ಬೆಂಗಳೂರು : ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದಿದ್ದೆ ವಾಮವಾರ್ಗ ಹಾಗೂ ಭ್ರಷ್ಟಾಚಾರದಿಂದ. ಬಿಜೆಪಿಯವರು ಹೇಳೋದೆಲ್ಲಾ ತತ್ವ ಸಿದ್ಧಾಂತ ಆದರೆ ಮಾಡೋದು ಭ್ರಷ್ಟಾಚಾರ. ಈಗ ಅನೇಕ ವಿಚಾರಗಳಲ್ಲಿ ಸರ್ಕಾರದ ಅಕ್ರಮ ಬಗ್ಗೆ ಚರ್ಚೆ ಆಗುತ್ತಿದೆ. ದುರ್ದೈವ ಸಂಗತಿ ಏನೆಂದರೆ ಬೇರೆ ಇಲಾಖೆಯಲ್ಲಿ ಭ್ರಷ್ಟಾಚಾರಕ್ಕೆ ಹಾಗೂ ಶಿಕ್ಷಣ ಇಲಾಖೆ ಭ್ರಷ್ಟಾಚಾರಕ್ಕೆ ಬಹಳ ವ್ಯತ್ಯಾಸವಿದೆ. ಈ ಇಲಾಖೆಯಲ್ಲಿ ಅನರ್ಹರು ಹುದ್ದೆ ಅಲಂಕರಿಸಿದರೆ, ದೇಶದ ಭವಿಷ್ಯಕ್ಕೆ ಮಾರಕವಾಗುತ್ತದೆ. ಬಿಜೆಪಿ ಸರ್ಕಾರ ಲ್ಯಾಪ್ ಟಾಪ್ ಖರೀದಿಯಿಂದ ಸಹಾಯಕ ಪ್ರಾಧ್ಯಾಪಕ ನೇಮಕಾತಿ ಅಕ್ರಮದವರೆಗೂ ಪ್ರತಿ ಹಂತದಲ್ಲೂ ಭ್ರಷ್ಟಾಚಾರ ನಡೆದಿದೆ. ಲ್ಯಾಪ್ ಟಾಪ್ ವಿತರಣೆಯಲ್ಲಿ ಅತ್ಯಂತ ದೊಡ್ಡ ಭ್ರಷ್ಟಾಚಾರ ನಡೆದಿದೆ. 2016-17 ಹಾಗೂ 2017-18ನೇ ಸಾಲಿನಲ್ಲಿ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ನಾನು ಸಚಿವನಾಗಿದ್ದಾಗ, ಪಾಲಿಟೆಕ್ನಿಕ್ ಹಾಗೂ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ತಾಂತ್ರಿಕ ಶಿಕ್ಷಣ ಪಡೆಯುತ್ತಿರುವ ಪರಿಶಿಷ್ಟ ವಿದ್ಯಾರ್ಥಿಗೆ ಉಚಿತ 8 ಸಾವಿರ ಲ್ಯಾಪ್ ಟಾಪ್ ನೀಡಿದ್ದೆವು. ಸದ್ಯ 412 ಸರ್ಕಾರಿ ಕಾಲೇಜುಗಳಿದ್ದು, ಈ ಸರ್ಕಾರಿ ಮಹಾವಿದ್ಯಾಲಯದಲ್ಲಿ ಓದುತ್ತಿರುವ ಮೊದಲ ಪದವಿ ವಿದ್ಯಾರ್ಥಿಗಳಿಗೆ ಪರಿಶಿಷ್ಟ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ನೀಡಲು ನಿರ್ಧರಿಸಿದ್ದೆವು. ಅದರಂತೆ ಟೆಂಡರ್ ಕರೆದಿದ್ದು, 3 ಮಂದಿ ಗುತ್ತಿಗೆಗೆ ಅರ್ಜಿ ಪೈಕಿ ಏಸರ್ ನೈನ್ ರಿಚ್ ಇನ್ಫೋಟೆಕ್ ಕಂಪನಿ 14,490 ರೂ. ಕೋಟ್ ಮಾಡಿದ್ದು, ಅವರು ಎಲ್ 1 ಆಗಿದ್ದ ಕಾರಣ ಅವರು ಈ ಗುತ್ತಿಗೆ ಪಡೆದಿದ್ದರು. ಕಾಲೇಜು ಶಿಕ್ಷಣದಲ್ಲಿ 30 ಸಾವಿರ ವಿದ್ಯಾರ್ಥಿಗಳಿಗೆ ಇದೇ ದರದಲ್ಲಿ ಒಟ್ಟು 38 ಸಾವಿರ ಲ್ಯಾಪ್ ಟಾಪ್ ಗಳನ್ನು ಈ ದರದಲ್ಲಿ ನೀಡಿದ್ದೇವೆ.
