ಕೆಆರ್ ಎಸ್ ಸೇರಿ ಎಲ್ಲಾ ಅಣೆಕಟ್ಟುಗಳ ಸ್ಥಿತಿಗತಿ ಪರಿಶೀಲನೆ ಮಾಡುವಂತೆ ಹೆಚ್.ಡಿ.ಕುಮಾರಸ್ವಾಮಿ ಸಲಹೆ

ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಲಾಕ್ ತುಂಡಾದ ಘಟನೆ

ಬೆಂಗಳೂರು : ಹೊಸಪೇಟೆಯಲ್ಲಿರುವ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಲಾಕ್ ತುಂಡಾಗಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು; ರಾಜ್ಯ ಸರಕಾರ ಎಲ್ಲಾ ಜಲಾಶಯಗಳ ಕ್ರಸ್ಟ್ ಗೇಟ್ ಗಳ ಸ್ಥಿತಿಗತಿಗಳನ್ನು ಪರಿಶೀಲನೆ ಮಾಡಬೇಕು ಎಂದು ಸಲಹೆ ಮಾಡಿದ್ದಾರೆ.

          ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಸೀತಾಪುರದಲ್ಲಿ ಭತ್ತ ನಾಟಿ ಕಾರ್ಯಕ್ರಮದಲ್ಲಿ ಮಾತನಾಡಿ, ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಲಾಕ್ ಕಟ್ ವಿಚಾರ ಅತ್ಯಂತ ಕಳವಳಕಾರಿ. ಇದು ದೊಡ್ಡ ಅನಾಹುತ. 19ನೇ ಕ್ರಸ್ಟ್ ಗೇಟ್ ತೆರೆದುಕೊಂಡು ಭಾರೀ ಪ್ರಮಾಣದ ನೀರು ಹರಿದು ಹೋಗುತ್ತಿದೆ. ಇದರಿಂದ ಜಲಾಶಯದ 60 ಟಿಎಂಸಿ ನೀರು ಖಾಲಿಯಾಗುತ್ತದೆ. ಒಳ್ಳೆಯ ಮಳೆಯಾಗಿ ಜಲಾಶಯ ತುಂಬಿತ್ತು. ಈ ನೀರನ್ನೇ ನಂಬಿಕೊಂಡಿದ್ದ ರೈತರಿಗೆ ತೊಂದರೆ ಆಗಿದೆ ಎಂದರು ಸಚಿವರು.

 

          70 ವರ್ಷಗಳ ಹಿಂದೆಯೇ ಈ ಜಲಾಶಯವನ್ನು ನಿರ್ಮಾಣ ಮಾಡಲಾಗಿದೆ. ಹಿಂದೆಯೂ ಅಲ್ಲಿ ಅನೇಕ ಸಮಸ್ಯೆಗಳು ಬೆಳಕಿಗೆ ಬಂದಿದ್ದವು. ನಾರಾಯಣಪುರ, ಆಲಮಟ್ಟಿ ಅಣೆಕಟ್ಟುಗಳಲ್ಲಿ  ಸ್ಟಾಪ್ ಲಾಕ್ ಗೇಟ್ ಅಳವಡಿಸಲಾಗಿದೆ. ಆದರೆ ತುಂಗಭದ್ರಾ ಅಣೆಕಟ್ಟೆಯಲ್ಲಿ ಸ್ಟಾಪ್ ಲಾಕ್ ಗೇಟ್ ಅಳವಡಿಕೆ ಮಾಡಿಲ್ಲ. ಅದಕ್ಕಾಗಿ ನೀರು ನಿಲ್ಲಿಸಲು ಸಾಧ್ಯವಾಗಿಲ್ಲ. ಇದು ರೈತರ ವಿಚಾರದಲ್ಲಿ ಚೆಲ್ಲಾಟವಾಡಿದ ಹಾಗೆಯೇ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.

          ಟಿಬಿ ಡ್ಯಾಂ ಬೋರ್ಡ್ ಟೆಕ್ನಿಕಲ್ ವಿಚಾರದಲ್ಲಿ ಕಾಟಚಾರದ ವರದಿ ಕೊಟ್ಟಿವೆ. ಅದಕ್ಕಾಗಿ ಇಂತಹ ಪರಿಸ್ಥಿತಿ ಬಂದಿದೆ. ಇದನ್ನು ಕೂಡಲೇ ಸರಿ ಪಡಿಸಿಕೊಳ್ಳಬೇಕಾಗಿದೆ ಎಂದು ಸಚಿವರು ಸಲಹೆ ನೀಡಿದರು.

          ಕೃಷ್ಣರಾಜ ಸಾಗರ (ಕೆಆರ್‌ಎಸ್) ವಿಚಾರದಲ್ಲಿ ಸರ್ಕಾರ ತಕ್ಷಣ ಎಚ್ಚೆತ್ತುಕೊಳ್ಳುವುದು ಒಳ್ಳೆಯದು. ಕೆಆರ್‌ಎಸ್ ಡ್ಯಾಂನಲ್ಲೂ ಸ್ಟಾಪ್ ಲಾಕ್ ಗೇಟ್ ಇಲ್ಲ. ಆ ಅಣೆಕಟ್ಟು ಕಟ್ಟುವಾಗ ಸ್ಟಾಪ್ ಲಾಕ್ ಇಲ್ಲದ ಕಾರಣ, ಹಾಕಿರಲಿಲ್ಲ. ತುಂಗಭದ್ರಾ ಅಣೆಕಟ್ಟೆಯ ಪರಿಸ್ಥಿತಿ ಗಮನಿಸಿದರೆ ದೂರದೃಷ್ಟಿಯಿಂದ ಕೆಆರ್‌ಎಸ್‌ಗೆ ಸ್ಟಾಪ್ ಲಾಕ್ ಹಾಕಬೇಕು. ತುಂಗಭದ್ರಾ ಜಲಾಶಯದ ಸಮಸ್ಯೆ ಸರ್ಕಾರದ ನಿರ್ಲಕ್ಷ್ಯ ಎನ್ನಲು ಆಗುವುದಿಲ್ಲ ಎಂದು ಸಚಿವರು ಅಭಿಪ್ರಾಯಪಟ್ಟರು.

 

          ಅಣೆಕಟ್ಟೆ ನಿರ್ವಹಣೆಗೆ ತಾಂತ್ರಿಕ ಸಮಿತಿ ಇರುತ್ತದೆ. ಆ ಸಮಿತಿ ವರ್ಷಕ್ಕೊಮ್ಮೆ  ಜಲಾಶಯದ ಸಮಸ್ಯೆಗೆಳನ್ನು ಪರಿಶೀಲನೆ ಮಾಡುತ್ತಿರುತ್ತದೆ. ಆಗ ಕಾಟಚಾರಕ್ಕೆ ಪರಿಶೀಲನೆ ಮಾಡಿ ವರದಿ ನೀಡುತ್ತದೆ. ಅದರ ಪರಿಣಾಮವೇ ಈ ರೀತಿಯ ಅನಾಹುತಗಳು. ಇದನ್ನು ದುರಸ್ಥಿ ಮಾಡುವುದು ಸರ್ಕಾರಕ್ಕೆ ಇದು ಕ್ಲಿಷ್ಟಕರ ಮತ್ತು ಸವಾಲು. ತಾಂತ್ರಿಕ ಪರಿಣಿತರ ಜತೆ ಚರ್ಚೆ ಮಾಡಿ  ಸಮಸ್ಯೆ ಬಗೆಹರಿಸಬೇಕು ಎಂದು ಕೇಂದ್ರ ಸಚಿವರು ಹೇಳಿದರು.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top