ಗೋವಾ ಕೆಪಿಸಿಸಿ ಕಚೇರಿಯಲ್ಲಿ ಡಿ.ಕೆ. ಶಿವಕುಮಾರ್ ಅವರ ಪತ್ರಿಕಾಗೋಷ್ಠಿ

ಗೋವಾ, 28 : ಇಂದು ಮೊದಲ ಬಾರಿಗೆ ಗೋವಾ ಪ್ರದೇಶ ಕಾಂಗ್ರೆಸ್ ನಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದು, ನನಗೆ ಬಹಳ ಪ್ರಮುಖವಾದ ದಿನ. ನಾನು ಈ ಹಿಂದೆ ಸಾಕಷ್ಟು ಸಂದರ್ಭಗಳಲ್ಲಿ ಹಲವು ವಿಚಾರ ಸಂಕಿರಣಗಳಲ್ಲಿ ಭಾಗವಹಿಸಲು ಇಲ್ಲಿಗೆ ಆಗಮಿಸಿದ್ದೆ. ಆದರೆ ಇಂದು ಕಾಂಗ್ರೆಸ್ ಪಕ್ಷದ ಪರವಾಗಿ ಇಲ್ಲಿಗೆ ಆಗಮಿಸಿ, ದೇಶ ಕಾಯುವ ಸೈನಿಕರ ಪರವಾಗಿ ಧ್ವನಿ ಎತ್ತುತ್ತಿದ್ದೇನೆ. ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಜೈ ಜವಾನ್, ಜೈ ಕಿಸಾನ್ ಎಂಬ ಘೋಷಣೆ ಮೂಲಕ ರೈತರು ಹಾಗೂ ಸೈನಿಕರ ಪ್ರಾಮುಖ್ಯತೆ ಸಾರಿದ್ದರು. ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರ ದೇಶದ ರೈತರು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಒಂದು ವರ್ಷಕ್ಕೂ ಹೆಚ್ಚು ಕಾಲ ಹೋರಾಟ ಮಾಡಿದ್ದಾರೆ. ಆ ಮೂಲಕ ದೇಶದ ಅನ್ನದಾತರ ಭವಿಷ್ಯಕ್ಕೆ ಮಾರಕವಾಗಿದ್ದ ಕರಾಳ ಶಾಸನಗಳನ್ನು ಹಿಂಪಡೆಯುವಂತೆ ಮಾಡಿದ್ದಾರೆ. 700 ಕ್ಕೂ ಹೆಚ್ಚು ರೈತರು ಈ ಹೋರಾಟದಲ್ಲಿ ಸತ್ತಿದ್ದರೂ ಅವರನ್ನು ಹುತಾತ್ಮರು ಎಂದು ಕೇಂದ್ರ ಸರಕಾರ ಘೋಷಿಸಿಲ್ಲ. ತಮ್ಮ ಪ್ರಾಣವನ್ನೇ ಒತ್ತೆ ಇಟ್ಟು ದೇಶದ ಗಡಿ ಕಾಯುತ್ತಿರುವ ಸೈನಿಕರ ವಿಚಾರವಾಗಿ ಮಾತನಾಡಲು ಇಂದು ಇಲ್ಲಿಗೆ ಬಂದಿದ್ದೇನೆ.

