ಬೆಂಗಳೂರು : ರಾಜ್ಯದಲ್ಲಿ ಧಾರಾಕಾರ ಮಳೆಯಿಂದಾಗಿ ಹಲವು ಜಿಲ್ಲೆಗಳು ಸಂಕಷ್ಟಕ್ಕೆ ಸಿಲುಕಿವೆ. ಸಕಲೇಶಪುರ ತಾಲೂಕಿನ ಶಿರಾಡಿ ಘಾಟ್ ಹಾಗೂ ಚಾರ್ಮಾಡಿ ಘಾಟ್‌ನಲ್ಲಿ ಮಣ್ಣು, ಬಂಡೆಕಲ್ಲುಗಳು ಬಿದ್ದಿದ್ದರಿಂದ ಹೆದ್ದಾರಿ ಸಂಚಾರ ಸ್ಥಗಿತಗೊಂಡಿದೆ.
ಬಂಡೆಕಲ್ಲುಗಳ ತೆರವು ಕಾರ್ಯ ನಡೆಯುತ್ತಿರುವುದರಿಂದ ಕರಾವಳಿ ಭಾಗವನ್ನು ಸಂಪರ್ಕಿಸುವ ಈ ಹೆದ್ದಾರಿಗಳಲ್ಲಿ ವಾಹನ ಸಂಚಾರವನ್ನು ನಿಲ್ಲಿಸಲಾಗಿದೆ. ಬೆಂಗಳೂರಿನಿಂದ ಕರಾವಳಿ ಭಾಗಕ್ಕೆ ರೈಲು ಸಂಪರ್ಕವನ್ನು ಸ್ಥಗಿತಗೊಳಿಸಲಾಗಿದೆ. ನೇತ್ರಾವತಿ ನದಿ ಉಕ್ಕಿ ಹರಿಯುತ್ತಿದ್ದು, ಉಪ್ಪಿನಂಗಡಿ ಬಳಿಯ ಹಲವೆಡೆ ಹೆದ್ದಾರಿಗಳು ಮುಳುಗಡೆಯಾಗಿವೆ.
ಸಕಲೇಶಪುರದ ಹೆದ್ದಾರಿ ಸಂಖ್ಯೆ 75 ರಲ್ಲಿ ಭೂಕುಸಿತ ಸಂಭವಿಸಿದ ಸ್ಥಳದ ಬಳಿ ಅಗ್ನಿಶಾಮಕ ದಳದ ಸಿಬ್ಬಂದಿ, ರಾಷ್ಟ್ರೀಯ ಹೆದ್ದಾರಿ ಸಿಬ್ಬಂದಿ ಮತ್ತು ವಿಪತ್ತು ನಿರ್ವಹಣಾ ತಂಡಗಳು ಭೂಕುಸಿತದಿಂದ ಉಂಟಾದ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿವೆ. ಹಾಸನದ ಯಡಕುಮಾರಿ ಮತ್ತು ಕಡಗರವಳ್ಳಿ ನಿಲ್ದಾಣಗಳ ನಡುವೆ ಭೂಕುಸಿತ ಸಂಭವಿಸಿದ ಸ್ಥಳದಲ್ಲಿ ಹಳಿಗಳನ್ನು ಪುನಃಸ್ಥಾಪಿಸಲು ರೈಲ್ವೆ ಇಲಾಖೆ ಪ್ರಯತ್ನಿಸುತ್ತಿದೆ. ಭಾರೀ ಮಳೆ, ಭೂಕುಸಿತ ಮತ್ತು ರಸ್ತೆಗಳು ಜಲಾವೃತಗೊಂಡಿರುವುದರಿಂದ ಕೊಡಗಿಗೆ ರಸ್ತೆ ಸಂಪರ್ಕಕ್ಕೂ ತೊಂದರೆಯಾಗಿದೆ.
ಭದ್ರಾ, ಕೆಆರ್‌ಎಸ್ ಮತ್ತು ಕಬಿನಿ ಜಲಾಶಯಗಳಿಗೆ ಹೆಚ್ಚಿನ ಒಳಹರಿವು ವರದಿಯಾಗಿದ್ದು, ನದಿ ತೀರದ ನಿವಾಸಿಗಳಿಗೆ ಎಚ್ಚರಿಕೆ ನೀಡಿದ ನಂತರ ನೀರನ್ನು ಕೆಳಕ್ಕೆ ಬಿಡಲಾಗುತ್ತಿದೆ.
