ಗ್ಯಾರಂಟಿ ಯೋಜನೆಗಳು ಮುಂದುವರೆಯಲಿವೆ : ಮುಖ್ಯಮಂತ್ರಿ ಸಿದ್ದರಾಮಯ್ಯ

78 ನೇ ಸ್ವಾತಂತ್ರ್ಯ ದಿನಾಚರಣೆ

ಜಾಗತಿಕ ಬೇಸಿಕ್ ಆದಾಯ ಹೆಚ್ಚಳ ಪರಿಕಲ್ಪನೆಗೆ ರಾಜ್ಯದಿಂದ ಅತಿದೊಡ್ಡ ಪ್ರಮಾಣದ ಕೊಡುಗೆ

ಬೆಂಗಳೂರು :  ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ  ಮೂಲಕ ನಾಡಿನ  ಸಮಸ್ತ ಜನರ ಬದುಕಿಗೆ ಆರ್ಥಿಕ ಭದ್ರತೆ ತರುವ ಕೆಲಸವನ್ನು ಸರ್ಕಾರ ಮಾಡುತ್ತಿದೆ.ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಆರ್ಥಿಕ ನೆರವು ನೀಡುವ ಜಾಗತಿಕ ಮೂಲ ಆದಾಯ (ಯುನಿವರ್ಸಲ್ ಬೇಸಿಕ್ ಇನ್‌ಕಮ್) ಪರಿಕಲ್ಪನೆಯನ್ನು ಅತಿದೊಡ್ಡ ಪ್ರಮಾಣದಲ್ಲಿ ಸಾಕಾರಗೊಳಿಸುತ್ತಿರುವ ರಾಜ್ಯ ಕರ್ನಾಟಕ ಎಂಬುದು ಹೆಮ್ಮೆಯ ವಿಷಯವಾಗಿದೆ.ಈ ಯೋಜನೆಗಳು ಮುಂದುವರಿಯಲಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

          ಇಲ್ಲಿನ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಕರ್ನಾಟಕ ಸರ್ಕಾರ, ಬೃಹತ್ ಬೆಂಗಳೂರು ಮಹಾನಗರಪಾಲಿಕೆ,ಬೆಂಗಳೂರು ನಗರ ಜಿಲ್ಲಾಡಳಿತ ಸಹಯೋಗದಲ್ಲಿ ಆಯೋಜಿಸಲಾಗಿದ್ದ 78 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ,ಗೌರವ ರಕ್ಷೆ ಸ್ವೀಕರಿಸಿ ಅವರು ಮಾತನಾಡಿದರು,

 

          ಗೃಹಲಕ್ಷ್ಮಿ,ಶಕ್ತಿ,ಗೃಹಜ್ಯೋತಿ,ಅನ್ನಭಾಗ್ಯ ಮತ್ತು ಯುವನಿಧಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಭವಿಷ್ಯ ನುಡಿಯುತ್ತಿರುವವರಿಗೆ ರಾಜ್ಯದಲ್ಲಿ ಆರ್ಥಿಕ ಪ್ರಗತಿ ಪ್ರಗತಿ ಸಾಧಿಸಿ ತೋರಿಸುವ ಮೂಲಕ ನಾವು ಉತ್ತರ ನೀಡಲಿದ್ದೇವೆ.ಹೊಸ ಅವಿಷ್ಕಾರಗಳನ್ನು ನಡೆಸಿ ಅವು ಫಲಾನುಭವಿಗಳಿಗೆ ಇನ್ನಷ್ಟು ಹೆಚ್ಚು ನೆರವಾಗುವ ರೀತಿಯ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಉದ್ಯುಕ್ತವಾಗಿದೆ ಎಂದರು.

