“ಪೊರಕೆಯಲ್ಲಿ ಗನ್ ಹಿಡಿಯೋಕೆ ಕಾರಣವೇನು ಗೊತ್ತಾ ; ಎಕ್ಕ ಸಿನಿಮಾದ ಮಾತುಕತೆ “
ಈ ವರ್ಷ ಕನ್ನಡ ಚಿತ್ರರಂಗದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ ‘ಎಕ್ಕ’. ಕಳೆದ ಆರು ತಿಂಗಳಿನಿಂದ ಕನ್ನಡ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿಲ್ಲ. 2025ರ ಫಸ್ಟ್ ಹಾಫ್ ಮುಗಿದು ಹೋಗಿದೆ. ಇನ್ನೇನಿದ್ದರೂ ಸೆಕೆಂಡ್ ಹಾಫ್‌ನಲ್ಲಿ ಏನಾದರೂ ಚಮತ್ಕಾರ ಆಗಬೇಕಷ್ಟೇ. 2025ರ ದ್ವಿತೀಯಾರ್ಧದಲ್ಲಿ ‘ಎಕ್ಕ’ ಎಲ್ಲರ ಗಮನ ಸೆಳೆದಿದೆ. ಯುವ ರಾಜ್‌ಕುಮಾರ್ ಅಭಿನಯದ ಈ ಸಿನಿಮಾ ಮೂಲಕನಾದರೂ ಚಿತ್ರರಂಗದ ದಿಕ್ಕು ಬದಲಾಗುತ್ತಾ? ಎಂದು ಸಿನಿಮಾ ಮಂದಿ ಎದುರು ನೋಡುತ್ತಿದ್ದಾರೆ.
ಇದೂವರೆಗೂ ಕನ್ನಡದಲ್ಲಿ ಹಿಟ್ ಲಿಸ್ಟ್ ಸೇರಿದ ಏಕೈಕ ಸಿನಿಮಾ ‘ಮಾದೇಶ’. ವಿನೋದ್ ಪ್ರಭಾಕರ್ ನಟನೆಯ ಈ ಸಿನಿಮಾ ಹಿಟ್ ಅಂತ ಸಾಬೀತಾಗಿದೆ. ಈಗ ಸೆಕೆಂಡ್ ಹಾಫ್‌ನಲ್ಲಿ ‘ಎಕ್ಕ’ ಸಿನಿಮಾ ಮೇಲೆ ಸಿನಿಮಾ ಮಂದಿ ಕಣ್ಣಿದೆ. ಈಗಾಗಲೇ ಟೀಸರ್ ಹಾಗೂ ಹಾಡು ಪ್ರೇಕ್ಷಕರಿಗೆ ಕಿಕ್ ಕೊಟ್ಟಿದೆ. ಈ ಹಾಡನ್ನು ಥಿಯೇಟರ್‌ನಲ್ಲಿ ಕಣ್ತುಂಬಿಕೊಳ್ಳುವುದಕ್ಕಾದರೂ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುತ್ತಾರೆಂಬ ನಂಬಿಕೆ ಹುಟ್ಟಿಕೊಂಡಿದೆ.
ಜುಲೈ 18ಕ್ಕೆ ‘ಎಕ್ಕ’ ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗುತ್ತಿದೆ. ಈ ಬೆನ್ನಲ್ಲೇ ಚಿತ್ರತಂಡ ಭರ್ಜರಿಯಾಗಿ ಪ್ರಚಾರ ಮಾಡುವುದಕ್ಕೆ ಶುರು ಮಾಡಿದೆ. ಈ ವೇಳೆ ಫಿಲ್ಮಿಬೀಟ್ ಕನ್ನಡಕ್ಕೆ ಯುವ ರಾಜ್‌ಕುಮಾರ್ ‘ಎಕ್ಕ’ ಸಿನಿಮಾದ ಬಗ್ಗೆ ಹತ್ತು ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ಟೀಸರ್‌ನಲ್ಲಿ ಜಾತ್ರೆ ಕನ್ನಡ, ಪೊರಕೆಯಲ್ಲಿ ಗನ್ ಹಿಡಿದು ಲುಕ್ ಕೊಟ್ಟಿದ್ದರ ಹಿನ್ನೆಲೆ ಬಗ್ಗೆ ಯುವ ರಾಜ್‌ಕುಮಾರ್ ಮಾತಾಡಿದ್ದಾರೆ. ಅದರ ಝಲಕ್ ಇಲ್ಲಿದೆ.
