ರಾಜ್ಯ ಕಾಂಗ್ರೆಸ್ ಸರಕಾರದಲ್ಲಿ ಪ್ರತಿಯೊಂದಕ್ಕೆ ರೇಟ್ ಕಾರ್ಡ್ ಫಿಕ್ಸ್ ಆಗಿದೆ..! : ಹೆಚ್.ಡಿ.ಕೆ ಆರೋಪ

Kannada Nadu
ರಾಜ್ಯ ಕಾಂಗ್ರೆಸ್ ಸರಕಾರದಲ್ಲಿ ಪ್ರತಿಯೊಂದಕ್ಕೆ ರೇಟ್ ಕಾರ್ಡ್ ಫಿಕ್ಸ್ ಆಗಿದೆ..! : ಹೆಚ್.ಡಿ.ಕೆ ಆರೋಪ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರಕಾರದಲ್ಲಿ ಪ್ರತಿಯೊಂದಕ್ಕೆ ರೇಟ್ ಕಾರ್ಡ್ ಫಿಕ್ಸ್ ಆಗಿದೆ . ಕಂದಾಯ ಇಲಾಖೆಯಲ್ಲಿ ಎಲ್ಲಾ ಪೋಸ್ಟ್ ಗಳಿಗೂ ರೇಟ್ ನಿಗದಿ ಮಾಡಲಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ನೇರ ಆರೋಪ ಮಾಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 60% ಕಮೀಷನ್ ಆರೋಪವನ್ನು ಪುನರುಚ್ಚರಿಸಿದರು.
60% ಕಮೀಷನ್ ಆರೋಪಕ್ಕೆ ಕುಮಾರಸ್ವಾಮಿ ದಾಖಲೆ ಕೊಡಲಿ ಎಂದು ಹೇಳುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಮುಖಂಡರು, ಗುತ್ತಿಗೆದಾರರೇ ಪರ್ಸಂಟೇಜ್ ಆರೋಪ ಮಾಡುತ್ತಿದ್ದಾರೆ. ಅವರನ್ನು ಪರ್ಸಂಟೇಜ್ ಕೇಳದಿದ್ದರೆ ಅವರು ಯಾಕೆ ಆರೋಪ ಮಾಡುತ್ತಿದ್ದರು. ಸರ್ಕಾರ ಅವರನ್ನೇ ಕೇಳಿ ದಾಖಲೆ ಪಡೆದುಕೊಳ್ಳಬೇಕು ಎಂದರು ಕೇಂದ್ರ ಸಚಿವರು.ಸಿದ್ದರಾಮಯ್ಯ ಅವರು ಮಹಾನ್ ನಾಯಕರು. ಪೇ ಸಿಎಂ ಅಂತ ಪೋಸ್ಟರ್ ಅಂಟಿಸಲು ಹೋಗಿದ್ದರು. ಅವರು ಇಲ್ಲಿಯವರೆಗೆ ಯಾವ ದಾಖಲೆ ಇಟ್ಟಿದ್ದಾರೆ ಜನರ ಮುಂದೆ. ಕೆಂಪಣ್ಣ ಹೇಳಿದರು ಕೆಂಪಣ್ಣ ಹೇಳಿದರು ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಆದರೆ, ಕೆಂಪಣ್ಣ ಅವರಿಂದ ಸಿದ್ದರಾಮಯ್ಯ ಅವರು ದಾಖಲೆ ಪಡೆದುಕೊಳ್ಳಬೇಕಿತ್ತಲ್ಲವೇ? ಈಗ ಕಂಟ್ರಾಕ್ಟರ್ ಗಳೇ 60% ವಸೂಲಿ ಬಗ್ಗೆ ಆರೋಪ ಮಾಡುತ್ತಿದ್ದಾರೆ. ಅದಕ್ಕಿಂತ ಸಾಕ್ಷಿ ಬೇಕಾ ಇವರಿಗೆ? ಈ ಆಟ ಸರಕಾರ ಬಿಡಬೇಕು ಎಂದು ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದರು.
