ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ಬಿಎಂಟಿಸಿ ಬಸ್ಸುಗಳ ಪ್ರಯಾಣ ದರ ಏರಿಕೆ ಮಾಡಲು ಸರ್ಕಾರ ತೀರ್ಮಾನ

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ಬಿಎಂಟಿಸಿ ಬಸ್ಸುಗಳ ಪ್ರಯಾಣ ದರವನ್ನು ಏರಿಕೆ ಮಾಡಲು ಸರ್ಕಾರ ತೀರ್ಮಾನಿಸಿದೆ.

ಈಗ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನ ಮುಕ್ತಾಯವಾದ ನಂತರ ಸಾರಿಗೆ ಸಂಸ್ಥೆ ಬಸ್ಸುಗಳ ಪ್ರಯಾಣ ದರ ಶೇಕಡಾ 10 ರಿಂದ 12 ರಷ್ಟು ಏರಿಕೆಯಾಗಲಿದೆ ಎಂದು ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.

 

ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಸುಗಳ ಪ್ರಯಾಣದರವನ್ನು ಕಳೆದ ನಾಲ್ಕು ವರ್ಷಗಳಿಂದ ಏರಿಕೆ ಮಾಡಿಲ್ಲ.ಇದೇ ರೀತಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಬಸ್ಸುಗಳ ಪ್ರಯಾಣ ದರವನ್ನು ಕಳೆದ ಹತ್ತು ವರ್ಷಗಳಿಂದ ಏರಿಕೆ ಮಾಡಿಲ್ಲ.

ಈ ಮಧ್ಯೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ನೌಕರರಿಗೆ ವೇತನವನ್ನು ಹೆಚ್ಚಿಸುವ ಅನಿವಾರ್ಯತೆ ಇದ್ದು,ಈ ಎಲ್ಲ ಹಿನ್ನೆಲೆಯಲ್ಲಿ ಬಸ್ಸುಗಳ ಪ್ರಯಾಣ ದರ ಏರಿಕೆ ಅನಿವಾರ್ಯ ಎಂದು ಮೂಲಗಳು ವಿವರ ನೀಡಿವೆ.

ಈ ಮಧ್ಯೆ ಶಕ್ತಿ ಯೋಜನೆಯಡಿ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ನೀಡಲಾಗಿದ್ದು,ಇದರ ಪರಿಣಾಮವಾಗಿ ಪುರುಷ ಪ್ರಯಾಣಿಕರು ಮಾತ್ರ ಟಿಕೆಟ್ ಖರೀದಿಸಿ ಪ್ರಯಾಣ ಮಾಡುತ್ತಾರೆ.

 

ಹೀಗಾಗಿ ಪ್ರಯಾಣ ದರ ಏರಿಕೆ ಅನಿವಾರ್ಯವಾಗಿದೆ ಎಂದಿರುವ ಮೂಲಗಳು,ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗಳು ಶೇಕಡಾ 25 ರಷ್ಟು ದರ ಹೆಚ್ಚಿಸಲು ಅನುಮತಿ ಕೋರಿದ್ದು ಇದಕ್ಕೆ ಪೂರಕವಾಗಿ ಮಾಹಿತಿಯನ್ನು ನೀಡಿವೆ.

ಆದರೆ ಏಕಾಏಕಿ ಆ ಪ್ರಮಾಣದಲ್ಲಿ ಬಸ್ಸುಗಳ ಪ್ರಯಾಣ ದರ ಏರಿಕೆ ಮಾಡಲು ಸರ್ಕಾರ ತಯಾರಿಲ್ಲ.ಬದಲಿಗೆ ಶೇಕಡಾ 10 ರಿಂದ 12 ರಷ್ಟು ಏರಿಕೆ ಮಾಡಲು ಸಜ್ಜಾಗಿದೆ ಎಂದು ಮೂಲಗಳು ಸ್ಪಷ್ಟ ಪಡಿಸಿವೆ.

 

ರಸ್ತೆ ಸಾರಿಗೆ ಸಂಸ್ಥೆ ಮತ್ತು ಬಿಎಂಟಿಸಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯವನ್ನು ಒದಗಿಸುವ ಯೋಜನೆಯಿಂದ ಸರ್ಕಾರದ ಬೊಕ್ಕಸಕ್ಕೆ ಆಗುತ್ತಿರುವ ವೆಚ್ಚವನ್ನು ಪರಿಗಣಿಸಿದರೆ,ಸಾರಿಗೆ ಸಂಸ್ಥೆ ಉಳಿವಿನ ದೃಷ್ಟಿಯಿಂದ ದರ ಏರಿಕೆ ಅನಿವಾರ್ಯ ಎಂಬುದು ಮೂಲಗಳ ಹೇಳಿಕೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top