ಕನ್ನಡ, ಸಂಸ್ಕೃತಿ ಇಲಾಖೆಯಿಂದ ನನಗೆ ಓದಿನ ರುಚಿ ಹತ್ತಿದೆ: ಸಚಿವ‌ ತಂಗಡಗಿ

ಬೆಂಗಳೂರು: ಜನರಿಗೆ ಸಮೀಪವಾದ ಇಲಾಖೆಗಳನ್ನು ನಿಭಾಯಿಸಿದ್ದ ನನಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ‌ ಜವಾಬ್ದಾರಿ ವಹಿಸಿಕೊಂಡ ಬಳಿಕ ‘ಓದಿನ ರುಚಿ‌’ ಹತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹೇಳಿದರು.

 

          ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ನಯನ ರಂಗಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ವಿವಿಧ ಕೃತಿಗಳ ಲೋಕಾರ್ಪಣೆ ಹಾಗೂ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಸಚಿವರು ಮಾತನಾಡಿದರು‌.

ಬೆಳಗ್ಗೆ ಎದ್ದೇಳುತ್ತಲ್ಲೇ ನನ್ನ ದಿನಚರಿ‌, ಪತ್ರಿಕೆ ಓದುವಿನಿಂದ ಪ್ರಾರಂಭಗೊಳ್ಳುತ್ತದೆ.‌ ಪ್ರಸ್ತುತ ಡಿಜಿಟಲ್‌ ಯುಗದಿಂದ ಓದಿನ‌ ಆಸಕ್ತಿ ಕಡಿಮೆಯಾಗುತ್ತಿದ್ದು, ಮಕ್ಕಳಲ್ಲಿ‌ ಓದಿನ ಆಸಕ್ತಿ‌ ಹೆಚ್ಚಿಸಬೇಕು. ಪ್ರತಿಯೊಂದು ಹಳ್ಳಿಗೂ ಪುಸ್ತಕಗಳು ತಲುಪಬೇಕು ಎಂದು ತಿಳಿಸಿದರು.

 

ಕೆಲ ಕಾರಣದಿಂದ ಕಾರ್ಯಕ್ರಮ ನಡೆಯುವುದು ತಡವಾಗಿದೆ. ಇಂತಹ ಮಹನೀಯರ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ‌ ಭಾಗಿಯಾಗುತ್ತಿರುವುದು ನನ್ನ ಪುಣ್ಯ. ‌ವಿಶೇಷವೆಂದರೆ ಸಿದ್ದಾಂತ ಶಿಖಾಮಣಿ ಭಗವದ್ಗೀತಾ ಸಮನ್ವಯ ಪುಸ್ತಕ ಬರೆದ ಶ್ರೀ ಶೈಲ ಮಹಾಸ್ವಾಮೀಜಿ ಅವರು ನನ್ನ ಶಾಲಾ ಸಹಪಾಠಿ ಎಂದು ಸಚಿವರು ನೆನೆದರು. 

ಇನ್ನು ಪುಸ್ತಕ ಮುದ್ರಣಕ್ಕೆ ಈ ಬಾರಿ 42 ಲಕ್ಷ ರೂ. ಬಿಡುಗಡೆ ಮಾಡಲಾಗಿತ್ತು. ಮುಂದಿನ ವರ್ಷ ಇನ್ನು ಹೆಚ್ಚಿನ ಪುಸ್ತಕ ಮುದ್ರಣ ಮಾಡಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

 

ಕಾರ್ಯಕ್ರಮದಲ್ಲಿ ಡಾ. ಚಂದ್ರಶೇಖರ ಕಂಬಾರರ ಸಮಗ್ರ ಸಂಪುಟದ 5 ಸಂಪುಟಗಳು, ಗೌರೀಶ ಕಾಯ್ಕಿಣಿ ಅವರ ಮೂರು ಸಂಪುಟಗಳು, ಕೋ.ಚನ್ನಬಸಪ್ಪ ಅವರ ಸಮಗ್ರ ಸಾಹಿತ್ಯದ ಆರು ಸಂಪುಟಗಳು,  ವಿ ಜಿ ಭಟ್ಟ ಅವರ ಸಮಗ್ರ ಸಾಹಿತ್ಯದ ಮೂರು ಸಂಪುಟಗಳು ಮತ್ತು ಅ ನ.ಕೃಷ್ಣರಾಯರ ಐದು ಸಂಪುಟಗಳನ್ನು ಸಚಿವರು ಲೋಕಾರ್ಪಣೆ ಮಾಡಿದರು.

