ಬೆಂಗಳೂರು: ಹ್ಯೂಮನ್ ಮೆಟಾನ್ಯುಮೊವೈರಸ್ (ಎಚ್ಎಂಪಿವಿ) ಎರಡು ಪ್ರಕರಣಗಳು ಕರ್ನಾಟಕದಲ್ಲಿ ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಬೆಂಗಳೂರಿನ 8 ತಿಂಗಳ ಮಗು ಹಾಗೂ ಇನ್ನೊಂದು ಮಗುವಿನಲ್ಲಿ ಎಚ್ ಎಂಪಿವಿ ಪತ್ತೆಯಾಗಿದೆ ಎಂದು ಹೇಳಿದೆ. 8 ತಿಂಗಳ ಮಗುವನ್ನು ಶೀತ, ಜ್ವರ ಬಂದಿದ್ದ ಕಾರಣ ಮಗುವನ್ನು ಹೆತ್ತವರು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಪರೀಕ್ಷೆ ಮಾಡಿದಾಗ ಎಚ್ಎಂಪಿವಿ ಕಂಡುಬಂದಿದೆ. ಚೀನಾದಲ್ಲಿ ಸದ್ದು ಮಾಡಿರುವ ಹ್ಯೂಮನ್ ಮೆಟಾನ್ಯುಮೊವೈರಸ್ (ಎಚ್ಎಂಪಿವಿ) ಭಾರತದಲ್ಲಿಯೂ ಕೋವಿಡ್ ರೀತಿ ಜನಸಾಮಾನ್ಯರ ಆತಂಕಕ್ಕೆ ಕಾರಣವಾದರೂ ತಜ್ಞರು ಆತಂಕಗೊಳ್ಳುವ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದಾರೆ.ಪ್ರತಿವರ್ಷ ಚಳಿಗಾಲ ಬಂದಾಗ ಶೀತ, ಜ್ವರ ಉಂಟಾಗುವುದು ಸಾಮಾನ್ಯ. ಅದಕ್ಕೆ ವೈರಾಣು ಕಾರಣ ಆಗಿರುತ್ತದೆ. ವೈರಾಣು ಆಗಾಗ ತನ್ನ ಗುಣ ಲಕ್ಷಣಗಳನ್ನು ಬದಲಾಯಿಸುತ್ತಿರುತ್ತದೆ. ಈ ಬಾರಿ ಅದಕ್ಕೆ ಎಚ್ಎಂಪಿವಿ ಎಂದು ಹೆಸರಿಡಲಾಗಿದೆ. ಅಪಾಯಕಾರಿ ವೈರಸ್ ಅಲ್ಲ ಇದು ಎಂದು ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕ ಡಾ. ಧನಂಜಯ ಟಿ. ಎನ್. ತಿಳಿಸಿದ್ದಾರೆ.ಜ್ವರ, ಶೀತ ಇತ್ತೀಚೆಗೆ ಬಂದವರಿಗೆ ಎಚ್ಎಂಪಿವಿ ಬಂದು ಹೋಗಿರಬಹುದು. ಪರೀಕ್ಷೆ ಮಾಡದೇ ಇರೋದ್ರಿಂದ ಗೊತ್ತಾಗಿರಲ್ಲ. ಇದು ಸಾಮಾನ್ಯ ವೈರಸ್ ಎಂದು ಸ್ಪಷ್ಟಪಡಿಸಿದ್ದಾರೆ.ಈ ಬಗ್ಗೆ ಇಲಾಖೆಯು ವಿಶ್ವ ಅರೋಗ್ಯ ಸಂಸ್ಥೆ, ಭಾರತದ ಅರೋಗ್ಯ ಸಚಿವಾಲಯದ ನಿರ್ದೇಶನದಂತೆ ಕಾರ್ಯ ನಿರ್ವಹಿಸಲಿದೆ ಎಂದರು.
ಆರೋಗ್ಯ ಇಲಾಖೆಯ ಮಾರ್ಗಸೂಚಿ
ಏನು ಮಾಡಬೇಕು?
