ದ್ವೇಷ ರಾಜಕಾರಣ ದೇಶವನ್ನು ಆವರಿಸುತ್ತಿದೆ.

ಉತ್ತಮ ಭಾರತಕ್ಕೆ ಬುನಾದಿ ಅತ್ಯಂತ ಅರ್ಥಪೂರ್ಣವಾದ, ಅಗತ್ಯವಾದ ಸಮಾವೇಶ
ಮೋದಿ ಅವರು ಪ್ರಧಾನಿ ಆದ ಬಳಿಕ ದೇಶದ ಮಹಿಳೆಯರು, ದಲಿತರು, ಶೂದ್ರರು, ಅಲ್ಪಸಂಖ್ಯಾತರು, ಆದಿವಾಸಿ-ಬುಡಕಟ್ಟುಗಳು ತಮ್ಮ ಹಕ್ಕುಗಳಿಂದ ವಂಚಿತರಾಗಿದ್ದಾರೆ
ನೆಹರೂ ಅವರ ಕಾಲದಿಂದ ಸಾಮಾಜಿಕ ನ್ಯಾಯದ ತೇರನ್ನು ಎಳೆಯುತ್ತಿರುವುದು ಕಾಂಗ್ರೆಸ್ ಮಾತ್ರ
ಕಾಂಗ್ರೆಸ್ ಪ್ರಜಾಪ್ರಭುತ್ವದ, ಜಾತ್ಯತೀತತೆಯ ರಥವನ್ನು ದೇಶದಲ್ಲಿ ಮುನ್ನಡೆಸುತ್ತಿದೆ
ನಾವು ಪ್ರೀತಿಯ ಭಾರತವನ್ನು ಮರು ಸೃಷ್ಟಿಸಬೇಕಿದೆ: ಯುವ ಸಮೂಹಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ

 

ಬೆಂಗಳೂರು : ದೇಶದಲ್ಲಿ ನಿರುದ್ಯೋಗ ಹೆಚ್ಚುತ್ತಿದೆ, ಬೆಲೆ ಏರಿಕೆ ಕಾರಣದಿಂದ ಬಡವರು-ಮಧ್ಯಮ ವರ್ಗದವರು ಹೈರಾಣಾಗಿರುವ ಹೊತ್ತಲ್ಲೇ ಬಿಜೆಪಿಯ ದ್ವೇಷ ರಾಜಕಾರಣ ಇಡಿ ದೇಶವನ್ನು ಆವರಿಸುತ್ತಿದೆ. ನಾವು ದ್ವೇಷ ಅಳಿಸಿ ಪ್ರೀತಿಯ ಭಾರತವನ್ನು ಪುನರ್ ನಿರ್ಮಿಸಲು “ಉತ್ತಮ‌ ಭಾರತಕ್ಕೆ ಅಡಿಪಾಯ” ಸಮಾವೇಷ ಸಹಕಾರಿಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ಅರಮನೆ ಮೈದಾನದಲ್ಲಿ ಅಖಿಲ ಭಾರತ ಯುವ ಕಾಂಗ್ರೆಸ್ ಆಯೋಜಿಸಿದ್ದ “ಉತ್ತಮ ಭಾರತದ ಅಡಿಪಾಯ” ರಾಷ್ಟ್ರೀಯ ಯುವ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ನಿರುದ್ಯೋಗ, ಬಡತನ ಹೆಚ್ಚಾಗುವಾಗಲೇ ದೇಶದಲ್ಲಿ ದ್ವೇಷವನ್ನು ಹರಡುವ ಪಿತೂರಿ ರಾಜಕಾರಣ ನಡೆಯುತ್ತಿದೆ. ನೆಹರೂ ಅವರ ಕಾಲದಿಂದ ಭಾರತಕ್ಕೆ ಹಾಕಲಾಗಿರುವ ಮಾನವೀಯತೆ, ಜಾತ್ಯತೀತತೆ ಮತ್ತು ವೈಜ್ಞಾನಿಕ‌ ಪ್ರಗತಿ ಮತ್ತು ಅಭಿವೃದ್ಧಿಯ ಅಡಿಪಾಯ ಮೋದಿ ಅವರು ಪ್ರಧಾನಿ ಆದ ನಂತರ ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ. ಆದರೆ, ಈ ಸಮಾವೇಶ ಮತ್ತೆ ನಮ್ಮ ಭಾರತವನ್ನು ಪ್ರಜಾಪ್ರಭುತ್ವ ಮೌಲ್ಯಗಳ ಆಧಾರದಲ್ಲಿ ಮತ್ತೆ ಎತ್ತಿ ನಿಲ್ಲಿಸಲು ನೆರವಾಗುತ್ತದೆ.

