ಹೆದ್ದಾರಿ ಪಕ್ಕದಲ್ಲಿ ಜಲಶಕ್ತಿ ಯೋಜನೆ

ಬೆಳಗಾವಿ, ಫೆ.28 : ಕಿತ್ತೂರಿನಿಂದ ಬೆಳಗಾವಿ ಮೂಲಕ ಮಹಾರಾಷ್ಟ್ರ ಗಡಿಯವರೆಗಿನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ‌ಸಂಪೂರ್ಣವಾಗಿ ಜಲಶಕ್ತಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ಬೆಳಗಾವಿ ಜಿಲ್ಲೆಯಿಂದ ಆರಂಭಿಸಲಾಗುವ ಈ ಯೋಜನೆಯನ್ನು ಮುಂಬರುವ ದಿನಗಳಲ್ಲಿ ಇಡೀ ರಾಜ್ಯದಲ್ಲಿ ಅನುಷ್ಢಾನಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದರು. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ (ಫೆ‌28) ನಡೆದ ಒಟ್ಟು 3972 ಕೋಟಿ ರೂಪಾಯಿ ವೆಚ್ಚದ 238 ಕಿ.ಮೀ. ಉದ್ದದ ಐದು ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಶಂಕುಸ್ಥಾಪನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಜ್ಯದ ಎಲ್ಲ ಹೆದ್ದಾರಿ ಪಕ್ಕದಲ್ಲಿ ಜಲಶಕ್ತಿ ಯೋಜನೆ ಜಾರಿಗೊಳಿಸುವ ಮೂಲಕ ಅಭಿವೃದ್ಧಿಗೆ ಹೊಸ ಆಯಾಮ ಒದಗಿಸಲಾಗುವುದು ಎಂದು ತಿಳಿಸಿದರು. ಬೆಳಗಾವಿ ಸೇರಿದಂತೆ ರಾಜ್ಯದ ಇತರ ಕಡೆಯ ರಿಂಗ್ ರಸ್ತೆಯನ್ನು ಆದಷ್ಟು ಬೇಗನೇ ಪೂರ್ಣಗೊಳಿಸಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಸಿಎಂ ಬೊಮ್ಮಾಯಿ ಮನವಿ ಮಾಡಿಕೊಂಡರು.

ಮಹಾರಾಷ್ಟ್ರದ ಕಾರ್ಮಿಕ ಸ್ಥಳಗಳಾದ ಪಂಢರಾಪುರ, ಶಿರಡಿ ಮತ್ತಿತರ ಧಾರ್ಮಿಕ ಸ್ಥಳಗಳನ್ನು ಕರ್ನಾಟಕ ರಾಜ್ಯದ ಧಾರ್ಮಿಕ ಸ್ಥಳಗಳ ಜತೆ ಜೋಡಿಸಲು ವಿನೂತನ ಯೋಜನೆಯನ್ನು ನಿತಿನ್ ಗಡ್ಕರಿ ಅವರು ರೂಪಿಸಿದ್ದಾರೆ. ಎಲ್ಲ ಸಂಸದರು ತಮ್ಮ ವ್ಯಾಪ್ತಿಯ ಹೆದ್ದಾರಿಗಳು ಮತ್ತಿತರ ರಸ್ತೆ ಅಭಿವೃದ್ಧಿಗೆ ದುಂಬಾಲು ಬೀಳುವ ಮೂಲಕ ಇಡೀ ರಾಜ್ಯಕ್ಕೆ ಅತ್ಯುತ್ತಮ ಯೋಜನೆಗಳನ್ನು ತಂದಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿಯವರ ನೆರವಿನಿಂದ ರಾಜ್ಯಕ್ಕೆ ಹಲವಾರು ಯೋಜನೆಗಳು ಲಭಿಸಿವೆ ಎಂದು ಸಂತಸ ವ್ಯಕ್ತಪಡಿಸಿದರು.