2018-19ನೇ ಸಾಲಿನಲ್ಲಿ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸಿದಾಗ ಎಲ್ಲ ವರ್ಗದ ಅರ್ಹ (ವಾರ್ಷಿಕ 2.5 ಲಕ್ಷಕ್ಕಿಂತ ಕಡಿಮೆ ವರಮಾನವಿರುವ) ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ನೀಡಲು ತೀರ್ಮಾನಿಸಿ 300 ಕೋಟಿ ಒದಗಿಸಿದ್ದರು. ಆಗ ಯಡಿಯೂರಪ್ಪನವರು ಹಾಗೂ ಪರಿಷತ್ ವಿರೋಧ ಪಕ್ಷದ ನಾಯಕರಾದ ಈಶ್ವರಪ್ಪನವರು ಭ್ರಷ್ಟಾಚಾರದ ಆರೋಪ ಮಾಡಿದರು. ನಾವು ಟೆಂಡರ್ ಕರೆಯದೇ ಅಕ್ರಮ ಹೇಗೆ ಮಾಡಲು ಸಾಧ್ಯ ಎಂದು ಹೇಳಿದರೂ ಪಟ್ಟು ಬಿಡಲಿಲ್ಲ. ನಂತರ ಸದನ ಸಮಿತಿಗೆ ಆಗ್ರಹಿಸಿದ ಕಾರಣ ಕೊಂಡಯ್ಯ ಅವರ ನೇತೃತ್ವದಲ್ಲಿ ಸಮಿತಿ ಮಾಡಿದರು. ನಂತರ ಇಲ್ಲಿ ಟೆಂಡರ್ ಕರೆದಿಲ್ಲ, ಹೀಗಾಗಿ ಯಾವುದೇ ಅಕ್ರಮ ನಡೆದಿಲ್ಲ ಎಂದರು. ಆದರೆ ಚುನಾವಣೆ ವರ್ಷವಾಗಿದ್ದರಿಂದ ಟೆಂಡರ್ ಕರೆಯಲಾಗಿರಲಿಲ್ಲ. ನಂತರ ಚುನಾವಣೆ ನಡೆದು ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗ ಜಿ.ಟಿ. ದೇವೇಗೌಡ ಅವರು ಉನ್ನತ ಶಿಕ್ಷಣ ಸಚಿವರಾಗಿದ್ದರು. ಆಗ ನಾವು ಕೊಟ್ಟಿದ್ದ 14,490 ರೂ.ಗೆ ನೀಡಿದ್ದ ಲ್ಯಾಪ್ ಟಾಪ್ ಅನ್ನು 28,320 ರೂ.ಗೆ ಎಲ್1 ಟೆಂಡರ್ ಆಯಿತು. ಎಲ್1 ಆದ ಕಾರಣ ಅಧಿಕಾರಿಗಳು ಅದನ್ನು ಮಾನ್ಯ ಮಾಡಿದ್ದರು. ಆದರೆ ನಂತರದ ದಿನಗಳಲ್ಲಿ ಸಮ್ಮಿಶ್ರ ಸರ್ಕಾರ ಪತನವಾಯಿತು. ನಂತರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಆಗಿನ ಉಪಮುಖ್ಯಮಂತ್ರಿಯಾಗಿದ್ದ ಅಶ್ವತ್ಥ್ ನಾರಾಯಣ ಅವರೇ ಉನ್ನತ ಶಿಕ್ಷಣ ಸಚಿವರಾಗಿದ್ದರು. ಆಗ ನಾವು ಅವರಿಗೆ ಮಾಹಿತಿ ನೀಡಿ, ನಾವು ಕೊಟ್ಟ ಲ್ಯಾಪ್ ಟಾಪ್ ಮಾದರಿಯಲ್ಲೇ ಈ ಲ್ಯಾಪ್ ಟಾಪ್ ಇದ್ದು, ದರ ದುಪ್ಪಟ್ಟಾಗಿದೆ ಎಂಬ ಮಾಹಿತಿ ಗಮನಕ್ಕೆ ತಂದಿದ್ದೆವು.
