ಸಿಂಧನೂರು:“ನವಲಿ ಅಣೆಕಟ್ಟು ನಿರ್ಮಾಣ ಸಂಬಂಧ ಮುಂದಿನ ಒಂದು ತಿಂಗಳ ಒಳಗಾಗಿ ಮುಂದಿನ ಒಂದು ತಿಂಗಳ ಒಳಗಾಗಿ ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣದ ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.ಸಿಂಧನೂರಿನಲ್ಲಿ ಆಯೋಜಿಸಿದ್ದ ರೈತ ದಸರಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಕುಮಾರ್ ಅವರು, “ತುಂಗಾಭದ್ರ ಅಣೆಕಟ್ಟಿಗೆ ಪರ್ಯಾಯವಾಗಿ ನವಲಿಯಲ್ಲಿ ಅಣೆಕಟ್ಟು ನಿರ್ಮಾಣಮಾಡಬೇಕು ಎಂದು ಈ ಭಾಗದ ನಾಯಕರು ಮನವಿ ನೀಡಿದ್ದಾರೆ. ಅಲ್ಲದೆ 33 ಟಿಎಂಸಿ ನೀರು ವ್ಯರ್ಥವಾಗುತ್ತಿವೆ ಎಂದು ಮಾಹಿತಿ ನೀಡಿದ್ದಾರೆ. ಹೀಗಾಗಿ ಮೂರೂ ರಾಜ್ಯದ ನಾಯಕರ ಜತೆ ಚರ್ಚೆ ಮಾಡಿ ಆದಷ್ಟು ಬೇಗ ಈ ಯೋಜನೆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದರು.
ತುಂಗಾಭದ್ರ ಅಣೆಕಟ್ಟು ಗೇಟ್ ಬದಲಿಗೆ ಕ್ರಮ:
“ನಮ್ಮ ತಜ್ಞರ ಸಮಿತಿಯು ಈ ಅಣೆಕಟ್ಟಿನ ಗೇಟ್ ಗಳ ಬದಲಾವಣೆ ಮಾಡಬೇಕು ಎಂದು ವರದಿ ನೀಡಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ, ಜಿಲ್ಲಾ ಮಂತ್ರಿಗಳು, ಸಂಸದರು, ಶಾಸಕರ ಜತೆ ಚರ್ಚೆ ಮಾಡಿದ್ದು, ಮುಂದಿನ ದಿನಗಳಲ್ಲಿ ಈ ಎಲ್ಲಾ ಗೇಟ್ ಗಳನ್ನು ಪರಿಶೀಲನೆ ಮಾಡಿ, ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ಕಡಿಮೆಯಾದ ಬಳಿಕ ಒಂದೊಂದೇ ಗೇಟ್ ಗಳನ್ನು ಬದಲಾವಣೆ ಮಾಡುತ್ತೇವೆ. ಆ ಮೂಲಕ ಈ ಅಣೆಕಟ್ಟು, ರೈತರ ಬದುಕು ಉಳಿಸಲು ಈ ಸರ್ಕಾರ ಹಾಗೂ ಡಿ.ಕೆ. ಶಿವಕುಮಾರ್ ಮಾಡಲಿದ್ದಾರೆ” ಎಂದು ತಿಳಿಸಿದರು.
ಉಳಿದಂತೆ ಶಿವಕುಮಾರ್ ಅವರು ಹೇಳಿದ್ದಿಷ್ಟು;“ನಿಮ್ಮ ಸಂಬಂಧಗಳನ್ನು ಬೆಸೆಯುವ ಪವಿತ್ರವಾದ ಆಚರಣೆಯೇ ದಸರಾ. ರಾಜಕಾರಣ ನಮ್ಮ ಆಚಾರ ವಿಚಾರ ಬದಿಗೊತ್ತಿ, ಈ ಪವಿತ್ರವಾದ ಕಾರ್ಯಕ್ರಮ ಹಮ್ಮಿಕೊಂಡಿರುವುದು ಉತ್ತಮವಾಗಿದೆ. ಕಲ್ಯಾಣ ಕರ್ನಾಟಕಕ್ಕೆ ಮಾದರಿಯಾಗಿ ಈ ಕಾರ್ಯಕ್ರಮ ಮಾಡುತ್ತಿದ್ದೀರಿ.
ಪಕ್ಷಬೇಧ ಮರೆತು ವಿರೂಪಾಕ್ಷಪ್ಪ, ಮಾಜಿ ಸಚಿವರಾದ ನಾಡಗೌಡ ಹಾಗೂ ರೈತ ಮುಖಂಡರು ನಮ್ಮ ಶಾಸಕರು ಸಹಿ ಮಾಡಿ ತುಂಗಭದ್ರಾ ಯೋಜನೆಯ ಸಾಧಕ, ಬಾಧಕಗಳ ಅರ್ಜಿ ನೀಡಿದ್ದಾರೆ. ನಾನು ಈ ಅರ್ಜಿ ಯಲ್ಲಿರುವ ಸಲಹೆಗಳ ಬಗ್ಗೆ ಸಭೆ ಕರೆದು ಚರ್ಚೆ ಮಾಡುತ್ತೇನೆ.
