ರೈತರು, ಕಾರ್ಮಿಕರು ದೇಶದ ಉಸಿರು

ಮರಿಯಮ್ಮನಹಳ್ಳಿ,,ಜ,10 : :  ನಮ್ಮ ದೇಶದಲ್ಲಿ ರೈತರು ಮತ್ತು ಕಾರ್ಮಿಕರು ದೇಶದ ಉಸಿರು ಎಂದು ಬಿಂಬಿಸುವ ಸರ್ಕಾರಗಳು ಎಲ್ಲೊ ಒಂದು ಕಡೆ ಅವರನ್ನು ನಿರ್ಲಕ್ಷಿಸುತ್ತಿರುವುದು ವಿಷಾದನೀಯ ಎಂದು ವಿಜಯನಗರ ಜಿಲ್ಲಾ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಪಿ.ಸತ್ಯನಾರಾಯಣ ರವರು ಬೇಸರ ವ್ಯಕ್ತಪಡಿಸಿದರು. ಅವರು ಪಟ್ಟಣದ ಲಲಿತ ಕಲಾರಂಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕರ್ನಾಟಕ ಅಸಂಘಟಿತ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದ ಸಮಾರಂಭದಲ್ಲಿ ಮಹಾತ್ಮ ಗಾಂಧೀಜಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರವರು ಭಾವ ಚಿತ್ರಗಳಿಗೆ  ಪುಷ್ಪಗಳ ನಮನ ಸಲ್ಲಿಸಿ ನಂತರ ಕಾರ್ಯಕ್ರಮದ  ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಮ್ಮ ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಪ್ರಸ್ತುತ 2 ಲಕ್ಷಕ್ಕೂ ಹೆಚ್ಚಿನ ಅಸಂಘಟಿತ ಕಾರ್ಮಿಕರಿದ್ದಾರೆ. ಇದುವರೆಗೂ ಯಾವುದೇ ಸವಲತ್ತು ಸಿಗದೇ ಪರದಾಡುತ್ತಿದ್ದಾರೆ. ಅವರಿಗೆ ಸವಲತ್ತು ಕೊಡಿಸುವಲ್ಲಿ ಹೊಸ ಸಂಘಟನೆಗಳ ಹೋರಾಟ ಮುಖ್ಯವಾಗಿದ್ದು, ತಮ್ಮ ಧ್ಯೇಯೋದ್ದೇಶಗಳನ್ನು ಪಾಲಿಸುವಂತಾಗ ಬೇಕು. ಬಹಳ ಕಡೆ ಸಂಘಟನೆಗಳು ಸ್ವಾರ್ಥ ಸಾಧನೆಗಾಗಿ ಬಳಕೆಯಾಗುತ್ತಿರುವುದು ಖೇದನೀಯ ಎಂದರು.  ಅಸಂಘಟಿತ ಕಾರ್ಮಿಕರು ಮತ್ತು ಅವರ ಕುಟುಂಬಗಳ ಶ್ರೇಯೋಭಿವೃದ್ದಿಗಾಗಿ ಪತ್ರಿಕೆಗಳು ಸದಾ ಸಿದ್ದವಿದ್ದು ಸಂಘಟನೆಗಳ ಪಾತ್ರಗಳು ಅಷ್ಟೇ ಮುಖ್ಯವಾಗಿರಲಿ ಎಂದು ತಿಳಿಸಿದರು. 

ರಾಜ್ಯ ಪ್ರಶಸ್ತಿ ಪುರಸ್ಕೃತೆ ಕಲಾವಿದೆ ಡಾ.ಕೆ.ನಾಗರತ್ನಮ್ಮ ಮಾತನಾಡಿ, ಸಮಾಜದ ಕೆಳಸ್ತರದ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳು ಸುಲಭವಾಗಿ ದೊರಕುವುದಿಲ್ಲ. ಈ ರೀತಿಯ ಸಂಘಟನೆಗಳ ಹೋರಾಟದಿಂದ ಮಾತ್ರ ಸವಲತ್ತು ಪಡೆಯಲು ಸಾಧ್ಯ. ಅಲ್ಲದೆ ಸಂಘಟನೆಗಳು ಸಹ ತಮ್ಮ ತನು, ಮನಗಳನ್ನು ಅರ್ಪಿಸುವ ಮೂಲಕ ಸೇವೆಸಲ್ಲಿಸ ಬೇಕು ಎಂದು ಸಲಹೆ ನೀಡಿದರು.  ಹೊಸಪೇಟೆ ಕಾರ್ಮಿಕ ನಿರೀಕ್ಷಕ ಎಂ.ಅಶೋಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಲಲಿತ ಕಲಾರಂಗದ ಅಧ್ಯಕ್ಷ ಹೆಚ್.ಮಂಜುನಾಥ, ಸಂಘಟನೆ ರಾಜ್ಯಾಧ್ಯಕ್ಷ ಗವಿಸಿದ್ದಪ್ಪ, ಉಪಾಧ್ಯಕ್ಷ ಹನುಮಂತಪ್ಪ ಹೆಚ್, ಪ್ರಧಾನ ಕಾರ್ಯದರ್ಶಿ ರಾಮು ಆಶ್ರಿತ್, ಖಾಜಾಂಚಿ ರವಿಕುಮಾರ, ವಿಜಯನಗರ ಜಿಲ್ಲಾಧ್ಯಕ್ಷ ಬಿ.ಆನಂದ, ಉಪಾಧ್ಯಕ್ಷ ಎಸ್.ಹರಿಶ್ಚಂದ್ರ ನಾಯ್ಕ್,  ತಾಲೂಕು ಅಧ್ಯಕ್ಷ ಅಂಜಿನಪ್ಪ, ಗದಗ ಜಿಲ್ಲಾ ರೈತ ಸಂಘದ ಅಧ್ಯಕ್ಷ ಸಿ.ಬಿ.ವಸ್ತ್ರದ್ ಉಪಸ್ಥಿತರಿದ್ದರು.

ನಂತರ ಹೋಬಳಿ ಅಧ್ಯಕ್ಷ ಕಮಲನಾಯ್ಕ ಉಪಾಧ್ಯಕ್ಷ ರಾಮಾನಾಯ್ಕ ಡಿ, ಕಾರ್ಯದರ್ಶಿ ಎನ್. ಮಂಜುನಾಥ, ಜಂಟಿ ಕಾರ್ಯದರ್ಶಿ ಈಡಿಗರ ಸ್ವಾಮಿ ಇವರಿಗೆ ಆದೇಶ ಪ್ರತಿ ಮತ್ತು ಗುರುತಿನ ಕಾರ್ಡ ವಿತರಿಸಲಾಯಿತು. ಬಿಎಂಎಸ್ ಪ್ರಭು ಕಾರ್ಯಕ್ರಮ ನಿರ್ವಹಿಸಿದರು. 

Leave a Comment

Your email address will not be published. Required fields are marked *

Translate »
Scroll to Top