ಜಿಎಸ್ ಟಿ ವಿನಾಯಿತಿ; ಸಿಎಂ ಭರವಸೆ: ರಾಜ್ಯದಲ್ಲಿರುವ ಹೆದ್ದಾರಿಗಳು ಮತ್ತು ರಿಂಗ್ ರಸ್ತೆಯ ಅಭಿವೃದ್ಧಿಗಾಗಿ ರಾಜ್ಯ ಸರಕಾರದ‌ ವತಿಯಿಂದ ಜಿ.ಎಸ್.ಟಿ. ವಿನಾಯಿತಿ, ಭೂಸ್ವಾಧೀನ ಮತ್ತಿತರ ಸಹಕಾರವನ್ನು ರಾಜ್ಯ ಸರಕಾರ ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆಯನ್ನು ನೀಡಿದರು. ರಸ್ತೆಗಳು ಅಭಿವೃದ್ಧಿ ಮಾತ್ರವಲ್ಲ ದೇಶದ ಭಾವೈಕ್ಯತೆಗೆ ಬೆಸುಗೆಯಾಗುವೆ ಎಂದು ಅವರು ಅಭಿಪ್ರಾಯಪಟ್ಟರು. ಐದು ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಮೂಲಕ ಬೆಳಗಾವಿಯಲ್ಲಿ ರಸ್ತೆ ಸಂಪರ್ಕ ಕ್ರಾಂತಿ ಆಗಲಿದೆ. ಸಚಿವ ನಿತಿನ ಗಡ್ಕರಿ ಅವರು ಮಹಾರಾಷ್ಟ್ರದ ಲ್ಲಿ ಲೋಕೋಪಯೋಗಿ ಸಚಿವರಾಗಿದ್ದಾಗ ಒಂದೇ ಯೋಜನೆಯಡಿ 58 ಕ್ಕೂ ಅಧಿಕ ಮೇಲ್ಸೆತುವೆ ನಿರ್ಮಿಸಿ ಇಡೀ ದೇಶದ ಗಮನ ಸೆಳೆದಿದ್ದರು. ಬೃಹತ್ ರಸ್ತೆ ಯೋಜನೆಗಳಿಗೆ ಸಮರ್ಪಕವಾಗಿ ಹಣ ಹೊಂದಿಸುವ ಮೂಲಕ ಮೂಲಸೌಕರ್ಯಗಳನ್ನು ಹೇಗೆ ಅಭಿವೃದ್ಧಿ ಪಡಿಸಬೇಕು ಎಂಬುದನ್ನು ದೇಶಕ್ಕೆ ತೋರಿಸಿಕೊಟ್ಟಿದ್ದಾರೆ. ರಾಜ್ಯದಲ್ಲಿ ಒಂದು ರಸ್ತೆ ಮೇಲ್ದರ್ಜೆಗೆ ಏರಿಸಲು ವರ್ಷಗಟ್ಟಲೆ ‌ಬೇಕಾಗಿತ್ತು.ಆದರೆ ಸಚಿವ ನಿತಿನ್ ಗಡ್ಕರಿ‌ ಕಾಲದಲ್ಲಿ ಐದು ಸಾವಿರಕ್ಕೂ ಅಧಿಕ ಕಿ.ಮೀ. ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದರು.

ಧಾರ್ಮಿಕ ದತ್ತಿ ಹಾಗೂ ವಕ್ಫ್ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ, ಲೋಕೋಪಯೋಗಿ ಇಲಾಖೆಯ ಸಚಿವರಾದ ಸಿ.ಸಿ.ಪಾಟೀಲ, ವಿಧಾನಸಭೆ ಉಪ ಸಭಾಧ್ಯಕ್ಷ ಆನಂದ ಮಾಮನಿ, ಬೆಳಗಾವಿ ಸಂಸದರಾದ ಮಂಗಲ ಅಂಗಡಿ, ಚಿಕ್ಕೋಡಿ ಸಂಸದರಾದ ಅಣ್ಣಾಸಾಹೇಬ್ ಜೊಲ್ಲೆ, ವಿಜಯಪುರ ಸಂಸದ ರಮೆಶ್ ಜಿಗಜಿಣಗಿ, ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ, ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಹೇಶ ಕುಮಠಳ್ಳಿ, ರಾಯಬಾಗ ಶಾಸಕ ದುರ್ಯೋಧನ ಐಹೊಳೆ, ಶಾಸಕರಾದ ಅನಿಲ್ ಬೆನಕೆ, ಅಭಯ್ ಪಾಟೀಲ, ಮಹಾದೇವಪ್ಪ ಯಾದವಾಡ, ಮಹಾಂತೇಶ ದೊಡ್ಡಗೌಡ್ರ, ಬಾಗಲಕೋಟ ಶಾಸಕ ವೀರಣ್ಣ ಚರಂತಿಮಠ, ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮತ್ತಿತರರು ಉಪಸ್ಥಿತರಿದ್ದರು.

ಐದು ಯೋಜನೆಗಳಿಗೆ ಶಂಕುಸ್ಥಾಪನೆ: ಬೆಳಗಾವಿ-ಸಂಕೇಶ್ವರ ಬೈಪಾಸ್, ಸಂಕೇಶ್ವರ ಬೈಪಾಸ್-ಮಹಾರಾಷ್ಟ್ರ ಗಡಿಯವರೆಗೆ ಷಟ್ಪಥ ನಿರ್ಮಾಣ ಕಾಮಗಾರಿ; ಚೋರ್ಲಾ-ಜಾಂಬೋಟಿ-ಬೆಳಗಾವಿ ನಡುವಿನ ದ್ವಿಪಥ ಕಾಮಗಾರಿಗಳು; ಇದೇ ರೀತಿ ವಿಜಯಪುರ-ಮುರಗುಂಡಿ(ಎನ್.ಎಚ್.548ಬಿ) ಹಾಗೂ ಸಿದ್ದಾಪುರ-ವಿಜಯಪುರ(ಎನ್.ಎಚ್.561ಎ) ಕಾಮಗಾರಿಗಳಿಗೆ ಕೇಂದ್ರ ಕೇಂದ್ರ ರಸ್ತೆ ಸಾರಿಗೆ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಸಚಿವರಾದ ನಿತಿನ್ ಗಡ್ಕರಿ ಅವರು ಶಂಕುಸ್ಥಾಪನೆ ನೆರವೇರಿಸಿದರು.

Leave a Comment

Your email address will not be published. Required fields are marked *

Translate »
Scroll to Top