ನಾನಿಂದು ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರನ್ನು ಸ್ಮರಿಸಲು ಬಯಸುತ್ತೇನೆ. ಅವರು 18 ವರ್ಷದ ಯುವಕರಿಗೆ ಮತದಾನದ ಹಕ್ಕು ನೀಡುವಾಗ ನಾನು ಸಂಸತ್ತಿನ ಗ್ಯಾಲರಿಯಲ್ಲಿ ಕೂತಿದ್ದೆ. ಬಿಜೆಪಿ ಹಾಗೂ ಇತರೆ ವಿರೋಧ ಪಕ್ಷಗಳು ರಾಜೀವ್ ಗಾಂಧೀಜಿ ಅವರ ನಿಲುವನ್ನು ಪ್ರಶ್ನಿಸಿದ್ದವು. ದೇಶದ ಯುವಕರ ಮೇಲೆ ಅಪಾರ ನಂಬಿಕೆ ಹೊಂದಿದ್ದ ರಾಜೀವ್ ಗಾಂಧಿ ಅವರು ಉತ್ತರಿಸುತ್ತಾ, ನಾವು 16 ವರ್ಷದ ಯುವಕರನ್ನು ಸೇನೆಗೆ ಸೇರಿಸಿಕೊಳ್ಳುತ್ತೇವೆ. ಅವರ ಕೈಗೆ ಬಂದೂಕು ನೀಡಿ ಚೀನಾ, ಪಾಕ್ ಹಾಗೂ ಇತರ ಗಡಿಭಾಗ ಕಾಯಲು ನಿಲ್ಲಿಸುತ್ತೇವೆ. ದೇಶದ ಗಡಿ ಕಾಯಲು ಅವರ ಮೇಲೆ ವಿಶ್ವಾಸ ಇಟ್ಟಿರುವಾಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೂ ಅವರ ಮೇಲೆ ವಿಶ್ವಾಸ ಇಡಬೇಕಲ್ಲವೇ. ಪ್ರಜಾಪ್ರಭುತ್ವದಲ್ಲಿ ಪಂಚಾಯ್ತಿಯಿಂದ ಸಂಸತ್ತಿನವರೆಗೂ ಜನಪ್ರತಿನಿಧಿಗಳು ಆಯ್ಕೆಯಾಗಬೇಕು. ಯುವಕರಿಗೆ ಮತದಾನದ ಹಕ್ಕು ನೀಡುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.

ಗಡಿ ಕಾಯುತ್ತಾ ದೇಶದ ಬೆನ್ನೆಲುಬಾಗಿರುವ ಸೈನಿಕರ ಘನತೆ ಇಂದು ಮಂಕಾಗುತ್ತಿದೆ. ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ಸೈನಿಕರಿಗೆ ನೀಡಲಾಗಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ. ಈ ಬಗ್ಗೆ ಕಾಂಗ್ರೆಸ್ ಧ್ವನಿ ಎತ್ತಲಿದೆ. ಕೇಂದ್ರ ಸರಕಾರ ಸೈನಿಕರ ತ್ಯಾಗ ಬಲಿದಾನವನ್ನು ಗೌರವಿಸುತ್ತಿಲ್ಲ. ನಿವೃತ್ತ ಸೇನಾನಿಗಳು ಈ ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ. ಕಾಂಗ್ರೆಸ್ ಗೆ ಅಪಾರ ಇತಿಹಾಸವಿದೆ. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ. ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಕಾಂಗ್ರೆಸ್ ಇತಿಹಾಸ ಗೋವಾದ ಇತಿಹಾಸವಾಗಿದೆ. ಗೋವಾ ರಾಜ್ಯ ರಚನೆ ನಂತರ ಈ ರಾಜ್ಯದ ಸಮಗ್ರ ಅಭಿವೃದ್ಧಿಗೆ ಕಾಂಗ್ರೆಸ್ ಕೊಡುಗೆ ಅಪಾರ. ಶಾಂತಿ, ಸಹಬಾಳ್ವೆ, ಅಭಿವೃದ್ಧಿಗೆ ಕಾಂಗ್ರೆಸ್ ಒತ್ತು ನೀಡಿತ್ತು. ಕಳೆದ ಚುನಾವಣೆಯಲ್ಲೂ ಜನ ನಮ್ಮ ಮೇಲೆ ವಿಶ್ವಾಸ ಇಟ್ಟಿದ್ದರು. ಆದರೆ ಕೇಂದ್ರ ಬಿಜೆಪಿ ಸರ್ಕಾರದ ಹಸ್ತಕ್ಷೇಪದಿಂದ ನಾವು ನಮ್ಮ ಚುನಾಯಿತ ಸದಸ್ಯರನ್ನು ಕಳೆದುಕೊಂಡು, ಬಿಜೆಪಿ ಸರ್ಕಾರ ರಚನೆಯಾಯಿತು.