ಸೆಟ್ಟಿನ ವಾತಾವರಣ ಹೊಸತಲ್ಲ “ಸಿನಿಮಾ ಸೆಟ್ಟಿನ ವಾತಾರಣ ನನಗೆ ಯಾವತ್ತೂ ಹೊಸತು ಅಂತ ಅನಿಸಲಿಲ್ಲ. ನಾನು ನಟನೆ ಮಾಡುವುದಕ್ಕೆ ಶುರು ಮಾಡಿದಾಗಿನಿಂದಲೂ ನನಗೆ ಹೊಸತು ಅನಿಸಲಿಲ್ಲ. ಸಿನಿಮಾದಲ್ಲಿ ಕೆಲಸ ಮಾಡುವ ಲೈಫ್ ಆಫೀಸರ್‌ಗಳು, ಪ್ರೊಡಕ್ಷನ್ ಹುಡುಗರೆಲ್ಲರನ್ನೂ ಚಿಕ್ಕ ವಯಸ್ಸಿನಿಂದ ನೋಡಿಕೊಂಡು ಬಂದಿದ್ದೇನೆ. ಅಲ್ಲಿವರೆಗೂ ಹಿಂದೆಯಿಂದ ನೋಡಿದ್ದೆ. ಸಿನಿಮಾ ಮಾಡುವಾಗ ಮುಂದೆಯಿಂದ ನೋಡುತ್ತಿದ್ದೇನೆ ಅಷ್ಟೇ. ಆದರೆ, ಕ್ಯಾಮರಾನಾ ಫೇಸ್ ಮಾಡುವುದಾಗಲಿ, ಲೈಟ್ ತೆಗೆದುಕೊಂಡು ಹೋಗುವುದಾಗಲಿ, ಬೇರೆ ಆರ್ಟಿಸ್ಟ್‌ಗಳ ಜೊತೆ ಲೈಫ್ ಅನ್ನು ತೆಗೆದುಕೊಂಡು ಹೋಗುವುದಾಗಲಿ ಇಂತಹ ಸಾಕಷ್ಟು ವಿಷಯವನ್ನು ನಾನು ಕಲಿತಿದ್ದೇನೆ” ಎಂದು ಯುವ ರಾಜ್‌ಕುಮಾರ್ ಹೇಳಿದ್ದಾರೆ.