ಆ ಟೆಂಡರ್ ಒಪ್ಪಿಗೆಯಾಗಿದ್ದರೂ ಅದು 10 ಕೋಟಿಗಿಂತ ಹೆಚ್ಚಿನ ವ್ಯಾತ್ಯಾಸ ಇದ್ದ ಕಾರಣ ಇದು ಸಂಪುಟ ಸಭೆಗೆ ಬರಲಿದೆ. ಅಲ್ಲಿ ಇದಕ್ಕೆ ಮಾನ್ಯತೆ ನೀಡದೇ ಮತ್ತೆ ಟೆಂಡರ್ ಕರೆಯುವಂತೆ ಸಲಹೆ ನೀಡಿದ್ದೆ. ಆದರೆ ಬಿಜೆಪಿ ಸರ್ಕಾರ ಇದ್ಯಾವುದನ್ನು ಪರಿಶೀಲಿಸದೇ ಈ ಹಿಂದೆ ಕರೆಯಲಾಗಿದ್ದ ಟೆಂಡರ್ ಅನ್ನೇ ಒಪ್ಪಿ ಮಾನ್ಯ ಮಾಡಿತು. ನಂತರ ನನಗೆ ಈ ಟೆಂಡರ್ ಹಾಕಿದವರು ಅಶ್ವತ್ಥ್ ನಾರಾಯಣ ಅವರ ಸಂಬಂಧಿ ಎಂಬ ಮಾಹಿತಿ ಕೇಳಿದೆ. ಇನ್ನು ಕಾಲೇಜು ಶಿಕ್ಷಣ ಆಯುಕ್ತರಾದ ಪ್ರದೀಪ್ ಕೂಡ ಸಚಿವರ ಸಂಬಂಧಿಯಾಗಿದ್ದಾರೆ. ಅವರು ಕೂಡ ಇದನ್ನು ಪರಿಶೀಲಿಸಲಿಲ್ಲ. ಇನ್ನು ನಾವು ಕೊಟ್ಟ ಲ್ಯಾಪ್ ಟಾಪ್ ಹಾಗೂ ಇವರು ಕೊಟ್ಟ ಲ್ಯಾಪ್ ಟಾಪ್ ನಡುವೆ 1 ವರ್ಷವಿದ್ದ ವಾರೆಂಟಿಯನ್ನು 3 ವರ್ಷಕ್ಕೆ ಏರಿಸಿದ್ದು, ಉಳಿದಂತೆ ಹೆಚ್ಚುವರಿಯಾಗಿ ಸಿಡಿ, ಬ್ಯಾಟರಿ ಬದಲಾವಣೆ ಹಾಗೂ ಇದನ್ನು ಮರು ಮಾರಾಟವಾಗದಂತೆ ಲೋಗೋ ಹಾಕಲಾಗಿದೆ ಎಂದು ಹೇಳಿದ್ದಾರೆ. ಆದರೆ ದರ ಮಾತ್ರ ದುಪ್ಪಟ್ಟಾಗಿದೆ. ನಾವು ಕೊಟ್ಟಿದ್ದ ದರದಲ್ಲಿ ಲ್ಯಾಪ್ ಟಾಪ್ ನೀಡಿದ್ದರೆ ಸರ್ಕಾರಕ್ಕೆ 159.26 ಕೋಟಿ ವೆಚ್ಚ ತಗುಲುತ್ತಿತ್ತು. ಆದರೆ ಬಿಜೆಪಿ ಸರ್ಕಾರ ಒಪ್ಪಿರುವ ದರಕ್ಕೆ ಖರೀದಿ ಮಾಡಿದಾಗ ಒಟ್ಟು 311.28 ಕೋಟಿ ವೆಚ್ಚ ತಗುಲಿದೆ. ಇದರಿಂದ ಒಟ್ಟು 152 