ಆ.1ರಂದು ವೇತನದ ವ್ಯತ್ಯಾಸದ ಹಣ ಪಾವತಿ

ಹೊರಗುತ್ತಿಗೆ ನೌಕರರೊಂದಿಗೆ ಚರ್ಚೆ ಮಾಡಿದ ಸಿಂಡಿಕೇಟ್ ಸದಸ್ಯರು, ವಿವಿ ಅಧಿಕಾರಿಗಳು

ಬಳ್ಳಾರಿ: ಬಳ್ಳಾರಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ನೌಕರರ ವೇತನದಲ್ಲಿ ನಡೆದ ಅವ್ಯವಹಾರದ ಬಗ್ಗೆ ಧ್ವನಿ ಎತ್ತಿದ ಹೊರಗುತ್ತಿಗೆ ನೌಕರರ ಸಮಸ್ಯೆಗೆ ಪರಿಹಾರ ಸಿಕ್ಕಿದ್ದು, ಮೂರ್‍ನಾಲ್ಕು ದಿನಗಳಲ್ಲಿ ಅವರವರ ಬ್ಯಾಂಕ್ ಖಾತೆಗೆ ಹಣ ಸಂದಾಯವಾಗಲಿದೆ.

 

          ಹೌದು ಕಳೆದ ಒಂದು ವಾರಕ್ಕೂ ಹೆಚ್ಚು ದಿನಗಳಿಂದ ವಿವಿಯ ಕುಲಪತಿಗಳಿಗೆ, ಕುಲಸಚಿವರಿಗೆ, ಸಿಂಡಿಕೇಟ್ ಸದಸ್ಯರಿಗೆ, ಪೊಲೀಸ್ ಠಾಣೆಗೆ ಸೇರಿದಂತೆ ಸರ್ಕಾರದವರೆಗೆ ಮನವಿ ಪತ್ರಗಳನ್ನು ಸಲ್ಲಿಸಿ, ತಮಗಾದ ಅನ್ಯಾಯದ ಬಗ್ಗೆ ಧ್ವನಿ ಎತ್ತಿದ್ದರು. ಇದೇ ತಿಂಗಳ ಕೊನೆಯ ದಿನಕ್ಕೆ ವಿವಿಯ ಕುಲಪತಿಗಳು ನಿರ್ಗಮಿಸಲಿದ್ದು, ಅವರು ಇರುವಾಗಲೇ ನಮ್ಮ ಸಮಸ್ಯೆಗೆ ಪರಿಹಾರ ದೊರಕಿಸಿಕೊಡಬೇಕೆಂಬುದು ಹೊರಗುತ್ತಿಗೆ ನೌಕರರ ವಾದವಾಗಿತ್ತು. ಅಂತೆಯೇ ಇಂದು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಹೊರ ಗುತ್ತಿಗೆ ನೌಕರರು, ಸಿಂಡಿಕೇಟ್ ಸದಸ್ಯ ಸೇರಿದಂತೆ ಇನ್ನಿತರರೊಂದಿಗೆ ಸಭೆ ನಡೆಸಿ ಅಂತಿಮ ತೀರ್ಮಾನಕ್ಕೆ ಬಂದಿದ್ದು, ಮಂಗಳವಾರ ಅಂದರೆ ಆಗಸ್ಟ್ ೦೧ರಂದು ಹೊರ ಗುತ್ತಿಗೆ ನೌಕರರಿಗೆ ತಮಗೆ ಬರಬೇಕಾದ ಮೊತ್ತವನ್ನು ಅವರ ಬ್ಯಾಂಕ್ ಖಾತೆಗಳಿಗೆ ಹಾಕಲಾಗುವುದು ಎಂದು ತಿಳಿಸಲಾಗಿದೆ. 

ಸಿಂಡಿಕೇಟ್ ಸದಸ್ಯರಾಗಿದ್ದ ಮರ್ಚೆಡ್ ಮಲ್ಲಿಕಾರ್ಜುನಗೌಡ ಅವರು, ಹೊರ ಗುತ್ತಿಗೆ ನೌಕರರಿಗಾದ ಅನ್ಯಾಯದ ಬಗ್ಗೆ ಸತ್ಯ ಶೋಧನಾ ಸಮಿತಿಯಲ್ಲಿ ವರದಿ ನೀಡಲಾಗಿತ್ತು. ಆದರೂ ಸಂಬಂಧಪಟ್ಟವರಾರು ಗಮನ ಹರಿಸಿರಲಿಲ್ಲ. ಈ ಬಗ್ಗೆ ಇತ್ತೀಚೆಗೆ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ಮನವಿ ಸಲ್ಲಿಸಿ, ಕುಲಪತಿಗಳು ನಿರ್ಗಮನವಾಗುವಷ್ಟರಲ್ಲೇ, ತನಿಖೆ ನಡೆಸಿ ಹೊರಗುತ್ತಿಗೆ ನೌಕರರಿಗೆ ನ್ಯಾಯ ಒದಗಿಸಲು ಕೋರಲಾಗಿತ್ತು. ಅದಕ್ಕೆ ಸ್ಪಂದಿಸಿದ ಎಸ್‌ಪಿಯವರು ವಿವಿಯ ಕುಲಪತಿಗಳು ಹಾಗೂ ಕುಲಸಚಿವರ ಬಳಿ ಮಾತನಾಡಿ, ಶೀಘ್ರದಲ್ಲೇ ಸಮಸ್ಯೆ ಪರಿಹರಿಸಿ ಹಣ ಪಾವತಿ ಮಾಡಿಸಲಾಗುವುದು ಎಂದು ಹೇಳಿದ್ದರು. ಅಂತೆಯೇ ಇಂದು ಸಭೆ ನಡೆಸಲಾಗಿ ಹಣ ಪಾವತಿ ಮಾಡಲು ಒಪ್ಪಲಾಗಿದೆ.