ಉತ್ತರಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆ ಸುರಿಯುತ್ತಿರುವುದರಿಂದ, ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಕರಾವಳಿಯ ಐದು ತಾಲುಕುಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ ಆದೇಶಿಸಿದ್ದಾರೆ.
ಶರಾವತಿ ಯೋಜನೆಯ ಲಿಂಗನಮಕ್ಕಿ ಜಲಾಶಯದಿಂದ ನಾಳೆ ಬೆಳಗ್ಗೆ 10 ರಿಂದ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಲಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಕಾರಾವಾರದಲ್ಲಿ ಕೆ.ಪಿ.ಸಿ.ಎಲ್ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಬೀಳುತ್ತಿರುವುದರಿಂದ ಲಿಂಗನಮಕ್ಕಿ ಜಲಾಶಯಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಜಲಾಶಯದ ಗರಿಷ್ಠ ಮಟ್ಟವು 1 ಸಾವಿರದ 819 ಅಡಿಗಳಾಗಿದ್ದು, ಇಂದಿನ ಜಲಾಶಯದ ನೀರಿನ ಮಟ್ಟ 1 ಸಾವಿರದ 812 ಅಡಿಗಳಗೆ ತಲುಪಿದೆ. ಜಲಾಶಯದ ಒಳ ಹರಿವು ಸುಮಾರು 82 ಸಾವಿರ ಕ್ಯೂಸೆಕ್ ಗಿಂತಲೂ ಅಧಿಕವಾಗಿದೆ.
ಅಣೆಕಟ್ಟೆಯ ಕೆಳದಂಡೆಯಲ್ಲಿ ಹಾಗೂ ನದಿಯ ಪಾತ್ರದುದ್ದಕ್ಕೂ ವಾಸಿಸುತ್ತಿರುವ ಸಾರ್ವಜನಿಕರು ತಮ್ಮ ಜನ, ಜಾನುವಾರುಗಳೊಂದಿಗೆ, ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರವಾಗಬೇಕು ಹಾಗೂ ಪ್ರವಾಸಿಗರು ಅನಗತ್ಯವಾಗಿ ನದಿಗೆ ಇಳಿಯಬಾರದೆಂದು ನಿಗಮದ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೆ.ಆರ್.ಎಸ್ ಹಾಗೂ ಕಬಿನಿ ಜಲಾಶಯಗಳಿಂದ ಹೆಚ್ಚುವರಿ ನೀರು ಹೊರ ಹರಿವಿನಿಂದ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಹಿನ್ನೆಲೆ ತುರ್ತು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮೈಸೂರು ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದ್ದಾರೆ.
ಪ್ರವಾಹ ಪೀಡಿತ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ರಾಜಸ್ವ ನಿರೀಕ್ಷಕರು,
ಗ್ರಾಮ ಆಡಳಿತಾಧಿಕಾರಿಗಳು ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿ
ವಾಸವಿದ್ದು ಪರಿಸ್ಥಿತಿಯನ್ನು ಅವಲೋಕಿಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು.
ಸೇತುವೆ ಮುಳುಗಡೆಯಾಗುವ ಕಡೆ ವಾಹನಗಳ ಹಾಗೂ ಸಾರ್ವಜನಿಕರ ಪ್ರವೇಶ ನಿರ್ಭಂಧಿಸಲು
ಸೂಕ್ತ ಬ್ಯಾರಿಕೇಡ್ ಅಳವಡಿಸಿ ನಿಗಾ ವಹಿಸಲು ಪೊಲೀಸ್ ಹಾಗೂ ಸ್ಥಳೀಯ ಸಂಸ್ಥೆಗಳ ಸಿಬ್ಬಂಧಿಯನ್ನು ಕರ್ತವ್ಯಕ್ಕೆ
ನಿಯೋಜಿಸುವಂತೆ ತಿಳಿಸಿದ್ದಾರೆ.