ಕೃಷ್ಣಭೈರೇಗೌಡ ವಿರುದ್ದ ಕುಮಾರಸ್ವಾಮಿ ವಾಗ್ದಾಳಿ:
ಮಗ ಸೋತಿರುವುದಕ್ಕೆ ಹತಾಶರಾಗಿ ಕುಮಾರಸ್ವಾಮಿ 60% ಆರೋಪ ಮಾಡುತ್ತಿದ್ದಾರೆ ಎಂದು ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ. ನಾನು ಮಗ ಸೋತಿರುವುದಕ್ಕೆ ಹತಾಶನಾಗಿದ್ದೇನೋ ಇಲ್ಲವೋ. ಎಂಬುದ್ಧು ಇರಲಿ. ಅದನ್ನು ಬಿಟ್ಟು ಮೊದಲು 60% ಕಮೀಷನ್ ಬಗ್ಗೆ ಉತ್ತರ ಹೇಳಲಿ ಎಂದು ಸಚಿವರು ಸವಾಲು ಹಾಕಿದರು.ಕಂದಾಯ ಇಲಾಖೆ ಸತ್ಯ ಮಾರ್ಗದಲ್ಲಿ ನಡೆಯುತ್ತಿದೆಯಾ? ಬೆಂಗಳೂರು ಎಸಿ ಪೋಸ್ಟ್ ಗೆ ಎಷ್ಟು ದುಡ್ಡು ತೆಗೆದುಕೊಳ್ಳುತ್ತಿದ್ದೀರಿ? ಎಷ್ಟು ರೇಟ್ ಫಿಕ್ಸ್ ಮಾಡಿಕೊಂಡಿದ್ದೀರಾ? ಆ ಹಣ ಯಾರು ಯಾರಿಗೆ ಹೋಗುತ್ತದೆ? ಏನೇನು ದಂಧೆ ನಡೆಸುತ್ತಿದ್ದೀರಿ ಎನ್ನುವುದು ನಮಗೆ ಗೊತ್ತಿಲ್ಲವಾ? ಎಂದು ಕಂದಾಯ ಇಲಾಖೆಯಲ್ಲಿ ಅಕ್ರಮ ನಡೆಯುತ್ತಿದೆ ಎಂದು ಕುಮಾರಸ್ವಾಮಿ ಅವರು ಗಂಭೀರ ಆರೋಪ ಮಾಡಿದರು.
ಸರಕಾರ ಸಹಿ ಮಾರಾಟಕ್ಕೆ ಇಟ್ಟಿದೆ:
ನಾನು ಕೂಡ ಎರಡು ಸಿಎಂ ಆಗಿ ಅಧಿಕಾರ ನಡೆಸಿದ್ದೇನೆ. ನಾನು ಹರಿಶ್ಚಂದ್ರ ಎಂದು ಎಲ್ಲೂ ಹೇಳಿಲ್ಲ. ವಿಧಾನಸಭೆಯಲ್ಲಿಯೇ ಈ ಮಾತು ಹೇಳಿದ್ದೇನೆ. ಚುನಾವಣೆ ನಡೆಸಬೇಕಾದರೆ ಇನ್ನೊಬ್ಬರ ಹತ್ತಿರ ಕೈ ಚಾಚಲೇಬೇಕು. ಆದರೆ ನಾನು ಅಧಿಕಾರ ನಡೆಸುವಾಗ ನನ್ನ ಸಹಿಯನ್ನು ಮಾರಾಟಕ್ಕೆ ಇಟ್ಟಿರಲಿಲ್ಲ. ಈ ಸರಕಾರ ಪ್ರತಿಯೊಂದಕ್ಕೂ ಸಹಿಯನ್ನು ಮಾರಾಟಕ್ಕೆ ಇಟ್ಟಿದೆ. ಪ್ರತಿಯೊಂದಕ್ಕೂ ಲೂಟಿ ಹೊಡೆದುಕೊಂಡು ಕೂತಿದ್ದಾರೆ. ಈ ಸರಕಾರದಲ್ಲಿ ರೇಟ್ ಕಾರ್ಡ್ ಮೊದಲೇ ಫಿಕ್ಸ್ ಆಗಿ ಹೋಗಿದೆ. ನಾನು ಪ್ರಾರಂಭದಲ್ಲೇ ಈ ಸರ್ಕಾರದ ರೇಟ್ ಕಾರ್ಡ್ ಬಗ್ಗೆ ಹೇಳಿದ್ದೆ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.ನಾನು ಸತ್ಯ ಹರಿಶ್ಚಂದ್ರ ಎಂದು ಎಲ್ಲೂ ಹೇಳಿಲ್ಲ. ಇವತ್ತಿನ ರಾಜಕಾರಣಕ್ಕೆ ದುಡ್ಡು ಬೇಕು. ಪ್ರೀತಿ ವಿಶ್ವಾಸದಿಂದ ನಾವು ಕೆಲಸ ಮಾಡಿದಾಗ ಚುನಾವಣೆ ಸಮಯದಲ್ಲಿ ಯಾರೋ ನಾಲ್ವರು ಸಹಾಯ ಮಾಡುತ್ತಾರೆ. ಆದರೆ ಅಧಿಕಾರ ಇಟ್ಟುಕೊಂಡು ಪ್ರತಿದಿನ ನನ್ನ ಸಹಿಯನ್ನು ಮಾರಾಟಕ್ಕೆ ಇಟ್ಟಿರಲಿಲ್ಲ. ಈ ಸರಕಾರ ಪ್ರತಿಯೊಂದಕ್ಕೂ ತನ್ನ ಸಹಿಯನ್ನು ಮಾರಾಟಕ್ಕೆ ಇಟ್ಟಿದೆ. ಪ್ರತೀ ಕ್ಷಣವೂ ಈ ಸರಕಾರದಲ್ಲಿ ಮಾರಾಟವೇ ನಡೆಯುತ್ತಿದೆ ಎಂದು ಅವರು ಕಿಡಿಕಾರಿದರು.