ಕೋಟಿ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗಿದೆ. ಈ ವಿಚಾರವಾಗಿ ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು ಸೇರಿದಂತೆ ಪ್ರಿಯಾಂಕ್ ಖರ್ಗೆ ಹಾಗೂ ಕೃಷ್ಣ ಭೈರೇಗೊಡ ಅವರು ಈ ವಿಚಾರವಾಗಿ ಸದನದಲ್ಲಿ ಧ್ವನಿ ಎತ್ತಿದ್ದರು. ಆದರೆ ಸದನವನ್ನು ಏಕಾಏಕಿ ಮುಂದೂಡಿದ ಪರಿಣಾಮ ವಿಚಾರವನ್ನು ಅಲ್ಲಿಗೆ ಅಂತ್ಯವಾಡಿದರು.
ಈ ಲ್ಯಾಪ್ ಟಾಪ್ ಹಗರಣದ್ಲ್ಲಿ 100 ಕೋಟಿಗೂ ಹೆಚ್ಚು ಭ್ರಷ್ಟಾಚಾರ ನಡೆದಿದ್ದು, ಯಾರೆಲ್ಲಾ ಭಾಗಿಯಾಗಿದ್ದಾರೆ ಎಂದು ನನಗೆ ಗೊತ್ತಿಲ್ಲ. ನಾನು ಬೇಕಾಬಿಟ್ಟಿ ಯಾರ ಮೇಲೂ ಆರೋಪ ಮಾಡುವುದಿಲ್ಲ. ಆದರೆ ಉನ್ನತ ಶಿಕ್ಷಣ ಸಚಿವರಾಗಿರುವ ಅಶ್ವತ್ಥ್ ನಾರಾಯಣ ಅವರು ನೈತಿಕ ಹೊಣೆ ಹೊರಬೇಕು. ಇನ್ನು ಬೊಮ್ಮಾಯಿ ಅವರು ಆಗ ಗೃಹ ಸಚಿವರಾಗಿದ್ದು, ಸಂಪುಟದ ಭಾಗವಾಗಿದ್ದರು. ಈಗ ಮುಖ್ಯಮಂತ್ರಿಯಾಗಿದ್ದು, ಅವರಿಗೆ ನೈತಿಕತೆ ಇದ್ದರೆ ಈ ಪ್ರಕರಣವನ್ನು ನ್ಯಾಯಾಂಗ ತನಿಖೆ ಅಥವಾ ಲೋಕಾಯುಕ್ತ ತನಿಖೆಗೆ ನೀಡಬೇಕು. ಇದರಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಪ್ರಕರಣದಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂದು ಸಚಿವರಿಗೆ ಮಾಹಿತಿ ಇದ್ದು, ಆದರೂ ಅವರು ಮೌನವಾಗಿದ್ದಾರೆ. ಇನ್ನು