ಆದರೆ ಈ ಸರ್ಕಾರದಿಂದ ಜನ ತೃಪ್ತರಾಗಿದ್ದಾರೆಯೇ? ಖಂಡಿತಾ ಇಲ್ಲ. ಈ ಬಾರಿ ಗೋವಾ ಜನ ಕಾಂಗ್ರೆಸ್ ಗೆ ಪೂರ್ಣ ಪ್ರಮಾಣದ ಬೆಂಬಲ ನೀಡಲಿದ್ದಾರೆ. ನಾವು ಕರ್ನಾಟಕದವರು ಗೋವಾ ಜತೆ ಗಡಿ ಹಂಚಿಕೊಂಡಿದ್ದು, ಗೋವಾ ಜನರ ಮೇಲೆ ನಂಬಿಕೆ ಇಟ್ಟಿದ್ದೇವೆ. ಇಲ್ಲಿನ ಜನ ವಿದ್ಯಾವಂತರು, ಬುದ್ದಿವಂತರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟಿದ್ದು, ಬದಲಾವಣೆ ಬಯಸಿದ್ದಾರೆ ಎಂದು ನಂಬಿದ್ದೇವೆ. ಹೀಗಾಗಿ ಜನ ಕಾಂಗ್ರೆಸ್ ಗೆ ಆಶೀರ್ವಾದ ಮಾಡಬೇಕು, ಬದಲಾವಣೆಗೆ ಒಂದು ಅವಕಾಶ ನೀಡಬೇಕು ಎಂದು ಮನವಿ ಮಾಡುತ್ತೇನೆ. ನಾವು ರಾಜ್ಯದ ಜನರ ಅಭಿವೃದ್ಧಿಗೆ ಅಗತ್ಯ ಬದಲಾವಣೆ ತರುತ್ತೇವೆ. ಕೋಮು ಸೌಹಾರ್ದತೆ, ಭ್ರಷ್ಟಾಚಾರರಹಿತ ಸುಸ್ಥಿರ ಆಡಳಿತದ ಭರವಸೆ ನೀಡುತ್ತೇವೆ.

