ಮಕ್ಕಳನ್ನು ಅಪಾಯಕಾರಿ ಕ್ಷೇತ್ರದಲ್ಲಿ ದುಡಿಸಿದ್ದಲ್ಲಿ, ಕನಿಷ್ಠ 6 ತಿಂಗಳು ಜೈಲು ಶಿಕ್ಷೆ

ದೇವನಹಳ್ಳಿ: ಬಾಲ ಕಾರ್ಮಿಕರನ್ನು ದುಡಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದ್ದು, 14 ವರ್ಷದೊಳಗಿನ ಯಾವುದೇ ಮಕ್ಕಳನ್ನು, ಯಾವುದೇ ಕ್ಷೇತ್ರದಲ್ಲಿ ಹಾಗೂ 15 ರಿಂದ 18 ವರ್ಷದೊಳಗಿನ ಮಕ್ಕಳನ್ನು ಅಪಾಯಕಾರಿ ಕ್ಷೇತ್ರದಲ್ಲಿ ದುಡಿಸಿದ್ದಲ್ಲಿ, ಅಂತಹವರಿಗೆ ಕನಿಷ್ಠ 6 ತಿಂಗಳಿಗಿಂತ ಕಡಿಮೆ ಇಲ್ಲದಂತೆ ಹಾಗೂ ಗರಿಷ್ಠ 2 ವರ್ಷದವರೆಗೆ ಜೈಲು ಶಿಕ್ಷೆ ಮತ್ತು 20 ಸಾವಿರದಿಂದ ರೂ. 50 ಸಾವಿರದವರೆಗೂ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕರಾದ ಸುಬ್ಬರಾವ್.ಎಸ್ ಅವರು ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ, ಮಕ್ಕಳ ಸಹಾಯವಾಣಿ-1098 ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ದೇವನಹಳ್ಳಿ ತಾಲ್ಲೂಕಿನ ವಿಜಯಪುರ ಪಟ್ಟಣದಲ್ಲಿನ ಅಲ್ಪಸಂಖ್ಯಾತರ ಮೌಲನಾ ಅಜಾದ್ ಮಾದರಿ ಶಾಲೆಯಲ್ಲಿ ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆಯ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ಹಾಗೂ ತಿದ್ದುಪಡಿ ಕಾಯ್ದೆ 2016ರ ಕುರಿತು, ಬಾಲ್ಯವಿವಾಹ ನಿಷೇಧ ಕಾಯ್ದೆ 2006ರ ಕುರಿತು, ತಂಬಾಕು ಸೇವನೆಯಿಂದ ಮಕ್ಕಳ ಮೇಲೆ ಉಂಟಾಗುವ ದುಷ್ಪರಿಣಾಮಗಳ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯಾದ್ಯಂತ ಸಾರ್ವಜನಿಕರಿಗೆ ಅರಿವು ಮೂಡಿಸಲು ಅನಿರೀಕ್ಷಿತ ತಪಾಸಣೆ, ದಾಳಿಗಳು, ಜನ ಜಾಗೃತಿ ಆಟೋ ಪ್ರಚಾರ ಕಾರ್ಯಕ್ರಮಗಳು, ಶಾಲೆ-ಕಾಲೇಜು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಕಾನೂನು ಅರಿವು-ನೆರವು ಕಾರ್ಯಕ್ರಮಗಳನ್ನು ಮತ್ತು ಗೋಡೆ ಬರಹಗಳು, ಬೀದಿ ನಾಟಕಗಳು, ಬಿತ್ತಿ ಪತ್ರಗಳು, ಕರ ಪತ್ರಗಳು, ಹಂಚುವುದರ ಮೂಲಕ ಬಾಲ ಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

18 ವರ್ಷದೊಳಗಿನ ಮಕ್ಕಳನ್ನು ಹೋಟೆಲ್, ಗ್ಯಾರೇಜ್, ಅಂಗಡಿಗಳು, ಮಾರುಕಟ್ಟೆ, ಬಾರ್ ಮತ್ತು ರೆಸ್ಟೊರೆಂಟ್, ಮಾಂಸದ ಅಂಗಡಿ, ಇತ್ಯಾದಿ ಸ್ಥಳಗಳಲ್ಲಿ ಕೆಲಸಕ್ಕೆ ನೇಮಿಸಿ ಕೊಂಡಿರುವುದು ಕಂಡು ಬಂದಲ್ಲಿ, ಸಾರ್ವಜನಿಕರು ಕೂಡಲೇ ಮಕ್ಕಳ ಉಚಿತ ಸಹಾಯವಾಣಿ-1098 ಗೆ ಅಥವಾ ಪೆನ್ಸಿಲ್ ಪೂಟಲ್ https://pencil.gov.in ನಲ್ಲಿ ದೂರು ದಾಖಲಿಸಬಹುದು ಎಂದು ಹೇಳಿದರು. ಇದೇ ವೇಳೆ ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಜಿಲ್ಲಾ ಸಲಹಾಗಾರತಿ ವಿದ್ಯಾರಾಣಿ ಅವರು ಮಾತನಾಡಿ ಸಿಗರೇಟು, ಗುಟ್ಕಾ, ಪಾನ್ ಮಸಾಲಾ ಮುಂತಾದವುಗಳ ಸೇವನೆ ಮಾಡುವದರಿಂದ ಆರೋಗ್ಯಕ್ಕೆ ಹಾನಿಕರ. ಶಾಲೆ–ಕಾಲೇಜು ಆವರಣದಲ್ಲಿ 100 ಮೀಟರ್ ಪ್ರದೇಶದಲ್ಲಿ ತಂಬಾಕು, ದೂಮಪಾನ ಮತ್ತು ಮಧ್ಯಪಾನ ಮಾರುವುದನ್ನು ನಿಷೇಧಿಸಲಾಗಿದೆ ಮತ್ತು ದೂಮಪಾನ ಮಾಡುವುದರಿಂದ ಮಾರಣಾಂತಿಕ ಕಾಯಿಲೆಗಳು ಉಂಟಾಗುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಅಲ್ಪ ಸಂಖ್ಯಾತರ ಮೌಲಾನಾ ಆಜಾದ್ ಮಾದರಿ ಶಾಲೆ ಮುಖ್ಯೋಪಾಧ್ಯಾಯರಾದ ಪ್ರಿಯದರ್ಶಿನಿ, ವಿಜಯಪುರ ಪೊಲೀಸ್ ಠಾಣೆಯ ಸಹಾಯಕ ಉಪ ನಿರೀಕ್ಷಕ ಮುನಿರಾಜು, ದೇವನಹಳ್ಳಿ ತಾಲ್ಲೂಕಿನ ಬಿ.ಆರ್.ಸಿ. ಕೊಟ್ರೇಶ್, ವಿಜಯಪುರ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಶಿಕ್ಷಕ ನಾರಾಯಣ ಸ್ವಾಮಿ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಪೋಗ್ರಾಮ್ ಮ್ಯಾನೇಜರ್ ಸಣ್ಣ ಕರಿಯಪ್ಪ.ಡಿ, ಮಕ್ಕಳ ಸಹಾಯವಾಣಿಯ ಸಂಯೋಜಕ ಮುರಳಿ ಮೋಹನ್.ಎಂ ಮತ್ತು ಮಂಜುನಾಥ್ ಹಾಜರಿದ್ದರು.

Leave a Comment

Your email address will not be published. Required fields are marked *

Translate »
Scroll to Top