* ಜನಸಂದಣಿ ಇರುವ ಸ್ಥಳಗಳನ್ನು ತಪ್ಪಿಸಿ
* ಕೈಗಳನ್ನು ಸಾಬೂನು ಮತ್ತು ನೀರು ಅಥವಾ ಆಲ್ಕೋಹಾಲ್ ಆಧಾರಿತ ಸ್ಯಾನಿಟೈಜರ್ನಿಂದ ಹೆಚ್ಚಾಗಿ ತೊಳೆಯಿರಿ
* ಕೆಮ್ಮುವಾಗ ಅಥವಾ ಸೀನುವಾಗ, ಬಾಯಿ ಮತ್ತು ಮೂಗನ್ನು ಕರವಸ್ತ್ರ
ಅಥವಾ ಟಿಶ್ಯೂ ಪೇಪರ್ನಿಂದ ಮುಚ್ಚಿಕೊಳ್ಳಿ
* ಜ್ವರ, ಕೆಮ್ಮು ಮತ್ತು ಸೀನುವಿಕೆ ಇದ್ದಲ್ಲಿ ಸಾರ್ವಜನಿಕ ಸ್ಥಳಗಳಿಂದ ದೂರವಿರಿ
* ಮನೆಯಲ್ಲಿಯೇ ಇರಿ ಮತ್ತು ನೀವು ಅನಾರೋಗ್ಯದಿಂದ ಬಳಲುತ್ತಿದ್ದರೆ ಇತರರೊಂದಿಗೆ ಸಂಪರ್ಕವನ್ನು ಮಿತಿಗೊಳಿಸಿ
* ಸಾಕಷ್ಟು ನೀರು ಕುಡಿಯಿರಿ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸಿ
ಏನು ಮಾಡಬಾರದು?
* ಕಣ್ಣು, ಮೂಗು ಮತ್ತು ಬಾಯಿಯನ್ನು ಆಗಾಗ್ಗೆ ಸ್ಪರ್ಶಿಸುವುದನ್ನು
* ಅನಾರೋಗ್ಯದ ಜನರೊಂದಿಗೆ ನಿಕಟ ಸಂಪರ್ಕ, ಟವೆಲ್, ಲಿನಿನ್ ಇತ್ಯಾದಿಗಳನ್ನು ಹಂಚಿಕೊಳ್ಳುವುದನ್ನು
* ಟಿಶ್ಯೂ ಪೇಪರ್ ಮತ್ತು ಕೈ ಕರ್ಚೀಫ್ ಮರುಬಳಕೆ
* ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು
* ವೈದ್ಯರನ್ನು ಸಂಪರ್ಕಿಸದೆ ಔಷಧಿ ಸೇವಿಸುವುದು
ರಾಜ್ಯದಾದ್ಯಂತ ವ್ಯಾಪಕ ಕಟ್ಟೆಚ್ಚರ
ರಾಜ್ಯದಲ್ಲಿ ಕೆಲವು ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (ಎಚ್ ಎಂ ಪಿ ವಿ) ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ.
ಚೀನಾದಲ್ಲಿ ವ್ಯಾಪಕ ಪ್ರಮಾಣದಲ್ಲಿ ಸೋಂಕು ಹರಡಿರುವ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಇಲಾಖೆ ಈ ಬಗ್ಗೆ ವಿಶೇಷ ಕಣ್ಗಾವಲು ಹಾಕಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಕರ್ನಾಟಕದಲ್ಲಿ ಎರಡು ಎಚ್ ಎಂ ಪಿ ವಿ ಪ್ರಕರಣಗಳನ್ನು ಪತ್ತೆಹಚ್ಚಿದೆ. ದೇಶಾದ್ಯಂತ ಉಸಿರಾಟದ ಕಾಯಿಲೆಗಳನ್ನು ಮೇಲ್ವಿಚಾರಣೆ ಮಾಡಲು ಐಸಿಎಂಆರ್ ನಿರಂತರವಾಗಿ ನಡೆಯುತ್ತಿರುವ ಪ್ರಯತ್ನಗಳ ಭಾಗವಾಗಿ ಬಹು ಉಸಿರಾಟದ ವೈರಲ್ ರೋಗಕಾರಕಗಳ ಮೇಲಿನ ನಿರಂತರ ಕಣ್ಗಾವಲು ಮೂಲಕ ಎರಡೂ ಪ್ರಕರಣಗಳನ್ನು ಗುರುತಿಸಿದೆ.
