ಬೆಂಗಳೂರು: ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲ್ಲೂಕಿನ ಮೂರ್ಬಾಂದ್ ಬೆಟ್ಟದ ಬಳಿ ಮೇಕೆಗಳನ್ನು ಮೇಯಿಸುತ್ತಿದ್ದ ಮಹಿಳೆಯನ್ನು ಹುಲಿಯೊಂದು ಕೊಂದು ಹಾಕಿದ್ದು ಇಂದು ಮೃತದೇಹ ಪತ್ತೆಯಾಗಿದೆ.
ಮೃತರನ್ನು ಎನ್.ಬೇಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಳದಹಾಡಿಯ ೪೮ ವರ್ಷದ ಚಿಕ್ಕಮ್ಮ ಎಂದು ಗುರುತಿಸಲಾಗಿದೆ.
ಮಹಿಳೆಯ ಮೇಲೆ ದಾಳಿ ಮಾಡಿದ ಹುಲಿಯು, ಮೃತದೇಹವನ್ನು ಸುಮಾರು ೨೦೦ ಮೀಟರ್‌ವರೆಗೆ ಎಳೆದೊಯ್ದಿದೆ. ಅರಣ್ಯ ವೀಕ್ಷಣೆಯ ಟವರ್ ಬಳಿ ಒಂದು ಕಾಲನ್ನು ತಿಂದು ಉಳಿದ ಭಾಗವನ್ನು ಬಿಟ್ಟು ಹೋಗಿದೆ. ಮಹಿಳೆಯೊಂದಿಗೆ ಕುರಿ ಮೇಯಿಸುತ್ತಿದ್ದ ಮತ್ತೊಬ್ಬರು ಗ್ರಾಮಕ್ಕೆ ತೆರಳಿ ಮಾಹಿತಿ ನೀಡಿದಾಗ ಘಟನೆ ನಡೆದಿರುವುದು ತಿಳಿದುಬಂದಿದೆ. ಅಂತರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಡಿಸಿಎಫ್ ಪ್ರಭಾಕರನ್, ಎಸಿಎಫ್ ರವೀಂದ್ರ, ಆರ್‌ಎಫ್‌ಒ ಮಂಜುನಾಥ್ ಬಾಗೇವಾಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಇದೇ ವೇಳೆ ಮೃತ ಮಹಿಳೆಯ ಕುಟುಂಬದವರಿಗೆ ಅಧಿಕಾರಿಗಳು ಸಾಂತ್ವನ ಹೇಳಿ, ೫ ಲಕ್ಷ ಪರಿಹಾರದ ಚೆಕ್ ವಿತರಿಸಿದ್ದಾರೆ.