20 ಸಾವಿರ ಶಿಕ್ಷಕರ ನೇಮಕಕ್ಕೆ ಮುಂದಾದ ಸರ್ಕಾರ

ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳಿಗೆ 20 ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ಮುಂದಾಗಿದೆ.

ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಈ ವಿಷಯ ತಿಳಿಸಿದರು.

 

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಐವತ್ಮೂರು ಸಾವಿರ ಶಿಕ್ಷಕರ ಕೊರತೆ ಇದ್ದು,ಈ ಪೈಕಿ ಇಪ್ಪತ್ತು ಸಾವಿರ ಮಂದಿ ಶಿಕ್ಷಕರ ನೇಮಕ ಕಾರ್ಯವಾದರೆ ಭೋಧನೆಯ ವಿಷಯದಲ್ಲಿರುವ ಒತ್ತಡ ಕಡಿಮೆಯಾಗಲಿದೆ ಎಂದು ವಿವರಿಸಿದರು.

ಈಗಾಗಲೇ 13,500 ಶಿಕ್ಷಕರನ್ನು ಭರ್ತಿ ಮಾಡಿಕೊಳ್ಳಲು ಸರ್ಕಾರ ಒಪ್ಪಿಗೆ ನೀಡಿದ್ದು,ನ್ಯಾಯಾಲಯದ ತೀರ್ಪು ಹೊರಬಂದ ನಂತರ ನೇಮಕಾತಿ ಕಾರ್ಯ ಆರಂಭವಾಗಲಿದೆ  ಎಂದ ಅವರು,ಈ ನೇಮಕಾತಿಗೆ ನ್ಯಾಯಾಲಯ ಇನ್ನೊಂದು ತಿಂಗಳಲ್ಲಿ ಅನುಮತಿ ನೀಡಿ ಆದೇಶ ಪ್ರಕಟಿಸುವ ಸಾಧ್ಯತೆಗಳಿವೆ ಎಂದು ನುಡಿದರು.

ಇಪ್ಪತ್ತು ಸಾವಿರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಸಂಬಂಧ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ  ಸಲ್ಲಿಸಲಿರುವುದಾಗಿ ನುಡಿದ ಅವರು,ಇದಕ್ಕೆ ಒಪ್ಪಿಗೆ ದೊರೆತರೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಈ ನೇಮಕಾತಿ ಕಾರ್ಯ ಪೂರ್ಣವಾಗಲಿದೆ ಎಂದರು.

 

ರಾಜ್ಯದಲ್ಲಿ ಆರು ಸಾವಿರಕ್ಕೂ ಹೆಚ್ಚು ಗ್ರಾಮಪಂಚಾಯ್ತಿಗಳಿದ್ದು ತಲಾ ಎರಡು ಗ್ರಾಮಪಂಚಾಯ್ತಿಗೆ ಒಂದರಂತೆ  ಒಟ್ಟು 3 ಸಾವಿರ ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳನ್ನು ನಿರ್ಮಿಸಲು ಸರ್ಕಾರ ತೀರ್ಮಾನಿಸಿದ್ದು,ಈ ವರ್ಷ 500 ರಿಂದ 600 ಶಾಲೆಗಳನ್ನು ಪ್ರಾರಂಭಿಸಲು ತೀರ್ಮಾನಿಸಲಾಗಿದೆ ಎಂದರು.

ಹೈಟೆಕ್ ಮಾದರಿಯ ಈ ಶಾಲೆಗಳು ಪ್ರಾರಂಭವಾದರೆ ಮಕ್ಕಳಿಗೆ ಅನುಕೂಲವಾಗಲಿದೆ ಎಂದ ಅವರು,ಮೂಲಭೂತ ಸೌಕರ್ಯ ಸೇರಿದಂತೆ ಎಲ್ಲ ಬಗೆಯ ಅನುಕೂಲಗಳು ಈ ಶಾಲೆಯಲ್ಲಿರಲಿವೆ ಎಂದರು.

ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ಸುಮಾರು ಐವತ್ಮೂರು ಸಾವಿರ ವಿದ್ಯಾರ್ಥಿಗಳು ಕಳೆದ ಐದು ವರ್ಷಗಳಲ್ಲಿ ಅನುದಾನಿತ ಶಾಲೆಗಳಿಗೆ,ಖಾಸಗಿ ಶಾಲೆಗಳಿಗೆ ಸೇರ್ಪಡೆಯಾಗಿದ್ದಾರೆ ಎಂಬ ವರದಿಯನ್ನು ಸರ್ಕಾರಿ ಗಂಭೀರವಾಗಿ ಪರಿಗಣಿಸಿದೆ ಎಂದರು.

 

ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವವರು ಮತ್ತೊಂದು ಸರ್ಕಾರಿ ಶಾಲೆಗೆ ಹೋದರೆ ಬೇರೆ ಮಾತು,ಆದರೆ ಸರ್ಕಾರಿ ಶಾಲೆಯನ್ನು ತೊರೆದು ಅನುದಾನಿತ ಮತ್ತು ಖಾಸಗಿ ಶಾಲೆಗಳಿಗೆ ಹೋದರೆ ನಮ್ಮ ಶಾಲೆಗಳ ಗುಣಮಟ್ಟ ಸರಿಯಿಲ್ಲ ಎಂದೇ ಅರ್ಥ.ಹೀಗಾಗಿ ಇದನ್ನು ಗಂಭಿರವಾಗಿ ಪರಿಗಣಿಸಲಾಗಿದೆ ಎಂದು ಹೇಳಿದರು.

ಇಂತಹ ಸಮಸ್ಯೆಗಳಿಗೆ ಈಗ ಸ್ಥಾಪಿಸಲು ನಿರ್ಧರಿಸಿರುವ ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳು ಉತ್ತರವಾಗಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು,ಸರ್ಕಾರಿ ಶಾಲೆಗಳಲ್ಲಿ ಟಾಯ್ಲೆಟ್ ಸೇರಿದಂತೆ ಎಲ್ಲ ಬಗೆಯ ಮೂಲಭೂತ ಸೌಕರ್ಯ ಒದಗಿಸಲು ಸರ್ಕಾರ ಬದ್ದವಾಗಿದೆ ಎಂದರು.

 

ಸಿ.ಎಸ್.ಆರ್ (ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಲ್) ನಿಧಿಯಡಿ ಈ ವರ್ಷ ಲಭ್ಯ ಆಗಲಿರುವ 2500 ಕೋಟಿ ರೂಪಾಯಿಗಳನ್ನು ರಾಜ್ಯದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಬಳಸುವ ಕುರಿತು ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ಆಸಕ್ತಿ ತೋರಿದ್ದು,ಈ ಹಣ ಇಂತಿಂತಹ ಕಾರ್ಯಗಳಿಗೆ ಬಳಕೆಯಾಗಬೇಕು ಎಂದು ನಾವು ಸೂಚಿಸುತ್ತೇವೆ ಎಂದು ನುಡಿದರು.

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top