ಸಭೆಯ ನಂತರ ಸಿಂಡಿಕೇಟ್ ಸದಸ್ಯ ಸುರೇಶ್ ಸಜ್ಜನ್ ಅವರು ಮಾತನಾಡಿ, ಕಳೆದ ೧೦ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಹೊರಗುತ್ತಿಗೆ ನೌಕರರ ವೇತನದಲ್ಲಿನ ವ್ಯತ್ಯಾಸ ಹಣದಲ್ಲಿ ಅವ್ಯವಹಾರ ನಡೆದ ಬಗ್ಗೆ ಸತ್ಯಶೋಧನಾ ವರದಿ ನೀಡಲಾಗಿದೆ. ಇದೀಗ ಕುಲಪತಿಗಳು ನಿರ್ಗಮನವಾಗುವ ಮುನ್ನವೇ ಹೊರಗುತ್ತಿಗೆ ನೌಕರರ ವ್ಯತ್ಯಾಸದ ವೇತನ ಹಣವನ್ನು ಪಾವತಿ ಮಾಡಲು ಸೂಚಿಸಲಾಗಿದೆ. ಅದರಲ್ಲೂ ಹೊರಗುತ್ತಿಗೆ ನೌಕರರ ರಜಾ ದಿನಗಳು, ಇನ್ನಿತರೆ ಖಡಿತಗಳನ್ನೊಳಗೊಂಡು ಉಳಿದ ಮೊತ್ತವನ್ನು ಅವರಿಗೆ ಮಂಗಳವಾರ ನೀಡಲು ಒಪ್ಪಿದ್ದಾರೆ ಎಂದು ತಿಳಿಸಿದರು.

 

ಹೊರಗುತ್ತಿಗೆ ನೌಕರರ ನಿಯೋಗದ ಮಲ್ಲಿಕಾರ್ಜುನ್ ಎಂಬುವವರು ಮಾತನಾಡಿ, ಇಂದು ನಡೆದ ಸಭೆಯಲ್ಲಿ ಗುತ್ತಿಗೆದಾರರು ಹಾಗೂ ವಿಶ್ವವಿದ್ಯಾಲಯದಿಂದ ಕುಲಪತಿಗಳು ನಮ್ಮ ಸಮಸ್ಯೆ ಇತ್ಯರ್ಥ ಮಾಡಿದ್ದು, ಮಂಗಳವಾರದಂದು ಹಣ ಸಂದಾಯ ಮಾಡುವುದಾಗಿ ಒಪ್ಪಿದ್ದಾರೆ. ನಮ್ಮೆಲ್ಲರ ಒಗ್ಗಟ್ಟಿನ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಸಂತಸ ವ್ಯಕ್ತ ಪಡಿಸಿದರು.

          ಈ ಸಂದರ್ಭದಲ್ಲಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವ ವಿದ್ಯಾಲಯದ ಮುಖ್ಯ ಆವರಣ, ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರ, ಯಲಬುರ್ಗಾ ಸ್ನಾತಕೋತ್ತರ ಕೇಂದ್ರ, ಕೊಪ್ಪಳದ ಸ್ನಾತಕೋತ್ತರ ಕೇಂದ್ರದ ಹೊರ ಗುತ್ತಿಗೆ ನೌಕರರು ಉಪಸ್ಥಿತರಿದ್ದರು.

 

ಹೊರಗುತ್ತಿಗೆ ನೌಕರರ ವೇತನ ಸಂಬಂಧಿತ ಸಭೆಯಲ್ಲಿ ಕುಲಪತಿ ಪ್ರೊ.ಸಿದ್ದು ಅಲಗೂರ, ಕುಲಸಚಿವ ಎಸ್‌ಸಿ ಪಾಟೀಲ್, ವಿವಿಯ ಹಣಕಾಸು ಅಧಿಕಾರಿಗಳು,ಸಿಂಡಿಕೇಟ್ ಸದಸ್ಯ ರಮೇಶ್ ಭೂಪಲ್ ಸವಧಿ, ಇಂಡಸ್ ಸೆಕ್ಯುರಿಟಿ ಸರ್ವೀಸ್ ಮತ್ತು ಡಿಟೆಕ್ಟಿವ್ಸ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕರು, ಹೊರಗುತ್ತಿಗೆ ನೌಕರರಾದ ಚಿದಾನಂದ ಹೆಚ್., ಪರಿಶುದ್ಧ ಕೆ., ಸರಸ್ವತಿ ಎಲ್.ಎನ್. ಇದ್ದರು.

Facebook
Twitter
LinkedIn
WhatsApp
Email
Telegram

Leave a Comment

Your email address will not be published. Required fields are marked *

Translate »
Scroll to Top