ಅಣೆಕಟ್ಟಿನ ಗೇಟ್ ದುರಸ್ತಿ ಕಾರ್ಯವನ್ನು ದೇಶವೇ ನೋಡಿತ್ತು
ತುಂಗಾಭದ್ರ ಅಣೆಕಟ್ಟು ನಿರ್ಮಾಣ ಮಾಡಿ 70 ವರ್ಷ ಕಳೆದಿವೆ. ಈ ಅಣೆಕಟ್ಟಿನ ಒಂದು ಗೇಟ್ ಕಿತ್ತುಹೋಯಿತು. ಇದನ್ನು ಒಂದು ವಾರದಲ್ಲಿ ದುರಸ್ತಿ ಮಾಡಬೇಕು ಎಂಬ ಸಂಕಲ್ಪ ಮಾಡಿದ ನಿರ್ಧಾರ ಮಹತ್ವದ್ದಾಗಿತ್ತು. ವಿರೋಧ ಪಕ್ಷದ ನಾಯಕರಾದ ಅಶೋಕ್ ಹಾಗೂ ವಿಜಯೇಂದ್ರ ಅವರು ಆ ಸಂದರ್ಭದಲ್ಲಿ ಅನೇಕ ಟೀಕೆ ಮಾಡಿದ್ದರು. ಆಗ ನಾನು ನೀವು ಏನಾದರೂ ಟೀಕೆ ಮಾಡಿ, ಟೀಕೆ ಸಾಯುತ್ತವೆ, ಕೆಲಸ ಉಳಿಯುತ್ತವೆ ಎಂದು ಹೇಳಿದೆ.
ನಾನು ಕೂಡಲೇ ಅಧಿಕಾರಿಗಳಿಗೆ ನಿರ್ದೇಶನ ನೀಡಿ ತ್ವರಿತಗತಿಯಲ್ಲಿ ಕಾರ್ಯಪ್ರವೃತ್ತವಾಗುವಂತೆ ಮಾಡಿದೆ. ಈ ಅಣೆಕಟ್ಟು ಉಳಿಯುತ್ತದೆಯೋ, ಒಡೆದುಹೋಗುತ್ತದೆಯೋ? ಈ ಸಮಸ್ಯೆಯನ್ನು ಕರ್ನಾಟಕ ಸರ್ಕಾರ ಹೇಗೆ ಬಗೆಹರಿಸಲಿದೆ ಎಂದು ಇಡೀ ದೇಶದ ಜನ ಈ ಕಾರ್ಯವನ್ನು ಕುತೂಹಲದಿಂದ ನೋಡುತ್ತಿದ್ದರು. ನನಗೆ ನೂರಾರು ಕರೆ ಬಂದಿತ್ತು. ನಾವು ಮಾಡುವ ಕೆಲಸ ಸರಿಯಾದ ರೀತಿಯಲ್ಲಿ ಮಾಡಬೇಕು. ಹುಳಿ ಪೆಟ್ಟು ಬೀಳದೆ ಯಾವ ಕಲ್ಲು ಶಿಲೆಯಾಗುವುದಿಲ್ಲ. ಅದೇ ರೀತಿ ನೇಗಿಲು ಉಳುಮೆ ಮಾಡದೇ ಫಲ ದೊರೆಯುವುದಿಲ್ಲ. ಶ್ರಮ ಇಲ್ಲದೆ ಫಲ ಇರುವುದಿಲ್ಲ. ಅದೇ ರೀತಿ ನಮ್ಮ ಅನುಭವ, ಛಲ ದಿಟ್ಟ ನಿರ್ಧಾರ ಇಂದು ಸಾಧನೆಯಾಗಿ ನಿಂತಿದೆ. ನಂತರ ನಾವು ಅದೇ ಅಣೆಕಟ್ಟಿನಲ್ಲಿ ಬಾಗಿನ ಅರ್ಪಣೆ ಕಾರ್ಯಕ್ರಮ ಮಾಡಿದ್ದೇವೆ.
ಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಯ್ಯ ಪದುಮನಾಭನ ಪಾದ ಭಜನೆ ಪರಮ ಸುಖವಯ್ಯಾ ಎಂಬ ಪುರಂದರ ದಾಸರ ಪದಗಳಂತೆ ನೀರಾವರಿ ಮಂತ್ರಿಯಾಗಿ ತುಂಗಾಭದ್ರ ಅಣೆಕಟ್ಟನ್ನು ರಕ್ಷಣೆ ಮಾಡಿ, ರಾಜ್ಯದ 12 ಲಕ್ಷ ಎಕರೆ ಭೂ ಪ್ರದೇಶಕ್ಕೆ ಎರಡು ಬೆಳೆಗೆ ನೀರು ಕೊಡುವ ಅವಕಾಶ ನನಗೆ ಸಿಕ್ಕಿತಲ್ಲ, ಅದೇ ನನ್ನ ಭಾಗ್ಯ.
ಇನ್ನು ಎತ್ತಿನಹೊಳೆ ಯೋಜನೆ ನೀರು ಬರುವುದಿಲ್ಲ ಎಂದು ಅನೇಕರು ಟೀಕೆ ಮಾಡಿದ್ದರು. ಆದರೆ ನಾವು ನೀರನ್ನು ತಂದು ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ತುಮಕೂರಿನ ಜನರಿಗೆ ನೀರು ನೀಡಲು ಕಾರ್ಯಕ್ರಮ ರೂಪಿಸಿದ್ದೇವೆ.”