ನಮ್ಮ ಮನೆಯಿಂದ ನನಗೆ ಈ ಪ್ರೀತಿ ಸಿಗ್ತಿದೆ “ನನ್ನ ನೋಡುವುದಕ್ಕೆ ಜನರು ಬಂದಿರುವುದು, ಅವರು ನನ್ನ ಮನೆ ಮೇಲೆ ಇಟ್ಟಿರುವ ಪ್ರೀತಿಯಿಂದ. ದೊಡ್ಡಪ್ಪನ ಮೇಲೆ, ಚಿಕ್ಕಪ್ಪನ ಮೇಲೆ, ತಾತನ ಮೇಲೆ, ತಂದೆ ಮೇಲೆ ಅವರು ಇಟ್ಟಿರುವ ಪ್ರೀತಿಯಿಂದ ನನ್ನನ್ನು ಹೀಗೆ ನೋಡುವುದಕ್ಕೆ ಆಗುತ್ತಿದೆ. ಇವತ್ತು ನಾನು ಏನೇ ಇದ್ದರೂ ಅದು ಅವರಿಗೆ ಸೇರಬೇಕು ಅಷ್ಟೇ. ” ಎಂದು ಯುವ ರಾಜ್‌ಕುಮಾರ್ ಹೇಳಿದ್ದಾರೆ. ಟ್ಯಾಗ್ ಇದ್ದರೂ ಭವಿಷ್ಯ ಇರೋದು ಜನರಲ್ಲಿ “ನನ್ನ ಮುಂದೆ ಏನು ಟ್ಯಾಗ್ ಇದ್ದರೂ, ಕೊನೆಯಲ್ಲಿ ಬರುವುದು ನನ್ನ ಸಿನಿಮಾದಲ್ಲಿ ಏನು ಇದೆ? ಮತ್ತು ಅದರಿಂದಲೇ ನಮ್ಮ ಭವಿಷ್ಯ ಡಿಸೈಡ್ ಆಗೋದು. ಆ ಭವಿಷ್ಯ ಇರೋದು ಯಾವತ್ತಿದ್ದರೂ ಆಡಿಯನ್ಸ್ ಕೈನಲ್ಲಿಯೇ? ಟ್ಯಾಗ್ ಹೆಸರಿಗಷ್ಟೇ ಇರಬಹುದು. ಆದರೆ, ಅವರು ನೋಡುವುದೇ ನನ್ನನ್ನ. ನಾನೇನು ಮಾಡಿದ್ದೀನಿ? ನಾನು ಚೆನ್ನಾಗಿ ಮಾಡಿದ್ದೇನಾ? ಇಲ್ವಾ? ನಾನು ಇಷ್ಟ ಆದ್ನಾ? ಇಷ್ಟ ಆಗಲಿಲ್ವಾ? ಅದೇ ಕ್ಯಾರಿ ಆಗುತ್ತೆ.” ಎಂದು ಯುವ ತನ್ನ ಭವಿಷ್ಯದ ಬಗ್ಗೆ ಮಾತಾಡಿದ್ದಾರೆ.
ಸುಮಾರು ಕಥೆ ಕೇಳಿದ್ದೆ “ಯುವ ಆದ್ಮೇಲೆ ಸುಮಾರು ಕಥೆಗಳನ್ನು ಕೇಳಿದೆ. ಈ ಸಿನಿಮಾದ ಕಥೆ ಕೇಳಿದ ಕೂಡಲೇ ಮಾಡಬೇಕು ಅಂತ ಅನಿಸಿತು. ನನಗೆ ಜಯಣ್ಣ ಸರ್ ಫೋನ್ ಮಾಡಿದರು. ರೋಹಿತ್ ಸರ್ ಬಂದಿದ್ದಾರೆ. ಒಂದು ಸಿನಿಮಾ ಮಾಡಬೇಕು ಅಂತಿದ್ದೇವೆ. ಒಂದು ಕಥೆಯಿದೆ ಕೇಳಿ ನೋಡುತ್ತೀಯಾ? ಅಂದರು. ಕಥೆ ಕೇಳಿದ ಕೂಡಲೇ ಇಷ್ಟ ಆಗಿದ್ದು ಏನಂದ್ರೆ, ಎಕ್ಕದ ಮುತ್ತು. ಅಂದರೆ ನನ್ನ ಕ್ಯಾರೆಕ್ಟರ್. ನನಗೆ ಪಾತ್ರದಲ್ಲಿ ಒಂದು ವೇರಿಯೇಷನ್ಸ್ ಬೇಕಿತ್ತು. ಚೇಂಜ್ ಓವರ್ ಬೇಕಿತ್ತು.” ಅದಕ್ಕೆ ಎಕ್ಕ ಒಪ್ಪಿಕೊಂಡಿದ್ದಾಗಿ ಹೇಳಿದ್ದಾರೆ.