ಸರ್ಕಾರ ವಿದ್ಯಾರ್ಥಿಗಳಿಗೆ 1.55 ಲಕ್ಷ ಟ್ಯಾಬ್ಲೆಟ್ ವಿತರಣೆ ನೀಡಿದ್ದು, ಅನೇಕ ವಿದ್ಯಾರ್ಥಿಗಳು ಟ್ಯಾಬ್ಲೆಟ್ ಗಳು ಕೆಲಸ ಮಾಡುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಇದು ನಿಷ್ಪ್ರಯೋಜಕವಾಗಿದೆ. ಈ ಬಗ್ಗೆಯೂ ತನಿಖೆ ಆಗಬೇಕು. ಮತ್ತೊಂದು ಪ್ರಮುಖ ವಿಚಾರ ಎಂದರೆ ಶಿಕ್ಷಣ ಇಲಾಖೆಯಲ್ಲಿ 412 ಸರ್ಕಾರಿ ಕಾಲೇಜು ಇದ್ದು, ಅದರಲ್ಲಿ ಪ್ರತಿ ವರ್ಷ ಪ್ರಾಧ್ಯಾಪಕರು ಹಾಗೂ ಪ್ರಾಂಶುಪಾಲರು ನಿವೃತ್ತಿಯಾಗುತ್ತಿರುತ್ತಾರೆ. ಇದು ಸಹಜ ಪ್ರಕ್ರಿಯೆ. ನಾನು ಸಚಿವನಾಗಿದ್ದಾಗ 2170 ಸಹಾಯಕ ಪ್ರಾಧ್ಯಾಪಕರನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮೂಲಕ ನೇಮಕ ಮಾಡಿದ್ದೆ. ಒಬ್ಬ ಅಭ್ಯರ್ಥಿಯೂ ಅಕ್ರಮವಾಗಿ ಆಯ್ಕೆಯಾಗಿಲ್ಲ. ಪಾರದರ್ಶಕವಾಗಿ ಪರೀಕ್ಷೆ ನಡೆಸಿ ನೇಮಕಾತಿ ಮಾಡಲಾಗಿತ್ತು. ಆದರೆ ಈಗ 1270 ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಕರ್ನಾಟಕ ಪರಿಕ್ಷಾ ಪ್ರಾಧಿಕಾರ ಮೂಲಕ ಮಾಡಿದ್ದು, ಮೈಸೂರಿನಲ್ಲಿ ಇದರ ಪ್ರಶ್ನೆ ಪತ್ರಿಕೆ ಮಾಡಿದ್ದು, ಅಲ್ಲಿನ ಸಹಾಯಕ ಪ್ರಾಧ್ಯಾಪಕರು ಹಾಗೂ ಕುಲಸಚಿವರು, ಸಚಿವರು ಒಟ್ಟಾಗಿ 50-80 ಲಕ್ಷ ಕೊಟ್ಟವರಿಗೆ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಲಾಗಿದೆ.
