ಟರು ಅವತ್ತು ಇವರ ಬಳಿ ಮಾತನಾಡೋಕೆ ದನಿ ಇರಲಿಲ್ಲ. ಉತ್ತರ ಪ್ರದೇಶದಲ್ಲಿ ಎಷ್ಟೊಂದು ಘಟನೆಗಳು ಜರುಗಿದವು ಅಲ್ಲಿ ಹರಿಜನರು, ಮಹಿಳೆಯರ ಮೇಲೆ ಆದಂತಹ ದೌರ್ಜನ್ಯಕ್ಕೆ ಇವರಿಂದ ಮಾತಿಲ್ಲ. ಆದರೆ ಇವತ್ತು ವಿರೋಧ ಪಕ್ಷದವರ ಮೇಲೆ ಅವರು ಸಂಘಟನೆ ಆಗುತ್ತಿದ್ದಾರೆ ಎಂದ ಕೂಡಲೆ ಇವರೂ ಸಹ ಒಂದು ಸಂಘಟನೆ ಮಾಡಿದ್ದಾರೆ ಆದರೆ ಆ ಸಂಘಟನೆಯಲ್ಲಿ ಯಾರ್ಯಾರು ಇದ್ದಾರೆ ಎಂದು ತಾವು ನೋಡಿರಬಹುದು. ಪಕ್ಷವೇ ಇಲ್ಲದ ಸಂಘಟನೆಗಳನ್ನು ಸೇರಿಸಿಕೊಂಡು ಪಕ್ಷ ಸಂಘಟನೆ ಮಾಡುತ್ತಿರುವ ಈ ಸಂಧರ್ಭದಲ್ಲಿ ರಾಷ್ಟ್ರೀಯ ಪಕ್ಷಗಳು ಒಗ್ಗಟ್ಟಾಗುತ್ತಿರುವುದನ್ನು ಖಂಡಿಸುತ್ತಾ ಇರುವಂತಹದ್ದು ಪ್ರಜಾಪ್ರಭುತ್ವದಲ್ಲಿ ಎಷ್ಟು ಸರಿ?. ಇದು ಬಹಳ ದಿನ ನಡೆಯಲ್ಲ, ಜನ ನೋಡುತ್ತಾ ಇದ್ದಾರೆ. ಮೋದಿಯವರ ವ್ಯಕ್ತಿತ್ವ ಕಡಿಮೆಯಾಗುತ್ತಿರುವ ಸಂಧರ್ಭದಲ್ಲಿ ಬೇರೆ ಬೇರೆ ನಾಟಕಗಳನ್ನು ಪ್ರಾರಂಭ ಮಾಡಿದ್ದಾರೆ ಇದು ನಡೆಯಲ್ಲ, ಈ ರೀತಿಯ ವರ್ತನೆಯನ್ನು ನಾವು ಖಂಡಿಸುತ್ತೇವೆ” ಎಂದರು.

ಈಶ್ವರ್ ಖಂಡ್ರೆ, ಪ್ರಿಯಾಂಕ ಖರ್ಗೆಯವರು ಬಿಜೆಪಿಗರ ವಿರುದ್ಧ ನೀಡಿರುವ ಹೇಳಿಕೆಯನ್ನು ಪ್ರಸ್ತಾಪಿಸಿದ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಉಗ್ರಪ್ಪನವರು.

