ಕಂದಾಯ ಯೋಜನೆಗಳ ಕುರಿತ ‘ಸುದ್ದಿಗೋಷ್ಠಿ’ ಯಲ್ಲಿ ಹೇಮಂತ್ ಕುಮಾರ್ ಹೇಳಿಕೆ

ರಾಜ್ಯದಲ್ಲಿ ಇನಾಂ ರದ್ದತಿ ಅಭಿಯಾನದಲ್ಲಿ ಬಳ್ಳಾರಿ ಜಿಲ್ಲೆ ಪ್ರಥಮ: ಸಹಾಯಕ ಆಯುಕ್ತ ಹೇಮಂತ್ ಕುಮಾರ್

ಬಳ್ಳಾರಿ : ದಶಕದಿಂದ ಉಳುಮೆ ಮಾಡುತ್ತಿರುವವರಿಗೆ ಪಹಣಿಯಲ್ಲಿ ಇನಾಮು ಎಂದು ನೋಂದಣಿಯಾಗಿದ್ದು, ಈ ಬಗ್ಗೆ ರೈತರು ನಮೂನೆ 1 ಮತ್ತು 1ಎ ಸಲ್ಲಿಸಿದ್ದರೆ, ಈ ಕುರಿತು ಚರ್ಚಿಸಿ ಇತ್ಯರ್ಥ ಮಾಡಿ, ಯಾವುದೇ ವಿಳಂಬ ಇಲ್ಲದೇ ಹಕ್ಕುಪತ್ರ (ಪಟ್ಟಾ) ವಿತರಣೆ ಮಾಡಲಾಗುತ್ತಿದೆ. ಇದರಲ್ಲಿ ಬಳ್ಳಾರಿ ಜಿಲ್ಲೆಯು ಮೊದಲ ಸ್ಥಾನದಲ್ಲಿದೆ ಎಂದು ಸಹಾಯಕ ಆಯುಕ್ತ ಹೇಮಂತ್ ಕುಮಾರ್ ಅವರು ತಿಳಿಸಿದರು. ನಗರದ ನೂತನ ಜಿಲ್ಲಾಡಳಿತ ಭವನದ ತಹಶೀಲ್ದಾರ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಭೂಮಿಯ ಹಕ್ಕನ್ನು ರೈತರಿಗೆ ನೀಡುವುದರಿಂದ ಅವರು ಬ್ಯಾಂಕ್ ಗಳಿಂದ ಸಾಲ ಪಡೆಯಲು, ಸರ್ಕಾರಿ ಉದ್ದೇಶಕ್ಕೆ ಭೂಸ್ವಾಧೀನ ಮಾಡಿಕೊಂಡಾಗ ಪರಿಹಾರ ಪಡೆದುಕೊಳ್ಳಲು ಅನುಕೂಲವಾಗುತ್ತದೆ ಎಂದೂ ತಿಳಿಸಿದರು.

 

