ಬೆಂಗಳೂರು: ‘ಬಿಗ್ ಬಾಸ್’ ಕನ್ನಡದ 11ನೇ ಆವೃತ್ತಿಯ ರಿಯಾಲಿಟಿ ಶೋನಲ್ಲಿ ಹನುಮಂತ ಲಮಾಣಿ ಅವರು ವಿಜಯಶಾಲಿಯಾಗಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11ರ ವಿಜೇತರಾಗಿ ಹನುಮಂತ ಹೊರಹೊಮ್ಮಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ದೊಡ್ಮನೆಗೆ ಎಂಟ್ರಿಕೊಟ್ಟಿದ್ದ ಹನುಮಂತ ವಿಜೇತರಾಗಿ ಹೊರಹೊಮ್ಮಿರುವುದು ಅಚ್ಚರಿ ಮೂಡಿಸಿದೆ. ಆನ್‍ಲೈನ್ ಮತದಾನದ ಮೂಲಕ ವೀಕ್ಷಕರಿಂದ 5.23 ಕೋಟಿ ಮತಗಳನ್ನು ಪಡೆದಿದ್ದ ಹನುಮಂತ, ಬಿಗ್ ಬಾಸ್ ರಿಯಾಲಿಟಿ ಶೋ ಇತಿಹಾಸದಲ್ಲಿಯೇ ಅತ್ಯಧಿಕ ಮತ ಪಡೆದ ಸ್ಪರ್ಧಿ ಎಂಬ ದಾಖಲೆ ಬರೆದಿದ್ದಾರೆ.
ತೀವ್ರ ಕುತೂಹಲ ಕೆರಳಿಸಿದ್ದ ಅಂತಿಮ ಸುತ್ತಿನಲ್ಲಿ ನಿರೂಪಕರಾದ ನಟ ಸುದೀಪ್ ಅವರು ಹನುಮಂತ ಅವರ ಕೈ ಎತ್ತಿ ಹಿಡಿಯುವ ಮೂಲಕ ಗೆಲುವು ಘೋಷಿಸಿದರು.
ರಜತ್ 2ನೇ ರನ್ನರ್ ಅಪ್ ಆಗಿ ಹೊರಬಂದರು. ಅಂತಿಮವಾಗಿ ಬಿಗ್ ಬಾಸ್ ನಿರೂಪಕ ಕಿಚ್ಚ ಸುದೀಪ್ ಅವರು ಹನುಮಂತ ಮತ್ತು ತ್ರಿವಿಕ್ರಮ್ ಅವರ ಕೈಗಳನ್ನು ಇಡಿದಿದ್ದರು. ಅಂತಿಮವಾಗಿ ಹನುಮಂತನ ಕೈ ಅನ್ನು ಎತ್ತುವ ಮೂಲಕ ಬಿಗ್ ಬಾಸ್ ಕನ್ನಡ ಸೀಸನ್ 11ರ ವಿಜೇತರನ್ನು ಘೋಷಿಸಿದರು. ಬಿಗ್ ಬಾಸ್ ವಿಜೇತರಿಗೆ 50 ಲಕ್ಷ ರೂ. ಬಹುಮಾನ ಸಿಗಲಿದೆ.
ವೈಲ್ಡ್ ಕಾರ್ಡ್ ಪ್ರವೇಶ
ಕಲರ್ಸ್ ಕನ್ನಡ ವಾಹಿನಿಯಲ್ಲಿ 11ನೇ ಆವೃತ್ತಿಯ ಬಿಗ್‍ಬಾಸ್ ಆರಂಭಗೊಂಡಿದ್ದಾಗ, ಹೊಡೆದಾಟದ ಕಾರಣಕ್ಕೆ ಇಬ್ಬರು ಸ್ಪರ್ಧಿಗಳು ಮನೆಯಿಂದ ಹೊರಗೆ ಬಿದ್ದರು. ಇದೇ ವೇಳೆಯೇ ಹನುಮಂತ, ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಬಾಸ್ ಮನೆ ಪ್ರವೇಶಿಸಿದ್ದರು. ತಮ್ಮ ಸರಳತೆ, ಹಾಡುಗಾರಿಕೆ ಹಾಗೂ ಉತ್ತರ ಕರ್ನಾಟಕ ಶೈಲಿನ ಮಾತುಗಳ ಮೂಲಕವೇ ಹನುಮಂತ ಪ್ರಸಿದ್ಧಿ ಪಡೆದು ಈಗ ಜಯಶಾಲಿಯಾಗಿದ್ದಾರೆ.