ಕನ್ನಡಿಗರ ಹಿತ ಕಾಯಲು ಸರ್ಕಾರ ಬದ್ಧ ಸಚಿವ ಶಿವರಾಜ್ ತಂಗಡಗಿ

ಮುಂಬೈ : ಗಡಿಭಾಗದ ಹಾಗೂ ಗಡಿ ಹೊರಗಿನ ಕನ್ನಡಿಗರ  ಹಿತರಕ್ಷಣೆಗೆ ಸರ್ಕಾರ‌ ಬದ್ಧವಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ  ಸಚಿವ‌ ಶಿವರಾಜ್ ತಂಗಡಗಿ ಹೇಳಿದ್ದಾರೆ. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಮುಂಬೈ ವಿವಿಧ ಕನ್ನಡಪರ ಸಂಘ- ಸಂಸ್ಥೆಗಳ ವತಿಯಿಂದ ಮುಂಬೈನ ರಾಧಾಬಾಯಿ ಟಿ.ಭಂಡಾರಿ ಸಭಾಂಗಣದಲ್ಲಿ‌ ಭಾನುವಾರ ಆಯೋಜಿಸಿದ್ದ ‘ಹೊರನಾಡು ಕನ್ನಡ ಸಂಸ್ಕೃತಿ ಸಂಭ್ರಮ’  ಕಾರ್ಯಕ್ರಮದಲ್ಲಿ‌ ಪಾಲ್ಗೊಂಡು ಅವರು ಮಾತನಾಡಿದರು‌. ಗಡಿಭಾಗ ಹಾಗೂ ಗಡಿ ಹೊರಗಿನ ಕನ್ನಡಿಗರ ಜತೆಗೆ  ಸರ್ಕಾರ‌ ಎಂದಿಗೂ ಇರಲಿದೆ. ಮುಂಬೈ ಕನ್ನಡಿಗರು ಮರಾಠಿಗರೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿರುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ ಎಂದರು.  ಮುಂಬೈನಲ್ಲಿ ಕನ್ನಡಿಗರ ಹಿತ ರಕ್ಷಣೆ ಮಾಡುವ ಮೂಲಕ ಮನೆ- ಮನೆಗೆ ಕನ್ನಡ ತಲುಪಿಸುತ್ತಿರುವ  ಕರ್ನಾಟಕ ಸಂಘ  ಅಂದೇರಿ ಕಾರ್ಯ  ಶ್ಲಾಘನೀಯವಾದದ್ದು. 

ಬಡತನ ರೇಖೆಗಿಂತ ಕೆಳಗಿರುವ ಸುಮಾರು 110 ಮಹಿಳೆಯರಿಗೆ ವಿಧವಾ ವೇತನ, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸಹಾಯಧನ‌ ನೀಡುವ  ಮೂಲಕ ಇಲ್ಲಿನ‌‌ ಕನ್ನಡಿಗರಿಗೆ ನೆರವಾಗುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.  ಕನ್ನಡ ಭಾಷೆಯ ವೈಭವಕ್ಕೆ ಸಹಸ್ರಾರು ವರ್ಷಗಳ ಇತಿಹಾಸವಿದ್ದು, ನಮ್ಮ ಭಾಷೆಯ ಶ್ರೀಮಂತಿಕೆ ಪ್ರಪಂಚಾದ್ಯಂತ ಹರಡಿದೆ. ಪ್ರಾಚೀನ ಕಾಲದಿಂದ ಹೊರಹೊಮ್ಮಿದ ಕನ್ನಡ ಭಾಷೆಯಲ್ಲಿನ ಕೃತಿಗಳು ಅದ್ಭುತವಾಗಿವೆ ಎಂದು ಅಭಿಪ್ರಾಯಪಟ್ಟರು.

 

ಕನ್ನಡಿಗರಾದ ನಾವು ಪ್ರತಿ ಹೆಜ್ಜೆಯಲ್ಲೂ ಕನ್ನಡತನವನ್ನು ಬೆಳೆಸಿಕೊಳ್ಳಬೇಕು. ಕನ್ನಡ ಭಾಷೆಯ ಸೊಗಡನ್ನು ಇನ್ನೂ ಹೆಚ್ಚಾಗಿ ಪಸರಿಸೋಣ ಎಂದು ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ  ಶ್ರೀ ಮಲಯ ಶಾಂತಮುನಿ ದೇಶಿಕೇಂದ್ರ ಸ್ವಾಮೀಜಿ, ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಕನ್ನಡ ಮತ್ತು ಸಂಸ್ಕೃತಿ  ಇಲಾಖೆ ನಿರ್ದೇಶಕ ವಿಶ್ವನಾಥ್ ಪಿ.ಹಿರೇಮಠ್, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಸಿ.ಸೋಮಶೇಖರ್,  ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ‌ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Facebook
Twitter
LinkedIn
WhatsApp
Telegram
Email

Leave a Comment

Your email address will not be published. Required fields are marked *

Translate »
Scroll to Top