  ವಿವಿಧೆಡೆ ದಶಕಗಳಿಂದ ರೈತರು ಉಳುಮೆ ಮಾಡುತ್ತಿರುವವರು(ಇನಾಂ) ಪಹಣಿ ಪಡೆಯುವುದಕ್ಕೆ ಅನುಕೂಲವಾಗಲು ಹಾಗೂ ಕೆಲವು ಇನಾಮುಗಳ ರದ್ದಿಯಾತಿಗೆ ಅರ್ಹರು ಅರ್ಜಿ ಸಲ್ಲಿಸಲು ಒಂದು ವರ್ಷ ಅವಧಿ ವಿಸ್ತರಿಸಲಾಗಿತ್ತು ಎಂದರು. ಹಲವು ದಶಕಗಳಿಂದ ರೈತರು ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ಆದರೆ, ಅದಕ್ಕೆ ಸರಿಯಾದ ಪಹಣಿ ಇಲ್ಲದ ಕಾರಣ ರೈತರಿಗೆ ಬ್ಯಾಂಕ್‍ಗಳಲ್ಲಿ ಸಾಲ ಸಿಗುತ್ತಿಲ್ಲ. ಸರಕಾರಿ ಯೋಜನೆಗಳಿಗೆ ಭೂಸ್ವಾಧೀನವಾದರೆ ಪರಿಹಾರ ಸಿಗದೆ ಸಂಕಷ್ಟಕ್ಕೊಳಗಾಗುತ್ತಿದ್ದರು. ಹೀಗಾಗಿ ಜಿಲ್ಲಾಡಳಿತ ಮತ್ತು ಕಂದಾಯ ಇಲಾಖೆಯು ಮುತುವರ್ಜಿ ವಹಿಸಿ ರೈತರ ಹಿತದೃಷ್ಟಿಯಿಂದ ಇನಾಂ ರದ್ದತಿ ಅಭಿಯಾನ ಕೈಗೊಂಡಿದೆ ಎಂದರು. ಜಿಲ್ಲೆಯ ಐದು ತಾಲೂಕಿನಿಂದ 11,643 ಅರ್ಜಿಗಳು ಸಲ್ಲಿಕೆಯಾಗಿದ್ದು, ಅವುಗಳಲ್ಲಿ 3,264 ಅರ್ಜಿಗಳನ್ನು ಇಲ್ಲಿಯವರೆಗೆ ವಿಲೇವಾರಿ ಮಾಡಿ ರೈತರಿಗೆ ಪಟ್ಟಾ ನೀಡಲಾಗಿದೆ. 8,330 ಅರ್ಜಿಗಳು ಬಾಕಿ ಇವೆ. ಅವುಗಳನ್ನು ಸೆಪ್ಟಂಬರ್ ತಿಂಗಳ ಅಂತ್ಯದೊಳಗೆ ಇತ್ಯರ್ಥಗೊಳಿಸಲಾಗುವುದು ಎಂದರು.

ಇನಾಂ ರದ್ದಿಯಾತಿ ಕೋರಿ ಅರ್ಜಿ ಸಲ್ಲಿಸಿದ ತಾಲೂಕುವಾರು ಅಂಕಿ – ಅಂಶ:

ಸಲ್ಲಿಕೆಯಾದ ಒಟ್ಟು ಅರ್ಜಿಗಳು : ಬಳ್ಳಾರಿ – 4351, ಸಿರುಗುಪ್ಪ – 2946, ಸಂಡೂರು – 5, ಕುರುಗೋಡು – 3959, ಕಂಪ್ಲಿ – 373, ಒಟ್ಟು – 11,634.

ವಿಲೇವಾರಿಯಾದ ಅರ್ಜಿಗಳು : ಬಳ್ಳಾರಿ – 1210, ಸಿರುಗುಪ್ಪ – 892, ಸಂಡೂರು – 3, ಕುರುಗೋಡು – 857, ಕಂಪ್ಲಿ – 302, ಒಟ್ಟು – 3,264.

ಬಾಕಿಯಿರುವ ಅರ್ಜಿಗಳು : ಬಳ್ಳಾರಿ – 3141, ಸಿರುಗುಪ್ಪ – 2054, ಸಂಡೂರು – 2, ಕುರುಗೋಡು – 3102, ಕಂಪ್ಲಿ – 31(ಅದರಲ್ಲಿ 40 ಅರ್ಜಿ ಫಾರಂ 1), ಒಟ್ಟು – 8,330.

ಇನಾಂ ನಲ್ಲಿ ವೈಯಕ್ತಿಕ ಮತ್ತು ದೇವದಾಯಿ ಎಂಬ ಎರಡು ವಿಧಗಳಿವೆ. ಇನಾಂ ರದ್ದತಿಗೆ ಯಾರು  ಮಧ್ಯವರ್ತಿಗಳಿಗೆ ಹಣ ನೀಡಬೇಕಿಲ್ಲ. ಕೇವಲ ಸರ್ಕಾರದ ಶುಲ್ಕ ಪಾವತಿಸಿ ಹಕ್ಕುಪತ್ರ (ಪಟ್ಟಾ) ಪಡೆಯಬಹುದಾಗಿದೆ ಎಂದು ಹೇಳಿದರು.