          ಶಕ್ತಿ ಯೋಜನೆಯಡಿ ಮಹಿಳೆಯರು 270 ಕೋಟಿ ಟ್ರಿಪ್ ಉಚಿತ ಪ್ರಯಾಣ ಸೌಲಭ್ಯ ಪಡೆದಿದ್ದಾರೆ. ಮಹಿಳೆಯರು 6541 ಕೋಟಿ ರೂ.ಗಳಷ್ಟು ಪ್ರಯಾಣ ವೆಚ್ಚ ಉಳಿತಾಯ ಮಾಡಿದ್ದಾರೆ. ಅನ್ನ ಭಾಗ್ಯ ಯೋಜನೆಯಡಿ ಹೆಚ್ಚುವರಿ ಅಕ್ಕಿ ನೀಡಲು ಕೇಂದ್ರದ ಅಸಹಕಾರದಿಂದಾಗಿ ಅಕ್ಕಿಯ ಬದಲಿಗೆ ನಗದು ವರ್ಗಾವಣೆ ಮಾಡಲಾಗುತ್ತಿದೆ. ನಮ್ಮ ಸರ್ಕಾರದ ಜನಕಲ್ಯಾಣ ಯೋಜನೆಗಳು ಐದು ಗ್ಯಾರಂಟಿಗಳಿಗಷ್ಟೇ ಸೀಮಿತವಾಗಿಲ್ಲ,ದುರ್ಬಲ ವರ್ಗದವರಿಗೆ ಸಾಮಾಜಿಕ ಭದ್ರತೆ ನೀಡುವ ವಿವಿಧ ಯೋಜನೆಗಳಡಿ 13,027 ಕೋಟಿ ರೂ.ವೆಚ್ಚ ಮಾಡಲಾಗಿದೆ.

 

          ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎರಡು ಮುಂಗಾರು ಹಂಗಾಮುಗಳಲ್ಲಿ ರಾಜ್ಯ ಸಂಪೂರ್ಣ ವಿಭಿನ್ನ ಪರಿಸ್ಥಿತಿಯನ್ನು ಎದುರಿಸಿದೆ.ಕಳೆದ ವರ್ಷ ರಾಜ್ಯ ತೀವ್ರ ಬರಗಾಲಕ್ಕೆ ತುತ್ತಾಗಿದ್ದರೆ,ಈ ಬಾರಿ ಅತಿವೃಷ್ಟಿಗೆ ಒಳಗಾಗಿದೆ.ಕೇಂದ್ರ ಸರ್ಕಾರ ಬರಪರಿಹಾರ ಮೊತ್ತವನ್ನು ತಡವಾಗಿ ನೀಡಿದರೂ ಸಹ ರಾಜ್ಯದಲ್ಲಿ ಬರದಿಂದ ಜನರಿಗೆ ಹೆಚ್ಚು ಅನಾನುಕೂಲಗಳು ಆಗದಂತೆ ಮುನ್ನೆಚ್ಚರಿಕೆ ವಹಿಸಲಾಯಿತು.ಪ್ರಸಕ್ತ ಸಾಲಿನಲ್ಲಿ ಪ್ರವಾಹ ಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಲಾಗಿದೆ.ಜೀವಹಾನಿ,ಜಾನುವಾರುಗಳ ಸಾವು ಹಾಗೂ ಮನೆ ಹಾನಿಗಳಿಗೆ ತ್ವರಿತವಾಗಿ ಪರಿಹಾರ ಒದಗಿಸುವಂತೆ ಸೂಚಿಸಲಾಗಿದೆ.ಮನೆ ಕಳೆದುಕೊಂಡವರಿಗೆ 1.2 ಲಕ್ಷ ರೂ.ಪರಿಹಾರದೊಂದಿಗೆ ಮನೆ ಹಂಚಿಕೆ ಮಾಡಲು ಕ್ರಮವಹಿಸಲಾಗಿದೆ. ಅಭಿವೃದ್ಧಿ ಮತ್ತು ಪರಿಸರದ ನಡುವೆ ಸಮತೋಲನ ಸಾಧಿಸುವುದು ಅತ್ಯಗತ್ಯ ಎಂಬ ಪ್ರಕೃತಿಯ ಎಚ್ಚರಿಕೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದರು.

          ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಪ್ರಸಕ್ತ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಮೂಲಕ 5 ಸಾವಿರ ಕೋಟಿ ರೂ.ವೆಚ್ಚದ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ.ಬಸವಾದಿ ಶರಣರು ಪ್ರತಿಪಾದಿಸಿದ ಕಾಯಕ,ದಾಸೋಹ ಮತ್ತು ಸಮ ಸಮಾಜ ನಿರ್ಮಾಣದ ತತ್ವಗಳು ಸಂವಿಧಾನದ ಮೂಲಭೂತ ಆಶಯಗಳಾಗಿವೆ.ಈ ಮೌಲ್ಯಗಳನ್ನು ಆಧಾರವಾಗಿಟ್ಟುಕೊಂಡು ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಸಮಾನತೆಗೆ ವಿಶೇಷ ಆದ್ಯತೆ ನೀಡಿ ರಾಜ್ಯದ ಸರ್ವತೋಮುಖ ಬೆಳವಣಿಗೆಗೆ ಸರ್ಕಾರದ ಆದ್ಯತೆ ನೀಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

          ಸ್ವಾತಂತ್ರ್ಯ ಹೋರಾಟದ ಮೆಲುಕು

          ಎರಡು ಶತಮಾನಗಳ ಬ್ರಿಟಿಷರ ಕ್ರೂರ ದಾಸ್ಯದಿಂದ ಬಿಡುಗಡೆ ಹೊಂದಿ,ನಮ್ಮ ದೇಶ ಸ್ವಾತಂತ್ರ್ಯ ಪಡೆದ ಸುದಿನ ಇದಾಗಿದೆ.ನಮ್ಮ ದೇಶದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಕ್ಕಿಂತ ಹೆಚ್ಚು ಪ್ರಾಮಾಣಿಕವಾದ ಮತ್ತು ಅಹಿಂಸಾತ್ಮಕವಾದ ಮತ್ತೊಂದು ಚಳುವಳಿ ಚರಿತ್ರೆಯಲ್ಲಿ ಇಲ್ಲ.1924 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಚಾರಿತ್ರಿಕ ಬೆಳಗಾವಿ ಅಧಿವೇಶನ ನಡೆದು ಈಗ ನೂರು ವರ್ಷಗಳಾಗಿವೆ‌.ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು “ಬಹಿಷ್ಕೃತ ಹಿತಕಾರಿಣಿ ಸಭಾ” ಸ್ಥಾಪಿಸಿದ ಘಟನೆಗೂ ನೂರು ವರ್ಷಗಳು ತುಂಬಿದ ಸಂದರ್ಭದಲ್ಲಿ ಸ್ಮರಣೀಯ ಮತ್ತು ಅರ್ಥಪೂರ್ಣ ಕಾರ್ಯಕ್ರಮಗಳನ್ನು ಸರ್ಕಾರ ಆಯೋಜಿಸುತ್ತಿದೆ ಎಂದು ಹೇಳಿದರು.

 

          ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್,ಬೆಂಗಳೂರು ಮಹಾನಗರ ಪೊಲೀಸ್ ಆಯುಕ್ತ ಬಿ.ದಯಾನಂದ, ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ.ದಯಾನಂದ ವೇದಿಕೆಯಲ್ಲಿ ಇದ್ದರು‌.

