ಬೆಂಗಳೂರು: ನಾನು ಹೆದರುವುದು ನನ್ನನ್ನು ಬೆಳೆಸಿರುವ ನಾಡಿನ ಜನ ಮತ್ತು ದೇವರಿಗೆ. ಸಿದ್ದರಾಮಯ್ಯನವರಂತಹ ಲಕ್ಷ ಜನ ಬಂದರೂ ನಾನು ಹೆದರಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಸಿದ್ದರಾಮ್ಯಯನವರಿಗೆ ತಿರುಗೇಟು ಕೊಟ್ಟಿದ್ದಾರೆ.
ಹೆಚ್.ಡಿ. ಕುಮಾರಸ್ವಾಮಿಗೆ ನನ್ನನ್ನು ಕಂಡರೆ ಭಯ ಎಂಬ ಸಿದ್ದರಾಮಯ್ಯನವರ ಹೇಳಿಕೆಗೆ ಕಿಡಿಕಾರಿದ ಅವರು, ಯಾರಿಗೆ ಭಯ, ಸಿದ್ದರಾಮಯ್ಯ ದೆವ್ವ ಆಗಿದ್ದರೆ ಭಯ ಬೀಳಬೇಕು. ಅವರು ದೆವ್ವ ಅಲ್ಲ ಅಲ್ವಾ, ನಾನೇಕೆ ಭಯಪಡಲಿ ಎಂದು ಟಾಂಗ್ ನೀಡಿದರು.
ಕುಮಾರಸ್ವಾಮಿಯನ್ನು ಹೆದರಿಸಲು ಯಾವುದೇ ಕಾರಣಕ್ಕೂ ಆಗಲ್ಲ. ನಾನು ಯಾರಿಗೂ ಹೆದರಲ್ಲ. ನಾನು ಹೆದರುವುದು ದೇವರಿಗೆ, ನನ್ನನ್ನು ಬೆಳೆಸಿರುವ ನಾಡಿನ ಜನರಿಗೆ ಮಾತ್ರ. ಸಿದ್ದರಾಮಯ್ಯನವರಿಗೆ ನಾನು ಹೆದರುತ್ತೇನಾ ಎಂದು ಹರಿಹಾಯ್ದರು.
ರಾಜಕೀಯದಲ್ಲಿ ನಾನು ಸಿದ್ದರಾಮಯ್ಯ ನೆರಳಿನಲ್ಲಿ ಬಂದಿದ್ದೇನಾ, ಅವರ ಹೆಸರಿನಲ್ಲಿ ರಾಜಕೀಯ ಮಾಡಿಲ್ಲ. ನನ್ನ ಸ್ವಂತ ದುಡಿಮೆ ಮೇಲೆ ಬಂದಿದ್ದೇನೆ ಎಂದರು.
ಹಾಗೆ ನೋಡಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ಪಕ್ಷದ ಕಾರ್ಯಕರ್ತರು, ದೇವೇಗೌಡರ ನೆರಳಿನಲ್ಲಿ ಬಂದ ಮನುಷ್ಯ ಎಂದು ಟಾಂಗ್ ನೀಡಿದರು.
ಯಾವುದೇ ಪ್ರಕರಣ ದಾಖಲಿಸಿ ನನ್ನನ್ನು ಹೆದರಿಸಲು ಆಗುತ್ತಾ, ನನಗೆ ಬಂಧನದ ಭೀತಿ ಎಂದೆಲ್ಲಾ ಮಾಧ್ಯಮಗಳು ಹಾಕುತ್ತಿವೆ. ಯಾವ ಬಂಧನವೋ, ಯಾವ ಭೀತಿನೋ, ಮಾಧ್ಯಮವರನ್ನು ದೇವರೇ ಕಾಪಾಡಬೇಕು ಎಂದರು.
ನನ್ನ ವಿರುದ್ಧ ಎಫ್‍ಐಆರ್ ದಾಖಲಿಸುವುದು ಬೆದರಿಸುವ ತಂತ್ರ ಅಲ್ಲದೆ ಇನ್ನೇನು ಇಲ್ಲ. ಆ ಬಗ್ಗೆ ನಾನು ಹೆಚ್ಚು ಚರ್ಚೆ ಮಾಡಲ್ಲ. ಅದು ಅನಾವಶ್ಯಕ. ಎಲ್ಲವನ್ನು ಕಾಲವೇ ನಿರ್ಧಾರ ಮಾಡುತ್ತದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು 5 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂಬ ಡಿ.ಕೆ.ಸುರೇಶ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯಾರು ಯಾರು ಯಾವ ಹೇಳಿಕೆ ಕೊಡುತ್ತಿದ್ದಾರೆ, ಯಾವ ರೀತಿ ರಾಜಕಾರಣ ಮಾಡುತ್ತಿದ್ದಾರೆ ನೋಡಿ. ಆ ಹೇಳಿಕೆಗಳ ಮೇಲೆ ನೀವೇ ತೀರ್ಮಾನ ಮಾಡಿ ಎಂದು ಮಾರ್ಮಿಕವಾಗಿ ನುಡಿದರು.
ಮುಡಾ ಹಗರಣವನ್ನು ವಿಷಯಾಂತರ ಮಾಡಲು ಕುಮಾರಸ್ವಾಮಿ ವಿರುದ್ಧ ಎಫ್‍ಐಆರ್ ದಾಖಲಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹೆಚ್.ಡಿ. ಕುಮಾರಸ್ವಾಮಿ ಅವರು, ಪ್ರತಿಯೊಂದನ್ನು ವಿಷಯಾಂತರ ಮಾಡುವ ಪ್ರಯತ್ನ ನಡೆದಿದೆ. ಈ ಸರ್ಕಾರ ಎಲ್ಲವನ್ನೂ ಬಿಟ್ಟಿರುವ ಸರ್ಕಾರ. ಯಾವ ಭಯ, ಭಕ್ತಿ, ಗೌರವವೂ ಇಲ್ಲ. ಈ ಸರ್ಕಾರದ ಬಗ್ಗೆ ಚರ್ಚೆ ಮಾಡುವುದು ಅರ್ಥ ಇಲ್ಲ. ಇವತ್ತು ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳಿಗೆ ಕಾಲವೇ ಉತ್ತರ ನೀಡುತ್ತೆ ಎಂದು ಹೇಳಿದರು.