ಸಾವಿರಾರು ವರ್ಷಗಳಿಂದ ಸಾಮರಸ್ಯದಿಂದ ಇದ್ದ ಭಾರತವನ್ನು  ಮೋದಿ ಅವರು ಪ್ರಧಾನಿ ಆದ ಬಳಿಕ ಬಿಜೆಪಿ-ಆರ್ ಎಸ್ ಎಸ್ ಪರಿವಾರದ ಕಾರ್ಯಕರ್ತರು ಹಾಳುಗೆಡವಿದ್ದಾರೆ.

ಈ ದೇಶದ ರೈತರು, ಕಾರ್ಮಿಕರು, ಶ್ರಮಿಕರ ಸಮಸ್ಯೆಗಳ ಬಗ್ಗೆ ಯಾವತ್ತೂ ಮಾತನಾಡದ ಬಿಜೆಪಿ ಪರಿವಾರ ಈ ರೈತ-ಕಾರ್ಮಿಕ-ಶ್ರಮಿಕರ ಮಕ್ಕಳು, ವಿದ್ಯಾರ್ಥಿಗಳನ್ನೇ ದ್ವೇಷದ ಕುಲುಮೆಗೆ ತಳ್ಳಿ ದೇಶವನ್ನು ಮತ್ತೆ ಹಿಂದಕ್ಕೆ ಎಳೆದೊಯ್ಯುವ ಪ್ರಯತ್ನ ಮಾಡುತ್ತಿದೆ. ಇದಕ್ಕೆ ಈ ದೇಶದ ಯುವಕರು, ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಅವಕಾಶ ಕೊಡುವುದಿಲ್ಲ ಎನ್ನುವ ನಂಬಿಕೆ ನನಗಿದೆ ಎಂದರು.

ಕಾಂಗ್ರೆಸ್ ಸಂವಿಧಾನದ ಆಶಯಗಳಿಗೆ ಬದ್ದವಾಗಿದೆ. ಕಾರ್ಮಿಕರು, ಮಹಿಳೆಯರು, ದಲಿತ, ಶೂದ್ರರು, ಹಿಂದುಳಿದವರು, ಎಲ್ಲಾ ಜಾತಿಯ ಬಡವರ ಬದುಕನ್ನು ಉನ್ನತೀಕರಿಸುವ ಮತ್ತು ಈ ಎಲ್ಲಾ ಸಮುದಾಯಗಳ ಹಕ್ಕುಗಳನ್ನು ರಕ್ಷಿಸುವ ಅಭಿಯಾನವನ್ನು ಕಾಂಗ್ರೆಸ್ ನಿರಂತರವಾಗಿ ನಡೆಸುತ್ತಾ, ಹೋರಾಟ ನಡೆಸುತ್ತಿದೆ. ಸಾಮಾಜಿಕ ನ್ಯಾಯದ ಪರಂಪರೆಯನ್ನು ಮುನ್ನಡೆಸುವ ರಥ ಕಾಂಗ್ರೆಸ್ ಪಕ್ಷ ಎಂದರು.

ಬಿಜೆಪಿ ಪರಿವಾರ ಅಧಿಕಾರಕ್ಕೆ ಬಂದು ಮೋದಿ ಪ್ರಧಾನಿ ಆದ ಬಳಿಕ ದೇಶದ ಆರ್ಥಿಕತೆಯನ್ನು ಹಾಳುಗೆಡವಿದ್ದಾರೆ. ಕೇವಲ 9 ವರ್ಷದಲ್ಲಿ 118 ಲಕ್ಷ ಕೋಟಿ ಸಾಲ ಮಾಡಿ ದೇಶದ ಸಾಲವನ್ನು 170 ಲಕ್ಷ ಕೋಟಿಗೆ ಏರಿಸಿದ್ದಾರೆ. ಕಳೆದ 75 ವರ್ಷಗಳಿಂದ ಇದ್ದ ದೇಶದ ಸಾಲ 53 ಲಕ್ಷ ಕೋಟಿ ಮಾತ್ರ. ಈ ಸಾಲವನ್ನು 170 ಲಕ್ಷ ಕೋಟಿಗೆ ಏರಿಸಿದ ಕೀರ್ತಿ ಪ್ರಧಾನಿ ಮೋದಿ ಮತ್ತು ಬಿಜೆಪಿ-ಆರ್ ಎಸ್ ಎಸ್ ಪರಿವಾರದ್ದು. ಈ ಮಟ್ಟದ ಬೆಲೆ ಏರಿಕೆ ಮತ್ತು ಹಣದುಬ್ಬರ ಬಿಜೆಪಿ ಪರಿವಾರದ ಸಾಧನೆ. ಕಚ್ಚಾ ತೈಲದ ಬೆಲೆ ಕಡಿಮೆ ಇದ್ದಾಗಲೂ ಪೆಟ್ರೋಲ್, ಡೀಸೆಲ್ ಬೆಲೆ ಈ ಮಟ್ಟಕ್ಕೆ ಏರಿಕೆ ಆಗಲು ಮೋದಿ ಅವರ ತಲೆಕೆಳಗಾದ ಕೆಟ್ಟ ಆರ್ಥಿಕ ನೀತಿಗಳೇ ಕಾರಣ ಎಂದರು.