ನಾವು ಒಂದು ಪಕ್ಷದ ಜತೆ ಮೈತ್ರಿ ಮಾಡಿಕೊಂಡಿದ್ದೇವೆ. ಒಟ್ಟಾಗಿ ಕೈಜೋಡಿಸುವುದು ಉತ್ತಮ ಆರಂಭ. ನಾವು ಒಟ್ಟಾಗಿ ಕೆಲಸ ಮಾಡಿ ಗೋವಾ ಅಭಿವೃದ್ಧಿಗೆ ಅತ್ಯುತ್ತಮ ಆಡಳಿತ ನೀಡುತ್ತೇವೆ. ದೇಶದ ಪ್ರಧಾನಿ ರೈತರ ಮುಂದೆ ಕ್ಷಮೆ ಯಾಚಿಸಿರುವುದು ಅವರ ಸರ್ಕಾರ ಸರಿಯಾದ ನಿರ್ಧಾರ ತೆಗೆದುಕೊಂಡಿರಲಿಲ್ಲ ಎಂಬುದಕ್ಕೆ ಸಾಕ್ಷಿ. ದೇಶದ ಯುವಕರು ನಿರುದ್ಯೋಗ ಹಾಗೂ ಆರ್ಥಿಕ ಬಿಕ್ಕಟ್ಟಿನಿಂದ ಪರಿತಪಿಸುತ್ತಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ, ಇಂದಿರಾಗಾಂಧಿ, ರಾಜೀವ್ ಗಾಂಧಿ ಹಾಗೂ ಮನಮೋಹನ್ ಸಿಂಗ್ ಅವರ ಕಾಲದಲ್ಲಿ ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಂಡಿತ್ತು. ಆದರೆ ಈ ಬಿಜೆಪಿ ಸರ್ಕಾರದ ಆಡಳಿತ ವೈಖರಿಯನ್ನು ನೀವು ನೋಡಿದ್ದೀರಿ. ನೀವು ಕೇಂದ್ರ ಹಾಗೂ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಇಂಜಿನ್ ಸರ್ಕಾರ ಕಂಡಿದ್ದೀರಿ. ಆದರೆ ಈಗಿನ ಗೋವಾ ಹಾಗೂ ದೆಹಲಿ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳುವಲ್ಲಿ ವಿಫಲವಾಗಿವೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ. ಕೋವಿಡ್ ನಲ್ಲಿ ಜನ ತತ್ತರಿಸಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ ಎಂದು ರಾಜ್ಯಪಾಲರೇ ಒಪ್ಪಿಕೊಂಡಿದ್ದಾರೆ. ಸೈನಿಕರು ಹಾಗೂ ಯುವಕರ ವಿಚಾರದಲ್ಲಿ ನಾವು ಹೆಚ್ಚಿನ ಮಹತ್ವ ನೀಡಲು ಕಾರಣ, ಚುನಾವಣೆ ಸಮಯದಲ್ಲಿ ಮೋದಿ ಅವರ ಭಾಷಣ ಹಾಗೂ ಬಿಜೆಪಿ ಪ್ರಣಾಳಿಕೆಗಳಲ್ಲಿ ಸೈನಿಕರು ಹಾಗೂ ಯುವಕರಿಗೆ ನೀಡಲಾಗಿದ್ದ ಭರವಸೆ ಈಡೇರಿಲ್ಲ. ಮೋದಿ ಅವರು ಏಕಶ್ರೇಣಿ ಏಕಪಿಂಚಣಿ ವ್ಯವಸ್ಥೆ ಜಾರಿಗೆ ತರಲಿಲ್ಲ. ಈ ವ್ಯವಸ್ಥೆ ಪಡೆಯುವುದು ಸೈನಿಕರ ಹಕ್ಕಲ್ಲವೇ?

1.3 ಲಕ್ಷ ಉದ್ಯೋಗ ಖಾಲಿ ಇದೆ. ನಿರುದ್ಯೋಗ ಹೆಚ್ಚುತ್ತಿದ್ದರೂ ನೇಮಕಾತಿ ಮಾಡಿಕೊಳ್ಳುತ್ತಿ ಯಾಕೆ? ಬೇರೆಯವರಿಗೆ ಉದ್ಯೋಗ ಸೃಷ್ಟಿಸುವುದಿರಲಿ, ಸೇನೆಯಲ್ಲಿನ ಉದ್ಯೋಗವನ್ನೇ ಭರ್ತಿ ಮಾಡಲು ಸಾಧ್ಯವಾಗಿಲ್ಲ. ಇದು ಸರ್ಕಾರಕ್ಕೆ ನಾಚಿಕೆಗೇಡಿನ ವಿಚಾರವಲ್ಲವೇ? ಸೈನಿಕರಿಗೆ ಕಾಂಗ್ರೆಸ್ ಸರ್ಕಾರ ನೀಡಿದ್ದ ಸವಲತ್ತು ಹಿಂಪಡೆಯಲಾಗಿದೆ. ಸೇನೆಯಲ್ಲಿ ಸೇವೆ ಸಲ್ಲಿಸಿದ್ದವರಿಗೆ ನೀಡಲಾಗಿದ್ದ ಆರೋಗ್ಯ ಯೋಜನೆ ಹಿಂಪಡೆಯಲಾಗಿದೆ. ಸೇನಾ ಕ್ಯಾಂಟೀನ್ ನಲ್ಲಿ ಅವರು ಖರೀದಿ ಮಾಡುತ್ತಿದ್ದ ಸಾಮಾಗ್ರಿಗಳ ವಿನಾಯಿತಿ ರದ್ದು ಮಾಡಲಾಗಿದೆ. ಕೇವಲ 10 ಸಾವಿರ ರು.ನಷ್ಟು ಮಿತಿ ಹೇರಲಾಗಿದೆ. ಹಣದುಬ್ಬರ ಪ್ರಮಾಣ ಹೆಚ್ಚಾಗಿರುವ ಸಂದರ್ಭದಲ್ಲಿ ದೇಶಕ್ಕೆ ಸೇವೆ ಸಲ್ಲಿಸಿದ್ದ ಸೈನಿಕರಿಗೆ ನೀಡುವ ಸೌಲಭ್ಯ ಇದೇನಾ? ಇದು ದೇಶಕ್ಕೆ, ಸೈನಿಕರಿಗೆ ಮಾಡುವ ಅಪಮಾನವಲ್ಲವೆ? ದೇಶ ಕಾಯುವ ಪ್ರತಿ ಯೋಧನ ಜೇಬಿಗೆ ಸರ್ಕಾರ ಕತ್ತರಿ ಹಾಕಿದೆ. ಮೋದಿ ಅವರು ವಿಶೇಷ ಚೇತನರ ಪಿಂಚಣಿಗೂ ತೆರಿಗೆ ವಿಧಿಸಿದೆ. ಇದು ಇಡೀ ದೇಶವೇ ನಾಚಿಕೆಯಿಂದ ತಲೆತಗ್ಗಿಸುವ ಸಂಗತಿ.

