ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳು ಬಾಣಂತಿಯರ ಪಾಲಿಗೆ ಮರಣ ಮೃದಂಗಗಳಾಗಿವೆ, ಮಹಿಳೆಯರಿಗೆ 2,000 ರೂ. ಗ್ಯಾರಂಟಿ ಭಾಗ್ಯ ನೀಡುವ ಬದಲು ಬಾಣಂತಿಯರ ಸಾವು ನಿಲ್ಲಿಸುವತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಗಮನಹರಿಸಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಒತ್ತಾಯಿಸಿದ್ದಾರೆ.
ಆಸ್ಪತ್ರೆಗಳಿಗೆ ಕಳಪೆ ದ್ರಾವಣ ಪೂರೈಸಿದ ಕಂಪನಿ ವಿರುದ್ಧ ದೆಹಲಿಗೆ ಹೋಗಿ ದೂರು ಕೊಡುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದರು, ಇನ್ನೂ ಏಕೆ ದೂರು ಕೊಟ್ಟಿಲ್ಲ. ಆರೋಗ್ಯ ಸಚಿವರು ರಾಜಿನಾಮೆ ಕೊಟ್ಟರೆ, ಸಚಿವರು ಬದಲಾಗಿ, ಇಲಾಖೆಯಲ್ಲಿ ಸಕ್ರಿಯ ಕೆಲಸ ಆಗಿ ಬಾಣಂತಿಯರ ಸಾವಿಗೆ ಪರಿಹಾರ ದೊರೆಯಲು ಸಾಧ್ಯವಾಗಬಹುದು ಎಂದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಣಂತಿಯರ ಸಾವು ಪ್ರಕರಣಗಳ ನ್ಯಾಯಾಂಗ ತನಿಖೆ ಆಗಬೇಕು, ಬಾಣಂತಿಯರ ಸರಣಿ ಸಾವು ಸರ್ಕಾರಿ ಪ್ರಾಯೋಜಿತ ಕೊಲೆಗೆ ಸಮನಾಗಿದೆ, ಇಷ್ಟೆಲ್ಲಾ ಆಗುತ್ತಿದ್ದರೂ ರಾಜ್ಯ ಸರ್ಕಾರಕ್ಕೆ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಅನಿಸುತ್ತಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಔಷಧ ನಿಯಂತ್ರಣದಲ್ಲಿ ಗೋಲ್ಮಾಲ್ ನಡೆಯುತ್ತಿರುವುದನ್ನು ತಪ್ಪಿಸಿ, ಬಾಣಂತಿಯರಿಗೆ ಬದುಕುವ ಗ್ಯಾರಂಟಿಯನ್ನು ಸರ್ಕಾರ ಕೊಡಲಿ ಎಂದರು.
ಬಿಜೆಪಿಯ ಸತ್ಯಶೋಧನಾ ಸಮಿತಿ ಪ್ರಕರಣಗಳ ಅಧ್ಯಯನ ನಡೆಸಿ ವರದಿ ನೀಡಿದ ನಂತರ ಹೋರಾಟ ತೀವ್ರಗೊಳಿಸಲಾಗುವುದಲ್ಲದೆ, ರಾಜ್ಯಪಾಲರನ್ನೂ ಭೇಟಿ ಮಾಡಲಿದ್ದೇವೆ ಎಂದರು.
ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಕೆ.ಎಸ್.ಈಶ್ವರಪ್ಪ ಅವರನ್ನು ಟಾರ್ಗೆಟ್ ಮಾಡಿ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದರು, ಒಬ್ಬ ವ್ಯಕ್ತಿ ಆತ್ಮಹತ್ಯೆ ನಿರ್ಧಾರಕ್ಕೆ ಬರಬೇಕಾದರೆ ಎಷ್ಟು ವ್ಯಥೆ ಪಟ್ಟಿರಬಹುದು, ಎಷ್ಟು ಮಂದಿ ಬೀದಿಗೆ ಬಂದಿರಬಹುದು ಎಂಬುದಾಗಿ ಪ್ರಶ್ನಿಸಿದ್ದರು.
ಪ್ರಸ್ತುತ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣದಲ್ಲಿ ಇದೇ ಪ್ರಿಯಾಂಕ್ ಖರ್ಗೆ ಏಕೆ ರಾಜೀನಾಮೆ ನೀಡುತ್ತಿಲ್ಲ, ಮಾನ ಮರ್ಯಾದೆ ಇದ್ದರೆ ರಾಜೀನಾಮೆ ನೀಡಲಿ ಎಂದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಅವರ ಮಗ ಎಂಬ ಕಾರಣಕ್ಕೆ ಪ್ರಿಯಾಂಕ್ ಖರ್ಗೆ ರಾಜೀನಾಮೆ ಪಡೆಯಲು ಸಿದ್ದರಾಮಯ್ಯ ನಡುಗುತ್ತಿದ್ದಾರೆ, ನಾವು ಬಟ್ಟೆಹರಿದುಕೊಳ್ಳುವ ಮೊದಲು ಅವರ ಬಟ್ಟೆ ಹರಿದು ಹೋಗಲಿದೆ ಎಂದು ತಿರುಗೇಟು ನೀಡಿದರು.