ಶಿಕ್ಷಣ ಸಂಸ್ಥೆ ನಡೆಸುವ ಅಶ್ವತ್ಥ್ ನಾರಾಯಣ ಅವರು ಇಂತಹ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವುದಕ್ಕೆ ನಾಚಿಕೆಯಾಗಬೇಕು. ಇನ್ನು ಪ್ರಾಮಾಣಿಕ ಮುಖ್ಯಮಂತ್ರಿಯಾಗಿದ್ದ ಎಸ್.ಆರ್ ಬೊಮ್ಮಾಯಿ ಅವರ ಪುತ್ರ ಮುಖ್ಯಮಂತ್ರಿ ಬೊಮ್ಮಾಯಿ ಅವರು ಭ್ರಷ್ಟಾಚಾರದ ಕೂಪದಲ್ಲಿ ಸಿಲುಕಿರುವುದು ನೋಡಿದರೆ ಅಸಹ್ಯವಾಗುತ್ತಿದೆ. ಇನ್ನು ಮೂರನೇ ವಿಚಾರ 412 ಪ್ರಾಂಶುಪಾಲರ ನೇಮಕ ನಡೆಯಬೇಕಾಗಿದ್ದು, 402 ಪ್ರಾಂಶುಪಾಲರು ಪರ್ಮನೆಂಟ್ ಪ್ರಾಶುಪಾಲರಿಲ್ಲ. ನಾನು ಸಚಿವನಾಗಿದ್ದ ಸಮಯದಲ್ಲಿ 390 ಪ್ರಾಂಶುಪಾಲರ ನೇಮಕಾತಿ ಮಾಡಬೇಕಾಗಿತ್ತು. ಇದನ್ನು ಹೇಗೆ ಮಾಡಬೇಕು ಎಂದು ಆಗಿನ ಮುಖ್ಯ ಕಾರ್ಯದರ್ಶಿಗಳ ವಿಜಯ್ ಭಾಸ್ಕರ್ ನೇತೃತ್ವದಲ್ಲಿ ಸಮಿತಿ ಮಾಡಿ ನಿಯಮಾವಳಿ ರೂಪಿಸಿದ್ದೆವು. ನಂತರ ನಮ್ಮ ಸರ್ಕಾರದ ಅವಧಿ ಮುಗಿದಿತ್ತು. ಈಗ ಆ ಪ್ರಕ್ರಿಯೆ ಮುಂದುವರಿಸಲು ಮುಂದಾಗಿದ್ದು, ಇದರಲ್ಲೂ ಸರ್ಕಾರ ಭ್ರಷ್ಟಾಚಾರ ಮಾಡುತ್ತಿದೆ. ಪ್ರತಿ ಪ್ರಾಂಶುಪಾಲರಿಗೆ 1 ಕೋಟಿಗೂ ಹೆಚ್ಚಿನ ಹಣ ಪಡೆಯಲಾಗುತ್ತಿದೆ. ಹೀಗೆ ಙಣ ಕೊಟ್ಟು ಬಂದ ಪ್ರಾಧ್ಯಾಪಕರು, ಇಂಜಿನಿಯರ್ ಗಳಿಂದ ವಿದ್ಯಾರ್ಥಿಗಳು ಉನ್ನತ ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯವೇ? ಇದರಿಂದ ದೇಶದ ಭವಿಷ್ಯವೇ ಕುಸಿಯಲಿದೆ. ಹೀಗಾಗಿ ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯಬಾರದು. ಹೀಗಾಗಿ ಇದು ಮಾನ ಮರ್ಯಾದೆ ಇಲ್ಲದ ಲಜ್ಜೆಗೆಟ್ಟ ಸರ್ಕಾರ. ಬೊಮ್ಮಾಯಿ ಅವರು ನೈತಿಕತೆ ಹೊತ್ತು ರಾಜೀನಾಮೆ ನೀಡುವುದಿಲ್ಲ. ಕಾರಣ ಅವರು ಕುರ್ಚಿಗೆ ಅಂಟಿಕೊಂಡು ಕೂತಿದ್ದಾರೆ. ಸರ್ಕಾರ ಈ ಹಗರಣಗಳ ಬಗ್ಗೆ ತನಿಖೆ ಮಾಡದಿದ್ದರೆ ನಮ್ಮ ನಾಯಕರ ಜತೆ ಚರ್ಚೆ ಮಾಡಿ ಈ ವಿಚಾರವಾಗಿ ಯಾವ ರೀತಿ ಹೋರಾಟ ಮಾಡಬೇಕು ಎಂಬುದನ್ನು ಚರ್ಚೆ ಮಾಡುತ್ತೇವೆ.
