ಬೆಂಗಳೂರು: ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಮೂಲಭೂತ ಸೌಕರ್ಯ ಒದಗಿಸುವದರೊಂದಿಗೆ ಮಕ್ಕಳ ಆರೋಗ್ಯ ಮತ್ತು ಪೌಷ್ಟಿಕಾಂಶ ಹೆಚ್ಚಳಕ್ಕೆ ಸರ್ಕಾರ ಒತ್ತು ನೀಡಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು. ಇಂದು ವಿಠ್ಠಲ್ ಮಲ್ಯ ರಸ್ತೆಯಲ್ಲಿರುವ ಜೆ.ಡಬ್ಲ್ಯೂ ಮಾರಿಯೆಟ್ ಹೋಟೆಲ್ ನಲ್ಲಿ ನಡೆದ ಸಾಮಾಜಿಕ ಬದಲಾವಣೆಯಲ್ಲಿ ಶಿಕ್ಷಣ ಕುರಿತ ಸಿ.ಎಸ್.ಆರ್ ಸಮ್ಮೇಳನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕರ್ನಾಟಕ ಪಬ್ಲಿಕ್ ಶಾಲೆಗಳ ಅಭಿವೃದ್ಧಿಗೆ ನಿಮ್ಮ ಸಹಕಾರ ಮುಖ್ಯ. ಈ ಸಹಕಾರ ಹೀಗೆ ಮುಂದೆಯೂ ಇರಲಿ. ಮೂಲಭೂತ ಸೌಕರ್ಯ ಮತ್ತು ಒಳ್ಳೆಯ ಶಿಕ್ಷಣದಿಂದ ಮಕ್ಕಳ ಶೈಕ್ಷಣಿಕ ಗುಣಮಟ್ಟ ಉತ್ತಮವಾಗಿ ರೂಪಗೊಳ್ಳುತ್ತದೆ ಎಂದರು. ಕರ್ನಾಟಕ ಪಬ್ಲಿಕ್ ಶಾಲೆಗಳ ರೀತಿಯಲ್ಲಿ ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿಯೂ ದಾಖಲಾತಿ ಸಂಖ್ಯೆ ಹೆಚ್ಚಾಗಿದೆ. ಸರ್ಕಾರ ಸಮರ್ಪಕವಾದ ಸೌಕರ್ಯ ನೀಡಿದರೆ, ಮಕ್ಕಳು ಶಾಲೆಗಳಿಗೆ ಬರುತ್ತಾರೆ ಎನ್ನುವುದು ಈಗಾಗಲೇ ಹಲವಾರು ಜಿಲ್ಲೆಗಳಲ್ಲಿ ಸಾಬೀತಾಗಿದೆ. ಅದಕ್ಕಾಗಿ ನಿಮ್ಮ ಸಹಕಾರ ನಮಗೆ ಬೇಕಾಗುತ್ತದೆ. ರಾಜ್ಯದ ಶಾಲೆಗಳ ಅಭಿವೃದ್ಧಿಗೆ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ವಿಶೇಷವಾಗಿ ಬಹಳ ಆಸಕ್ತಿವಹಿಸಿ ನಮಗೆ ಸಹಕಾರ ನೀಡಿದ್ದಾರೆ. ಹೋಬಳಿ ಮಟ್ಟದಲ್ಲಿ ಉತ್ತಮ ಶಾಲೆಗಳ ನಿರ್ಮಿಸೋಣ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಮಕ್ಕಳಿಗೆ ನೀಡಲಾಗುತ್ತಿದ್ದ ಮೊಟ್ಟೆಗಳನ್ನು ಹೆಚ್ಚಳ ಮಾಡಿದ್ದಾರೆ. ಮೊದಲು 1 ರಿಂದ 8 ವರೆಗೆ 1 ಮೊಟ್ಟೆ ವಿತರಣೆ ಮಾಡಲಾಗುತ್ತಿತ್ತು. ಈಗ ನಮ್ಮ ಸರ್ಕಾರ ಎರಡು ಮೊಟ್ಟೆಗಳನ್ನು 1 ರಿಂದ 10 ತರಗತಿಯವರೆಗೆ ನೀಡುತ್ತಿದ್ದೇವೆ. ಮಕ್ಕಳು ವಿದ್ಯಾಭ್ಯಾಸದ ಜತೆಗೆ ಉತ್ತಮ ಆರೋಗ್ಯ ಪಡೆಯಲು ಇದು ಅನುಕೂಲ ಆಗುತ್ತದೆ. ಇದರಲ್ಲಿಯೂ ಸಿ.ಎಸ್. ಅರ್ ಸಹಕಾರ ಇರಲಿ ಎಂದರು.