371 ಜೆ ಪ್ರಮಾಣ ಪತ್ರ :

  ಕಳೆದ ವರ್ಷದಂತೆ ಈ ವರ್ಷವೂ ಜಿಲ್ಲೆಯಲ್ಲಿ 371 ಜೆ  ಪ್ರಮಾಣ ಪತ್ರ ನೀಡಲು ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಿಂದ ನೇರವಾಗಿ ಅರ್ಜಿ ಪಡೆದು ವಿತರಿಸಲಾಗುತ್ತದೆ. ಜಿಲ್ಲೆಯ 23 ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಿಂದ 6,900 ಅರ್ಜಿಗಳನ್ನು ಸ್ವೀಕರಿಸಿದ್ದು, ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು ಎಂದು ತಿಳಿಸಿದರು.

ಉನ್ನತಿ ಯೋಜನೆ :

  ವಿದ್ಯಾರ್ಥಿಗಳು, ಪಾಲಕರು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಉನ್ನತಿ ಯೋಜನೆ ಜಾರಿಗೊಳಿಸಲಾಗಿದೆ. ಶಾಲೆ ಹಂತದಲ್ಲೇ ಜಾತಿ ಮತ್ತು ಆದಾಯ ಪ್ರಮಾಣಪತ್ರ ದೊರಕಿಸಿಕೊಡುವ ಕೆಲಸ ಜಿಲ್ಲಾಡಳಿತದಿಂದ ನಡೆದಿದೆ ಎಂದು ತಿಳಿಸಿದರು.

  ಜಿಲ್ಲೆಯಲ್ಲಿ 41,568 ವಿದ್ಯಾರ್ಥಿಗಳು ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆದಿಲ್ಲ. ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಮುಖ್ಯಶಿಕ್ಷಕರು ಶಾಲೆಯಲ್ಲೇ ದಾಖಲೆಗಳನ್ನು ಸಂಗ್ರಹಿಸಿ, ಕಂದಾಯ ಇಲಾಖೆಗೆ ಸಲ್ಲಿಸಬೇಕು. ಸಕಾಲಕ್ಕೆ ಜಾತಿ ಮತ್ತು ಆದಾಯ ಪ್ರಮಾಣ ನೀಡಲಾಗುವುದು ಎಂದು ತಿಳಿಸಿದರು.

    ಪ್ರಸ್ತಕ ಸಾಲಿನಲ್ಲಿ  41568 ಮಕ್ಕಳಿಗೆ ಬರುವ ಸೆಪ್ಟಂಬರ್ ತಿಂಗಳ ಅಂತ್ಯದೊಳಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ವಿತರಿಸಲಾಗುವುದು ಎಂದರು.

 

   ವೃದ್ಯಾಪ್ಯ, ವಿಧವ, ವಿಕಲಚೇತನ ಸೇರಿದಂತೆ ವಿವಿಧ ಮಾಶಾಸನದ ಪಿಂಚಣಿ ಬಿಡುಗಡೆಯಲ್ಲಿ ವಿಳಂಬ ಇಲ್ಲ. ಇದರಡಿ 3500 ವೇತನಗಳು ಅಮಾನತು ಮಾಡಲಾಗಿತ್ತು. ಅವುಗಳ ಪರಿಶೀಲನೆ ಮಾಡಿ ಮಂಜೂರಾತಿ ನೀಡಿದ್ದು, ಈಗ ಕೇವಲ 75 ಮಾತ್ರ ಬಾಕಿ ಇವೆ ಎಂದು ತಿಳಿಸಿದ ಅವರು, ಪಿಂಚಣಿ ಹಣ ನೀಡಲು ಅಂಚೆ ಇಲಾಖೆಯವರು ಸೇರಿದಂತೆ ಯಾರೇ ಆಗಲಿ ಹಣ ಕೇಳಿದರೆ ದಾಖಲೆ ಸಮೇತ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

Facebook
Twitter
LinkedIn
WhatsApp
Telegram
Tumblr
Email

Leave a Comment

Your email address will not be published. Required fields are marked *

Translate »
Scroll to Top