ಆದಿಕವಿ ಪಂಪ ‘ಮನುಷ್ಯ ಜಾತಿ ತಾನೊಂದೇ ವಲಂ’ ಎಂದು ಹೇಳಿದ್ದರು. ಇಂಥಾ ಮಾನವೀಯತೆ, ವೈವಿದ್ಯತೆ ಮತ್ತು ಏಕತೆಯನ್ನು ವಿಶ್ವಕ್ಕೆ ಸಾರಿದ ನೆಲ ನಮ್ಮದು. ನಮ್ಮ ಸಂವಿಧಾನ ಕೂಡ ಇದೇ ಮೌಲ್ಯವನ್ನು ಎತ್ತಿ ಹಿಡಿದಿದೆ. ಈ ನೆಲದಲ್ಲಿ ನಡೆಯುತ್ತಿರುವ “ಉತ್ತಮ ಭಾರತದ ಬುನಾದಿ” ಯುವ ಸಮಾವೇಶ ಇಡೀ ದೇಶದಲ್ಲಿ ಪ್ರತಿಧ್ವನಿಸಲಿದೆ ಎಂದರು.

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಕೆ.ಜೆ.ಜಾರ್ಜ್ , ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ.ಶ್ರೀನಿವಾಸ್, ರಾಜ್ಯ ಯುವ ಅಧ್ಯಕ್ಷ ನಲಪಾಡ್ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜ್ ಸೇರಿ ಎಲ್ಲಾ ರಾಜ್ಯಗಳ ಯುವ ಕಾಂಗ್ರೆಸ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

ಭಾಷಣದ ಹೈಲೈಟ್ಸ್

* ಮೋದಿ ಸರ್ಕಾರ ಶ್ರೀಮಂತ ಕಾರ್ಪೋರೇಟ್ ಗಳ ಲಕ್ಷಾಂತರ ಕೋಟಿ ಸಾಲ ಮನ್ನಾ ಮಾಡಿ, ಬಡವರು ತಿನ್ನುವ ಮಂಡಕ್ಕಿ, ಮೊಸರಿನ ಮೇಲೆ ತೆರಿಗೆ ವಿಧಿಸಿದೆ. ಇದನ್ನು ಯುವ ಸಮೂಹ ಬೀದಿ ಬೀದಿಯಲ್ಲಿ ಪ್ರಶ್ನಿಸಬೇಕು.

* ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಭ್ರಷ್ಟಾಚಾರ, ದುರಾಡಳಿತ, ಜನ ವಿರೋಧಿ ನೀತಿ, ಬೆಲೆ ಏರಿಕೆ, ಹಣದುಬ್ಬರವನ್ನು ತಂದಿತು. ಇದರಿಂದ ರೊಚ್ಚಿಗೆದ್ದ ನಾಡಿನ ಜನತೆ ಬಿಜೆಪಿ ಕಿತ್ತೆಸೆದು ಕಾಂಗ್ರೆಸ್ ಅಧಿಕಾರಕ್ಕೆ ತಂದರು.

* ನಾವು ಐದು ಗ್ಯಾರಂಟಿಗಳ ಮೂಲಕ ನಾಡಿನ ಜನರ ಸಂಕಷ್ಟ ಕಡಿಮೆ ಮಾಡಿದೆ. ಬಿಜೆಪಿಯನ್ನು ದೇಶದಾದ್ಯಂತ ಕಿತ್ತೊಗೆಯುವ ಕೆಲಸವನ್ನು ದೇಶದ ಯುವಕರು ಮಾಡುವುದರಲ್ಲಿ ಅನುಮಾನವಿಲ್ಲ.

Facebook
Twitter
LinkedIn
WhatsApp
Telegram
Email

Leave a Comment

Your email address will not be published. Required fields are marked *

Translate »
Scroll to Top