“ಮೋದಿಯವರು ನಾವು ಕೊಟ್ಟ ಐದು ಗ್ಯಾರಂಟಿಗಳ ಬಗ್ಗೆ ಮಾತನಾಡುತ್ತಾರೆ ಅದೇ ಮಣಿಪುರದ ಬಗ್ಗೆ ಮಾತನಾಡುವುದಿಲ್ಲ. ನೆನ್ನೆ ಪೂನಕ್ಕೆ ಹೋಗಿ ನಮ್ಮ ರಾಜ್ಯದ ಐದು ಗ್ಯಾರೆಂಟಿಗಳ ಬಗ್ಗೆ ಮಾತನಾಡಿ, ತೆಗಳಿದ್ದಾರೆ. ನಾನು ಇಷ್ಟು ಹೇಳಬಲ್ಲೇ, ನಮ್ಮ ರಾಜ್ಯದ ಇತಿಹಾಸದಲ್ಲೇ ಅತ್ಯಂತ ಜನಪರವಾದಂತಹ ಕಾರ್ಯಕ್ರಮಗಳೇನಾದರೂ ರೂಪಿಸಿದ್ದರೆ ಅದು ಅನೇಕ ಯೋಜನೆಗಳು ಸೇರಿದಂತೆ ಈ ಪ್ರಮುಖವಾದ ಐದು ಗ್ಯಾರಂಟಿಗಳು. ಇದನ್ನು ಸಹಿಸಿಕೊಳ್ಳೋಕೆ ಆಗದಂತಹ ಮನಸ್ಥಿತಿ ಭಾರತೀಯ ಜನತಾ ಪಾರ್ಟಿಯವರಲ್ಲಿ ಮತ್ತು ಪ್ರಧಾನ ಮಂತ್ರಿಯವರಲ್ಲಿ ಇದೆ. ನೀವು ಏನೆಲ್ಲಾ ಆಶ್ವಾಸನೆಗಳನ್ನು ಕೊಟ್ಟಿದ್ದಿರಿ, ಕಪ್ಪು ಹಣ ವಾಪಸ್ಸು ತಂದು ಹದಿನೈದು ಲಕ್ಷ ಹಾಕ್ತಿವಿ ಎಂದಿದ್ದಿರಿ, ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡ್ತಿವಿ ಎಂದು ಹೇಳಿದ್ದಿರಿ, 2022ರ ವೇಳೆಗೆ ಈ ದೇಶದಲ್ಲಿ ಎಲ್ಲರಿಗೂ ಮನೆ ಕೊಡುತ್ತೇವೆ ಎಂದಿದ್ದಿರಿ, ಎಲ್ಲರಿಗೂ ಕುಡಿಯುವ ನೀರಿನ ಸಂಪರ್ಕ, ಬೆಲೆಗಳನ್ನು ಕಡಿಮೆ ಮಾಡುತ್ತೇವೆ ಎಂದು ಹೇಳಿ  ಯಾವುದನ್ನು ಮಾಡಲಿಕ್ಕೆ ನಿಮ್ಮಿಂದ ಆಗಲಿಲ್ಲ” ಎಂದು ಟೀಕಿಸಿದರು.

 “ಇವತ್ತು ರಾಜ್ಯವ್ಯಾಪಿ ಸನ್ಮಾನ್ಯ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ಸಿನ ಸರ್ಕಾರ, ಸನ್ಮಾನ್ಯ ಡಿ.ಕೆ ಶಿವಕುಮಾರ್‌ರವರ, ಸನ್ಮಾನ್ಯ ಖರ್ಗೆಯವರ, ಶ್ರೀಮತಿ ಸೋನಿಯಾ ಗಾಂಧಿಯವರ, ರಾಹುಲ್ ಗಾಂಧಿಯವರ, ಹಾಗೂ ಪ್ರಿಯಾಂಕ ಗಾಂಧಿಯವರ ಮಾರ್ಗದರ್ಶನದಲ್ಲಿ ಇಡೀ ದೇಶ ಮೆಚ್ಚುವಂತಹ ಜನಪರವಾದಂತಹ ಕಾರ್ಯಕ್ರಮಗಳನ್ನು ಕೊಟ್ಟಿದ್ದಾರೆ. ಇದನ್ನು ಪೂನಾಕ್ಕೆ ಹೋಗಿ ವ್ಯಂಗ್ಯ ಮಾಡುವಂತಹ ಸಣ್ಣತನ ರಾಜಕಾರಣದಲ್ಲಿ ಇವತ್ತು ಮೋದಿಯವರು ತೋರುತ್ತಿದ್ದಾರೆ. ನಾನು ಬೇರೆ ವಿಷಯಗಳನ್ನು ಬೆರೆಸದೆ ಮಿಸ್ಟರ್ ಮೋದಿಯವರಿಗೆ ಮತ್ತು ಬಿಜೆಪಿಗರಿಗೆ ಕೇಳುವುದು ನೀವು ಸಂವಿಧಾನಕ್ಕೆ ಮತ್ತು ಪ್ರಜಾಪ್ರಭುತ್ವಕ್ಕೆ ಬದ್ಧವಾಗಿದ್ದರೆ ಈ ಕೂಡಲೆ ಮಣಿಪುರದಲ್ಲಿ ಶಾಂತಿ, ಸೌಹಾರ್ಧತೆಯಿಂದ ಬದುಕುವಂತಹ ಸಮಾಜವನ್ನು ಸೃಷ್ಟಿ ಮಾಡಬೇಕು” ಎಂದು ಆಗ್ರಹಿಸಿದರು.

Facebook
Twitter
LinkedIn
WhatsApp
Telegram
Email

Leave a Comment

Your email address will not be published. Required fields are marked *

Translate »
Scroll to Top