ಸ್ಕ್ರಿಪ್ಟಿಂಗ್ ಸ್ಟೇಜ್‌ನಲ್ಲಿ ರಾಘಣ್ಣ “ಎಕ್ಕ ಸಿನಿಮಾದ ಸ್ಕ್ರಿಪ್ಟಿಂಗ್ ಸ್ಟೇಜ್‌ನಲ್ಲಿ ನಮ್ಮ ತಂದೆ ಕಂಪ್ಲೀಟ್ ಆಗಿ ಈ ಸಿನಿಮಾ ಜೊತೆಯಲ್ಲಿ ಇದ್ದಾರೆ. ಸ್ಕ್ರಿಪ್ಟ್ ಡಿಸ್ಕಷನ್ ಅನ್ನು ಪೂರ್ತಿ ಸಮಯದಲ್ಲಿ ಒಟ್ಟಿಗೆ ಮಾಡುತ್ತಿದ್ವಿ. ನಮ್ಮ ಅಶ್ವಿನಿ ಆಂಟಿಯಿಂದ ಹಿಡಿದು, ಜಯಣ್ಣ, ಬೋಗಣ್ಣ, ಕಾರ್ತಿಕ್ ಗೌಡ್ರು, ನಮ್ಮ ತಂದೆನೂ ಇರೋರು. ಈ ಸ್ಕ್ರೀಪ್ಟ್ ಆರು ಬಾರಿ ಬದಲಾಯಿಸಲಾಗಿದೆ.” ಎಂದು ಎಕ್ಕ ಸ್ಕ್ರಿಪ್ಟಿಂಗ್ ಹೇಗಾಯ್ತು ಅನ್ನೋದನ್ನು ರಿವೀಲ್ ಮಾಡಿದ್ದಾರೆ.
“ಬ್ಯಾಂಗಲ್ ಬಂಗಾರಿ..” ಹಾಡಿಗೆ 29ನೇ ಸ್ಥಾನ: 22 ದಿನಗಳಲ್ಲಿ ಈ ಸಾಂಗ್‌ಗೆ ಸಿಕ್ಕಿದ ವೀವ್ಸ್ ಎಷ್ಟು? ಬಿರಿಯಾನಿ ಕಥೆ ಹೇಳಿದ ಯುವ “ನಾಲ್ಕೈದು ಕಡೆ ಬಿರಿಯಾನಿ ಇದೆ. ಎಲ್ಲಾ ಕಡೆನೂ ಬಿರಿಯಾನಿನೇ. ಯಾವುದೋ ಒಂದು ಬಿರಿಯಾನಿ ನಿಮಗೆ ಸಖತ್ ಇಷ್ಟ ಆಗಿದೆ. ಯಾಕೆ ಅಂತ ಹೇಳುವುದಕ್ಕೆ ಆಗುವುದಿಲ್ಲ. ಒಂದೊಂದು ಸಾರಿ ಪೀಸ್ ತುಂಬಾನೇ ರುಚಿಯಾಗಿರುತ್ತೆ. ಇನ್ನೊಮ್ಮೆ ಮಸಾಲಾ ಚೆನ್ನಾಗಿರುತ್ತೆ. ಇನ್ನೊಮ್ಮೆ ಮಸಾಲಾ ಲೈಟ್ ಆಗಿ ಇರುತ್ತೆ. ಕೆಲವು ಕಥೆಗಳು ಚೆನ್ನಾಗಿದ್ದವು. ಆದರೆ ಕೆಲವೊಮ್ಮೆ ನೋಡಿದ ಕೂಡಲೇ ನಿಮಗೆ ಇಷ್ಟ ಆಗಿಬಿಡುತ್ತಲ್ಲ. ಅದೇ ತರ ನನಗೆ ಈ ಕಥೆನೂ ಇಷ್ಟ ಆಯ್ತು.” ಎಂದು ಎಕ್ಕ ಆಯ್ಕೆ ಮಾಡಿಕೊಂಡಿದ್ದರ ಬಗ್ಗೆ ರಿವೀಲ್ ಮಾಡಿದ್ದಾರೆ.