ಎಚ್ ಎಂ ಪಿ ವಿ ಈಗಾಗಲೇ ಭಾರತ ಸೇರಿದಂತೆ ಜಾಗತಿಕವಾಗಿ ಹರಡುತ್ತಿದೆ ಮತ್ತು ಎಚ್ ಎಂಪಿವಿ ಯೊಂದಿಗೆ ಸಂಬಂಧಿಸಿದ ಉಸಿರಾಟದ ಕಾಯಿಲೆಗಳ ಪ್ರಕರಣಗಳು ವಿವಿಧ ದೇಶಗಳಲ್ಲಿ ವರದಿಯಾಗಿವೆ. ಅಲ್ಲದೇ ಐಸಿಎಂಆರ್ ಮತ್ತು ಸಮಗ್ರ ರೋಗ ನಿಗಾ ಕಾರ್ಯಕ್ರಮದ ಸಂಪರ್ಕ ಜಾಲದಡಿ ಪ್ರಸ್ತುತ ದತ್ತಾಂಶವನ್ನು ಆಧರಿಸಿ, ದೇಶದಲ್ಲಿ ಜ್ವರದಂತಹ ಅಸ್ವಸ್ಥತೆ (ಐಎಲ್ ಐ) ಅಥವಾ ತೀವ್ರ ಉಸಿರಾಟದ ಕಾಯಿಲೆ (ಎಸ್ ಎ ಆರ್ ಐ) ಪ್ರಕರಣಗಳಲ್ಲಿ ಯಾವುದೇ ಅಸಾಮಾನ್ಯ ಏರಿಕೆ ಕಂಡುಬಂದಿಲ್ಲ.
ಮೊದಲೇ ಇದ್ದ ಬ್ರಾಂಕೋಪ್ನ್ಯುಮೋನಿಯಾ ಕಾಯಿಲೆಯೊಂದಿಗೆ ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಾದ ನಂತರ 3 ತಿಂಗಳ ಹೆಣ್ಣು ಶಿಶುವಿನಲ್ಲಿ ಎಚ್ ಎಂಪಿವಿ ರೋಗಪತ್ತೆ ಮಾಡಲಾಗಿದೆ. ಮೊದಲೇ ಬ್ರಾಂಕೋಪ್ನ್ಯುಮೋನಿಯಾ ಹೊಂದಿದ್ದ 8 ತಿಂಗಳ ಗಂಡು ಮಗು ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಗೆ ದಾಖಲಾದ ನಂತರ 2025ರ ಜನವರಿ 3 ರಂದು ಎಚ್ ಎಂಪಿವಿ ಪರೀಕ್ಷೆಯಲ್ಲಿ ಪಾಸಿಟಿವ್ ಕಂಡು ಬಂದಿದೆ. ಮಗು ಈಗ ಚೇತರಿಸಿಕೊಳ್ಳುತ್ತಿದೆ ಎಂದು ವರದಿಯಾಗಿದೆ.
ಭಾಧಿತ ರೋಗಿಗಳಲ್ಲಿ ಯಾರೊಬ್ಬರೂ ಅಂತಾರಾಷ್ಟ್ರೀಯ ಪ್ರಯಾಣದ ಹಿನ್ನೆಲೆಯನ್ನು ಹೊಂದಿಲ್ಲ ಎಂಬುದು ಮುಖ್ಯವಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯವು ಲಭ್ಯವಿರುವ ಎಲ್ಲಾ ನಿಗಾ ಚಾನೆಲ್ಗಳ ಮೂಲಕ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ. ಐಸಿಎಂಆರ್ ವರ್ಷವಿಡೀ ಎಚ್ ಎಂ ಪಿ ವಿ ಹರಡುತ್ತಿರುವ ಬಗ್ಗೆ ನಿಗಾ ವಹಿಸುತ್ತಿದೆ. ದೇಶದಲ್ಲಿ ಉಸಿರಾಟದ ಕಾಯಿಲೆಗಳಲ್ಲಿ ಯಾವುದೇ ಸಂಭಾವ್ಯ ಹೆಚ್ಚಳವನ್ನು ನಿಭಾಯಿಸಲು ಸುಸಜ್ಜಿತವಾಗಿದೆ. ಅಗತ್ಯವಿದ್ದರೆ ಸಾರ್ವಜನಿಕ ಆರೋಗ್ಯ ವಲಯದಲ್ಲಿ ಮಧ್ಯ ಪ್ರವೇಶಿಸಲು ಸನ್ನದ್ಧವಾಗಿದೆ.