ರಮೇಶ್ ಬಾಬು:
ಲ್ಯಾಪ್ ಟಾಪ್, ಟ್ಯಾಬ್ಲೆಟ್ ಖರೀದಿ ಹಗರಣ ಹಾಗೂ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಅಕ್ರಮ ನಡೆದಿದೆ. ಕೆಸೆಟ್ ಮೂಲಕ ಮೈಸೂರು ವಿವಿಯಲ್ಲಿ ಸಿದ್ಧಪಡಿಸುವ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದು, ಕೇವಲ ಸಸ್ಯಶಾಸ್ತ್ರ ವಿಷಯಕ್ಕೆ ಸಂಬಂಧಿಸಿದಂತೆ ಮಾತ್ರ ಬಂಧನವಾಗಿದ್ದು, ಉಳಿದ ಆರೋಪಿಗಳು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಇದಕ್ಕೆ ಕಾರಣಕರ್ತರು ಉನ್ನತ ಶಿಕ್ಷಣ ಸಚಿವರು ಹಾಗೂ ಕಾಲೇಜು ಶಿಕ್ಷಣ ಆಯುಕ್ತರಾದ ಪ್ರದೀಪ್ ಅವರು. ಪ್ರದೀಪ್ ಅವರು 12-02-2019ರಲ್ಲಿ ಮಹಾರಾಷ್ಟ್ರದಿಂದ ಬಡ್ತಿ ಮೂಲಕ ಮೂರು ವರ್ಷಗಳ ಕಾಲ ರಾಜ್ಯಕ್ಕೆ ಆಗಮಿಸಿದ್ದು, ಅವರ ಅವಧಿ ಮುಗಿದಿದ್ದರೂ ಕಳೆದ ವರ್ಷ ಫೆಬ್ರವರಿಯಲ್ಲಿ ರಾಜ್ಯ ಸರ್ಕಾರ ಯಾವ ಕಾರಣಕ್ಕೆ ಇವರ ಅವಧಿಯನ್ನು ಒಂದು ವರ್ಷ ಕಾಲ ವಿಸ್ತರಣೆ ಮಾಡಿದೆ? ಇಂದು ಶಿಕ್ಷಣ ಸಚಿವಾಲಯಲ್ಲಿನ ಹಗರಣಗಳಿಗೆ ಕಾರಣರಾಗಿದ್ದಾರೆ. ಇತ್ತೀಚೆಗೆ ವಿಧಾನಸೌಧದಲ್ಲಿ ಶಿಕ್ಷಣ ಸಚಿವರ ಕಚೇರಿ ಮುಂದೆ ಮರಿತಿಬ್ಬೇಗೌಡರು ಹಾಗೂ ಬಿ.ಕೆ ಹರಿಪ್ರಸಾದ್ ಹಾಗೂ ಇತರೆ ಕಾಂಗ್ರೆಸ್ ಸದಸ್ಯರು ಇದೇ ಅಧಿಕಾರಿಯಿಂದ ಪ್ರತಿಭಟನೆ ಮಾಡಿದ್ದಾರೆ. ಲ್ಯಾಪ್ ಟಾಪ್ ಹಗರಣದ ಜತೆಗೆ ರಾಜ್ಯದ ಉನ್ನತ ಶಿಕ್ಷಣ ಇಲಾಖೆ ಅಡಿಯಲ್ಲಿ 250 ಕೋಟಿ ವೆಚ್ಚದಲ್ಲಿ 6 ಕಾಲೇಜುಗಳ ನಿರ್ಮಾಣ ಮಾಡಲಾಗುತ್ತಿದೆ. ಇದರ ಟೆಂಡರ್ ಎಲ್ಲಿ, ಯಾವಾಗ, ಯಾರಿಗೆ ನೀಡಲಾಗಿದೆ? ಯಾರು ಈ ಕೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿ ನೀಡಿಲ್ಲ. ಸಿದ್ದರಾಮಯ್ಯ ಅವರ ಅವಧಿಯಲ್ಲಿ ವಿಶೇಷ ಯೋಜನೆ ಕೈಗೊಂಡು ಪದವಿ ಕಾಲೇಜುಗಳಲ್ಲಿ ವಸತಿ ಕಾಲೇಜು ಜಾರಿಗೆ ಮಾಡಲಾಯಿತು. ಅದರ ಮುಂದುವರಿದ ಭಾಗವಾಗಿ 16 ವಸತಿ ಕಾಲೇಜು ಹಾಗೂ ಹಾಸ್ಟೆಲ್ ನಿರ್ಮಾಣದಲ್ಲಿ ಅಕ್ರಮ ನಡೆದಿದ್ದು ಸರ್ಕಾರ ಇದರ ಮಾಹಿತಿಯನ್ನು ಬಹಿರಂಗಪಡಿಸಬೇಕು.