ಮುತ್ತು ಮುಗ್ಧತೆ ಕಳೆದುಕೊಳ್ಳುತ್ತಾನಾ? “ಮುತ್ತು ಒಬ್ಬ ಹಳ್ಳಿ ಹುಡುಗ. ಎಷ್ಟೋ ಜನ ಹಳ್ಳಿಯಿಂದ ಬೆಂಗಳೂರಿಗೆ ಆಸೆ ಇಟ್ಟುಕೊಂಡು ಬರುತ್ತಾರೆ. ಅದೇ ರೀತಿ ಮುತ್ತುನೂ ಒಂದು ಕಾರಣ ಇಟ್ಕೊಂಡು ಹಳ್ಳಿಯಿಂದ ಬೆಂಗಳೂರಿಗೆ ಬರುತ್ತಾನೆ. ಬೆಂಗಳೂರಿಗೆ ಬಂದ್ಮೇಲೆ ಸುಮಾರಷ್ಟು ಘಟನೆಗಳು ನಡೆಯುತ್ತೆ. ಅವನಲ್ಲಿ ಒಂದು ಮುಗ್ಧತೆ ಇರುತ್ತೆ. ಅದನ್ನು ಇಡೀ ಸಿನಿಮಾದಲ್ಲಿ ಕೆದಕುತ್ತಾ ಹೋಗುತ್ತೆ. ಆ ಮುಗ್ಧತೆಯನ್ನು ಕಳೆದುಕೊಳ್ಳುತ್ತಾನಾ? ಇಲ್ವಾ? ಅನ್ನೋದೇ ಸಿನಿಮಾ.” ಎಂದು ಯುವ ರಾಜ್‌ಕುಮಾರ್ ಹೇಳಿದ್ದಾರೆ.
ಪೊರಕೆಯಲ್ಲಿ ಗನ್ ಹಿಡಿದಿದ್ದಕ್ಕೆ ಕಾರಣವಿದೆ “ಮುತ್ತು ಸಿಕ್ಕಾಪಟ್ಟೆ ಮಾತಾಡುತ್ತಾನೆ. ಖುಷಿ ಖುಷಿಯಾಗಿರುತ್ತಾನೆ. ಮಜಾ ಮಾಡುತ್ತಾನೆ. ಅವನ ಜೀವನದಲ್ಲಿ ನೆಮ್ಮದಿಯಾಗಿ ನಿದ್ದೆ ಮಾಡಬೇಕಷ್ಟ ಅನ್ನೋದಷ್ಟೇ. ನಮ್ಮೂರು ನಮ್ಮ ಅಮ್ಮ. ಅಷ್ಟೇ ಕನಸು ಅವನಿಗೆ. ನೀವು ಜಾಕಿ ತರ ಅನಿಸಿತು ಅಂದ್ರಿ. ಖಂಡಿತವಾಗಿಯೂ ನಮ್ಮ ಚಿಕ್ಕಪ್ಪ ಆಗಲಿ, ದೊಡ್ಡಪ್ಪ ಆಗಲಿ. ನಮಗೆ ತುಂಬಾನೇ ಪ್ರೇರಣೆ ಮಾಡಿದ್ದಾರೆ. ಸಿನಿಮಾ ನೋಡಿದ ಮೇಲೆ ಇದರಿಂದ ಪ್ರೇರಣೆ ಹೊಂದಿರಬಹುದು ಅಂತಲೂ ಅನಿಸಿರಬಹುದು. ಟೀಸರ್‌ನಲ್ಲಿ ಆ ಕನ್ನಡ ಹಾಕಿಕೊಂಡಿದ್ದಕ್ಕಾಗಲಿ, ಪೊರಕೆಯಲ್ಲಿ ಗನ್ ಹಿಡಿದುಕೊಂಡಿದ್ದಕ್ಕಾಗಲಿ ಒಂದು ಕಾರಣವಿದೆ. ಅದು ಸಿನಿಮಾ ನೋಡಿದ ಮೇಲೆ ಗೊತ್ತಾಗುತ್ತೆ.” ಎನ್ನುವ ರಹಸ್ಯವನ್ನು ಬಿಟ್ಟುಕೊಟ್ಟಿಲ್ಲ.