ಪ್ರತಿಕ್ರಿಯೆಗೆ ನಕಾರ:
ಡಿ.ಕೆ.ಶಿವಕುಮಾರ್ ತಮಿಳುನಾಡಿನಲ್ಲಿ ಶತ್ರು ಸಂಹಾರ ಪೂಜೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಕೇಂದ್ರ ಸಚಿವರು; ಎಲ್ಲರನ್ನೂ ದೇವರೇ ಕಾಪಾಡಬೇಕು. ಅಧಿಕಾರ ಬೇಕು ಎಂದು ದೇವರ ಮೊರೆ ಹೋಗಿದ್ದು ಸಾಮಾನ್ಯ. ಆದರೆ, ಎಲ್ಲೋ ಶತ್ರುನಾಶಕ್ಕೆ ಹೋಗುವುದು ನನಗೆ ಗೊತ್ತಿಲ್ಲ ಎಂದರು.ಇವತ್ತು ಲಕ್ಷಾಂತರ ಜನ ವೈಕುಂಠ ಏಕಾದಶಿ. ವೈಕುಂಠದ ಬಾಗಿಲು ತೆರೆಯುತ್ತದೆ ಎನ್ನುವ ನಂಬಿಕೆ ಇದೆ. ದೇವರಲ್ಲಿ ಪ್ರಾರ್ಥನೆ ಮಾಡಿ, ಎಲ್ಲರಿಗೂ ಒಳ್ಳೆಯದು ಮಾಡು ತಂದೆ ಎಂದು ಬೇಡಿಕೊಂಡೆ ಎಂದು ಅವರು ಹೇಳಿದರು.ದಲಿತ ಶಾಸಕರ ಡಿನ್ನರ್ ಪಾರ್ಟಿ ವಿಚಾರದ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು; ಪರಿಶಿಷ್ಟ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೊಟ್ಟಿಲ್ಲ, ಅದಕ್ಕೆ ಸಭೆ ಮಾಡುತ್ತಿದ್ದೇವೆ ಎಂದು ಅವರಲ್ಲಿ ಕೆಲವರು ಹೇಳಿದ್ದಾರೆ. ಡಿನ್ನರ್ ಪಾರ್ಟಿಯಲ್ಲಿ ವಿದ್ಯಾರ್ಥಿಗಳ ಸ್ಕಾಲರ್ ಶಿಪ್ ಬಗ್ಗೆ ಚರ್ಚೆ ಮಾಡುವುದಾದರೆ ಕ್ಯಾಬಿನೆಟ್ ಇರುವುದು ಯಾಕೆ? ಪರಿಶಿಷ್ಟರಿರಲಿ, ಯಾವುದೇ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸಿಗದೇ ಇದ್ದರೆ ಕ್ಯಾಬಿನೆಟ್ ನಲ್ಲಿ ಕೂತು ಚರ್ಚೆ ಮಾಡಬೇಕಾ? ಅಥವಾ ಡಿನ್ನರ್ ಪಾರ್ಟಿಯಲ್ಲಿ ಚರ್ಚೆ ಮಾಡಬೇಕಾ? ಎಂದು ಕಟುವಾಗಿ ಟೀಕಿಸಿದರು. ಕಾಂಗ್ರೆಸ್‌ನಲ್ಲಿ ಸಿಎಂ ಫೈಟ್ ವಿಚಾರದ ಬಗ್ಗೆ ಉತ್ತರಿಸಲು ನಿರಾಕರಿಸಿದ ಅವರು; ಅದು ಅವರ ಪಕ್ಷದ ವಿಚಾರ. ಅವರ ಪಕ್ಷದ ವಿಚಾರ ಅವರು ಚರ್ಚೆ ಮಾಡಿಕೊಳ್ಳಲಿ ಬಿಡಿ ಎಂದು ಕುಮಾರಸ್ವಾಮಿ ಅವರು ಹೇಳಿದರು.

Share This Article
WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

error: Content is protected !!
";