ದೇವನಹಳ್ಳಿ,ಜ,5 : ಸರ್ಕಾರ ರಾಗಿಗೆ ಕನಿಷ್ಠ ಬೆಲೆಯನ್ನು ನಿಗದಿ ಮಾಡಿ ರೈತರಿಂದ 20 ಕ್ವಿಂಟಾಲ್ ರಾಗಿ ಖರೀದಿಸುವಂತೆ ಸರ್ಕಾರ ಆದೇಶಮಾಡಿದೆ. ದೇವನಹಳ್ಳಿ ತಾಲ್ಲೂಕು ಬಯಲು ಪ್ರದೇಶವಾಗಿದ್ದು ಈ ಭಾಗದ ರೈತರು ಹೆಚ್ಚಾಗಿ ರಾಗಿ ಬೆಳೆದಿದ್ದಾರೆ ಆದರೆ ಸರಕಾರ ಒಬ್ಬ ರೈತರಿಂದ ಇಂತಿಷ್ಟೇ ರಾಗಿ ಖರೀದಿಮಾಡಬೇಕೆಂದು ನಿಗದಿಮಾಡಿರುವುದನ್ನು ಪುನರ್ ಪರಿಶೀಲನೆ ಮಾಡಿ ಈ ಹಿಂದೆ ಇದ್ದ ರಾಗಿ ಖರೀದಿಯನ್ನೇ ಮುಂದುವರಿಸಬೇಕು ಎಂದು ಸರಕಾರವನ್ನು ಒತ್ತಾಯಿಸುತ್ತೇನೆ ಎಂದು ಶಾಸಕ ನಿಸರ್ಗ ನಾರಾಯಣಸ್ವಮಿ ತಿಳಿಸಿದರು. ದೇವನಹಳ್ಳಿ ಪಟ್ಟಣದ ಪಿಎಲ್‌ಡಿ ಬ್ಯಾಂಕ್ ಎರಡನೆ ಮಹಡಿಯಲ್ಲಿರುವ ರಾಗಿ ಖರೀದಿ ನೊಂದಣೆ ಕಚೇರಿಗೆ ಭೇಟಿ ನೀಡಿ ಮಾತನಾಡಿದ ಅವರು ಗ್ರಾಮಾಂತರ ಜಿಲ್ಲೆಯಲ್ಲಿ ಯಾವುದೆ ನದಿ ಮೂಲಗಳಿಲ್ಲದಿರುವುದರಿಂದ ಮಳೆ ಯಾಧಾರಿತ ರಾಗಿಬೆಳೆಯನ್ನು ಅವಲಂಬಿಸಿದ್ದು ರೈತರು ಹೆಚ್ಚಾಗಿ ಬೆಳೆಯುತ್ತಿದ್ದಾರೆ.

ಗ್ರಾಮಾಂತರ ಜಿಲ್ಲೆಯ ಪ್ರತಿ ರೈತರಿಂದ ಕನಿಷ್ಠ 50 ಮೂಟೆ ರಾಗಿಯನ್ನು ಖರೀದಿ ಮಾಡಿಕೊಳ್ಳುವಂತೆ ಸಚಿವರಲ್ಲಿ ಮನವಿಮಾಡುತ್ತೇನೆ. ನಾನು ಈಗಾಗಲೇ ಸಚಿವರ
ಅಪ್ತಸಹಾಯಕರೊಂದಿಗೆ ಮಾತನಾಡಿದ್ದೇನೆ. ಸಂಬಂದ ಪಟ್ಟ ಅಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ. ಒಂದುವೇಳೆ ರೈತರಿಂದ ರಾಗಿ ಖರೀದಿಸದಿದ್ದರೆ ಮುಂದಿನ ಅಧಿವೇಶನದಲ್ಲಿ ಗಮನಸೆಳೆಯುವ ಕೆಲಸ ಮಾಡುತ್ತೇನೆ. ಮೂರು ದಿನಗಳಿಂದ 902 ರೈತರು ನೊಂದಣೆ ಮಾಡಿಸಿದ್ದಾರೆ. ಸಕಾಲಕ್ಕೆ ರೈತರ ಖಾತೆಗಳಿಗೆ ಹಣ ವರ್ಗಾವಣೆಯಾಗಲಿದೆ ಇಲ್ಲವಾದರೆ ರೈತರ ಪರ ಸರಕಾರದ ಮೇಲೆ ಒತ್ತಡ ಹೇರಲು ನಾನು ಸಿದ್ದನಿದ್ದೇನೆ. ಸರ್ಕಾರ ಪ್ರಸ್ತುತ ಸಣ್ಣ ರೈತರಿಂದ ರಾಗಿ ಖರೀದಿಸಲು ಅವಕಾಶ ನೀಡಿದೆ. ಎರಡನೆ ಆದ್ಯತೆ ದೊಡ್ಡರೈತರಿಗೆ ಅವಕಾಶ ಮಾಡಿಕೊಡುವುದಾಗಿ ಸರ್ಕಾರಿ ಅಧಿಕಾರಿಗಳಿಗೆ ಸೂಚನೆ ನೀಡಿದೆ ಎಂದರು. ಇದೆ ವೇಳೆ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮುನಿರಾಜು, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಮುನೇಗೌಡ, ರಾಗಿ ಖರೀದಿ ಕೇಂದ್ರದ ಅಧಿಕಾರಿ ಚಿಕ್ಕಬಸವಯ್ಯ, ಪಕ್ಷದ ಅನೇಕ ಮುಖಂಡರು ರೈತರು ಇದ್ದರು.