          ಆಕರ್ಷಕ ಪಥ ಸಂಚಲನ

          ಪರೇಡ್ ಕಮಾಂಡರ್ ಗೋಪಾಲರೆಡ್ಡಿ ಹಾಗೂ ಡೆಪ್ಯುಟಿ ಕಮಾಂಡರ್ ಹರೀಶ್ ಹೆಚ್.ಎನ್.ನೇತೃತ್ವದಲ್ಲಿ ಗಡಿ ಭದ್ರತಾ ಪಡೆ,ಕರ್ನಾಟಕ ರಾಜ್ಯ ಮೀಸಲು  ಪೊಲೀಸ್ ಪಡೆ, ಕೈಗಾರಿಕಾ ಭದ್ರತಾ ಪಡೆ,ಗೋವಾ ಪೊಲೀಸ್,ಶ್ವಾನದಳ,ಅಬಕಾರಿ, ಸಂಚಾರ ಪೊಲೀಸ್,ಅಗ್ನಿ ಶಾಮಕ ದಳ,ಗೃಹ ರಕ್ಷಕ ದಳ,ಎನ್‌‌ಸಿಸಿ, ರಾಷ್ಟ್ರೀಯ ಮಿಲಿಟರಿ ಶಾಲೆ, ಆರ್ಮಿ ಪಬ್ಲಿಕ್ ಶಾಲೆ,ಪೊಲೀಸ್ ಪಬ್ಲಿಕ್ ಶಾಲೆ ,ಸಮರ್ಥನಂ ಹಾಗೂ ರಮಣಶ್ರೀ ಸಂಸ್ಥೆಗಳ  ದೃಷ್ಟಿವಿಕಲಚೇತನ (ಅಂಧ) ಮಕ್ಕಳು ಸೇರಿದಂತೆ ವಿವಿಧ  ಶಾಲಾ ತುಕಡಿಗಳಿಂದ ಆಕರ್ಷಕ ಪಥಸಂಚಲನ ಜರುಗಿತು.

          ಮನಸೆಳೆದ ಸಾಂಸ್ಕೃತಿಕ ಕಾರ್ಯಕ್ರಮಗಳು

          ಸರ್ಕಾರದ ಐದು ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳ ಕುರಿತು ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ 400 ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ ಜನಪದ ಕಲಾ ಪ್ರದರ್ಶನ ಒಳಗೊಂಡ ಕಾರ್ಯಕ್ರಮ, ಯಲಹಂಕದ ಸರ್ಕಾರಿ ಪ್ರೌಢಶಾಲೆಯ 750 ವಿದ್ಯಾರ್ಥಿಗಳ ‘ಜಯ ಭಾರತಿ’  , ಬಿಬಿಎಂಪಿ ಪಿಳ್ಳಣ್ಣ ಗಾರ್ಡನ್ ಸಂಯುಕ್ತ ಪ.ಪೂ.ಕಾಲೇಜಿನ 700 ವಿದ್ಯಾರ್ಥಿಗಳಿಂದ “ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಅಬ್ಬಕ್ಕ ದೇವಿ” ಕುರಿತ ಸಮೂಹ ನೃತ್ಯಗಳು,ರೂಪಕಗಳು,ಮರಾಠ ಲೈಟ್ ಇನ್‌ಫಂಟ್ರಿ ರೆಜಿಮೆಂಟ್ ಸೆಂಟರಿನ “ಮಲ್ಲಕಂಬ” ಪ್ರದರ್ಶನ, ಪ್ಯಾರಾಚೂಟ್ ರೆಜಿಮೆಂಟ್ ಟ್ರೇನಿಂಗ್ ಸೆಂಟರಿನ ಸಿಬ್ಬಂದಿಯ ಪ್ಯಾರಾ ಮೋಟರ್ ಪ್ರದರ್ಶನ , ಮಿಲಿಟರಿ ಪೊಲೀಸ್ ಸೆಂಟರ್ ಮತ್ತು ಶಾಲೆಯವರಿಂದ ಮೈ ನವಿರೇಳಿಸುವ ಮೋಟಾರು ಸೈಕಲ್‌ ಪ್ರದರ್ಶನಗಳು ನೆರೆದ ಜನರಲ್ಲಿ ಸಂಚಲನ ಉಂಟು ಮಾಡಿದವು.

 

          ಅಂಗಾಂಗ ದಾನ ಮಾಡಿದ ಕುಟುಂಬದ ಸದಸ್ಯರನ್ನು ಮುಖ್ಯಮಂತ್ರಿಯವರು ವೇದಿಕೆಗೆ ಆಹ್ವಾನಿಸಿ ಪ್ರಶಂಸಾ ಪತ್ರ ನೀಡಿದರು‌. 

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top