ಹೊಸಪೇಟೆ: ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಸೋಮವಾರ ಸಂಜೆ ತುಂಗಾಭದ್ರಾ ಜಲಾಶಯದ ಸೌಂದರ್ಯವನ್ನು ಕಣ್ತುಂಬಿಕೊಂಡರು.
ಜಲಾಶಯದ ಅಪಾರ ಪ್ರಮಾಣದ ಜಲರಾಶಿ ಹಾಗೂ ಜಲಾಶಯದ ಮುಂಭಾಗದಲ್ಲಿರುವ ಉದ್ಯಾನವನ ವೀಕ್ಷಿಸಿ ಅದರ ಸೌಂದರ್ಯಕ್ಕೆ ಮಾರುಹೋದರು.
ವೈಕುಂಠ ಅತಿಥಿಗೃಹದ ಮೇಲಿಂದ ಜಲಾಶಯ ಮತ್ತು ಮುಂಭಾಗದ ಉದ್ಯಾನವನ ಹಾಗೂ ಸೂರ್ಯ ಅಸ್ತಂಗತವಾಗುತ್ತಿರುವುದನ್ನು ಕಣ್ತುಂಬಿಕೊಂಡರು.
ಜಲಾಶಯದ ಮೇಲ್ಗಡೆ ಎರಡು ಕಿ.ಮೀ ಕಾಲ್ನಡಿಗೆಯಲ್ಲಿಯೇ ಸುತ್ತಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಜಲಾಶಯ ವೀಕ್ಷಿಸಿದರು ಮತ್ತು ಅಧಿಕಾರಿಗಳಿಂದ ಜಲಾಶಯ ಕುರಿತ ಮಾಹಿತಿಯನ್ನು ಪಡೆದುಕೊಂಡರು.
ತುಂಗಾಭದ್ರಾ ಜಲಾಶಯಕ್ಕೆ ರಾಜ್ಯಪಾಲರು ಭೇಟಿ ನೀಡಿದ ಹಿನ್ನೆಲೆ ತುಂಗಭದ್ರಾ ಬೋರ್ಡ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್,ಎಸ್ಪಿ ಡಾ.ಅರುಣ್ ಎಸ್.ಕೆ, ತುಂಗಾಭದ್ರಾ ಜಲಾಶಯದ ಅಧಿಕಾರಿಗಳು ಮತ್ತು ಇತರರು ಇದ್ದರು.