ಇನ್ನು ಕೇಂದ್ರ ಸರ್ಕಾರದ ರುಸಾ ಮೂಲಕ ರಾಜ್ಯ ಸರ್ಕಾರಕ್ಕೆ ಅನುದಾನ ಬರುತ್ತಿದ್ದು, ಸ್ಮಾರ್ಟ್ ಕ್ಲಾಸ್ ರೂಮ್ ಹೆಸರಲ್ಲಿ 200 ಕೋಟಿಗೂ ಹೆಚ್ಚು ಹಣ ವ್ಯಯ ಮಾಡಲಾಗಿದ್ದು, ಇದರ ಮಾಹಿತಿಯನ್ನು ಸರ್ಕಾರ ನೀಡಬೇಕು. ಇನ್ನು ಉನ್ನತ ಶಿಕ್ಷಣ ಇಲಾಖೆಯಲ್ಲಿ ಯುಯುಸಿಎಂಎಸ್ ಮಾದರಿ ಮಾಡಿ ಎಲ್ಲ ವಿವಿಗಳನ್ನು ಒಂದು ಸಂಸ್ಥೆ ಅಡಿಯಲ್ಲಿ ತಂದು ಅದಕ್ಕಾಗಿ 200 ಕೋಟಿ ವೆಚ್ಚ ಮಾಡಲಾಗಿದೆ. ಇದಕ್ಕೆ ಸಚಿವರು ಹಾಗೂ ಕಾಲೇಜು ಶಿಕ್ಷಣ ಆಯುಕ್ತರಾದ ಪ್ರದೀಪ್ ಅವರು ಸೇರಿ ಈ ಯೋಜನೆ ಮಾಡಿದ್ದಾರೆ. ದುರ್ದೈವ ಎಂದರೆ ಉನ್ನತ ಶಿಕ್ಷಣ ಇಲಾಖೆಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರ ಕಣ್ತಪ್ಪಿಸಿ ಇಷ್ಟೆಲ್ಲಾ ಅಕ್ರಮಗಳನ್ನು ಮಾಡಲಾಗಿದೆ. ಮಲ್ಲೇಶ್ವರಂ ಕ್ಷೇತ್ರದಲ್ಲಿ ಇವರ ವಿರುದ್ಧ ದೂರು ದಾಖಲಾಗಿದ್ದು, ಇವರು ಮಂತ್ರಿ ಸ್ಥಾನದಲ್ಲಿದ್ದುಕೊಂಡು ತಾವು ಸತ್ಯ ಹರಿಶ್ಚಂದ್ರ ಎಂದು ಹೇಳಿದರೆ ಆಗುವುದಿಲ್ಲ. ಇವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಿ ಮುಖ್ಯಮಂತ್ರಿಗಳು ಈ ಎಲ್ಲ ಅಕ್ರಮಗಳ ಬಗ್ಗೆ ನ್ಯಾಯಾಂಗ ತನಿಖೆ ಅಥವಾ ಲೋಕಾಯುಕ್ತರಿಂದ ಪಾರದರ್ಶಕ ತನಿಖೆ ಮಾಡಿಸಬೇಕು ಎಂದು ಆಗ್ರಹಿಸುತ್ತೇವೆ.