ಈ ಎಲ್ಲ ಪ್ರಶ್ನೆಗಳಿಗೆ ಪ್ರಧಾನಿ ಮೋದಿ ಅವರು ಉತ್ತರಿಸಬೇಕು. ಸೇನೆಯಲ್ಲಿ ಕನಿಷ್ಟ ಅವಧಿ ಸೇವೆ ಸಲ್ಲಿಸಿದ್ದವರಿಗೆ ಪೆಟ್ರೋಲ್ ಬಂಕ್ ಹಾಗೂ ಇತರೆ ಸೌಲಭ್ಯ ಹೊಂದುವ ಅವಕಾಶವನ್ನು ಕಸಿದುಕೊಳ್ಳಲಾಗಿದೆ. ಎಲ್ಲವನ್ನೂ ಖಾಸಗೀಕರಣ ಮಾಡಲಾಗಿದೆ. ಅವರಿಗೆ ಸೆಕ್ಯೂರಿಟಿ ಗಾರ್ಡ್ ಕೆಲಸದ ಅವಕಾಶವನ್ನು ಮಾತ್ರ ಬಿಜೆಪಿ ಸರ್ಕಾರ ನೀಡಿದೆ. ದೇಶದ ಯುವ ಸಮುದಾಯ, ದೇಶ ಕಾಯುವ ಯೋಧರು, ದೇಶದ ಅನ್ನದಾತರು ಬಿಜೆಪಿ ಸರ್ಕಾರದ ಅಧಿಕಾರ ಅವಧಿಯಲ್ಲಿ ನೊಂದಿದ್ದಾರೆ. ಎಲ್ಲ ವರ್ಗದ ಜನ ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದು, ಸೈನಿಕರು ಬೀದಿಗಿಳಿದು ಹೋರಾಡುವ ಪರಿಸ್ಥಿತಿ ಬಂದರೆ ದೇಶದ ಸ್ಥಿತಿ ಏನು? ಈ ಎಲ್ಲ ಪ್ರಶ್ನೆಗಳಿಗೆ ಬಿಜೆಪಿ ನಾಯಕರು ಉತ್ತರಿಸಬೇಕು. ನಾವು ನಿಮಗೆ ಸುಭದ್ರ ಹಾಗೂ ಅಭಿವೃದ್ಧಿ ಆಡಳಿತ ನೀಡುತ್ತೇವೆ, ನಮಗೆ ಒಂದು ಅವಕಾಶ ನೀಡಿ ಎಂದು ಕೈಮುಗಿದು ಕೇಳಿಕೊಳ್ಳುತ್ತೇನೆ.

Leave a Comment

Your email address will not be published. Required fields are marked *

Translate »
Scroll to Top