ಸಮಾರಂಭದಲ್ಲಿ ಬೆಂಗಳೂರು ಕಂದಾಯ ವಿಭಾಗದ ವಿವಿಧ ಶಾಲಾ ಮತ್ತು ಕಾಲೇಜುಗಳಿಗೆ ಪುಸ್ತಕ ಪ್ರಾಧಿಕಾರದ ವತಿಯಿಂದ ರೂ.25,000 ಮೌಲ್ಯದ ಪುಸ್ತಕಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು.

 

ಕಾರ್ಯಕ್ರಮದಲ್ಲಿ ಇಲಾಖೆ ನಿರ್ದೇಶಕರಾದ ಡಾ. ಕೆ.ಧರಣಿದೇವಿ ಮಾಲಗತ್ತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ. ಚಂದ್ರಶೇಖರ ಕಂಬಾರ, ಸಾಹಿತಿಗಳಾದ  ಡಾ.ಹೆಚ್.ಎಲ್.ಪುಷ್ಟ, ಜಯಂತ್ ಕಾಯ್ಕಿಣಿ, ಲಕ್ಷ್ಮಣ್ ಕೊಡಸೆ, ಶಾ.ಮ.ಕೃಷ್ಣರಾಯರು, ಕನ್ನಡ ಪುಸ್ತಕ ಪ್ರಾಧಿಕಾರದ ಆಡಳಿತಾಧಿಕಾರಿ ಕೆ.ಬಿ.ಕಿರಣ್ ಸಿಂಗ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಪುಸ್ತಕ ಬರೆಯುವ ಮಟ್ಟಿಗೆ ಇಲಾಖೆಯಲ್ಲಿ ತಲ್ಲೀನ

 

ಈ ಸರ್ಕಾರದಲ್ಲಿ ಮೊದಲು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಎಸ್ಸಿ ಮತ್ತು ಎಸ್ಟಿ ಕಲ್ಯಾಣ ಇಲಾಖೆ ನೀಡಲಾಗಿತ್ತು‌. ಆದರೆ ಮುಖ್ಯಮಂತ್ರಿಗಳು ನನ್ನನ್ನು ಕರೆದು ಕಾರಣಾಂತರಗಳಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ನಿರ್ವಹಣೆ ಮಾಡಬೇಕು ಎಂದು  ಹೇಳಿದಾಗ ನನಗೆ ಏನು ಹೇಳಬೇಕೆಂದೆ ತಿಳಿಯಲಿಲ್ಲ. ಈ ಹಿಂದೆ ಎರಡು ಬಾರಿ ಮಂತ್ರಿಯಾಗಿದ್ದ ವೇಳೆ ಸಣ್ಣ ನೀರಾವರಿ,‌ ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ, ಸಣ್ಣ ಕೈಗಾರಿಕೆ ಇಲಾಖೆ ನಿಭಾಯಿಸಿದ್ದ‌ ನನಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೇಗೆ ನಿರ್ವಹಣೆ ಮಾಡುವುದು ಎನಿಸಿತ್ತು. ಆದರೆ ಇದೀಗ ಇಲಾಖೆಯ ಜವಾಬ್ದಾರಿ ಮೂರು ತಿಂಗಳಲ್ಲೇ ಖುಷಿ ತರಿಸಿದೆ. ಮುಂದಿನ ದಿನಗಳಲ್ಲಿ ನಾನೇ ಪುಸ್ತಕ ಬರೆಯುತ್ತೇನೆ‌ ಎನ್ನುವ ಮಟ್ಟಕ್ಕೆ ಇಲಾಖೆ ಕಾರ್ಯದಲ್ಲಿ ತಲ್ಲೀನಾಗಿದ್ದೇನೆ ಎಂದರು.‌

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top