ಕಟ್ಟಡ ಕಾರ್ಮಿಕರಿಗೂ ಉಚಿತ ಬಸ್ ಪಾಸ್;ಬಜೆಟ್ ನಲ್ಲಿ ಸಿಎಂ ಘೋಷಣೆ

ಬಳ್ಳಾರಿ, ಫೆ.20, : ಗಾರ್ಮೆಂಟ್ಸ್ ಕಾರ್ಮಿಕರಿಗೆ,ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್ ಸೌಲಭ್ಯವನ್ನು ನಮ್ಮ ಸರಕಾರ ಈಗಾಗಲೇ ಕಲ್ಪಿಸಿದ್ದು, ಕಟ್ಟಡ ಕಾರ್ಮಿಕರಿಗೂ ಉಚಿತ ಬಸ್ ಸೌಲಭ್ಯ ನೀಡುವ ನಿಟ್ಟಿನಲ್ಲಿ ಮುಂದಿನ ತಿಂಗಳ ಮಂಡಿಸಲಿರುವ ಬಜೆಟ್ ನಲ್ಲಿ ಮುಖ್ಯಮಂತ್ರಿಗಳು ಘೋಷಣೆ ಮಾಡಲಿದ್ದಾರೆ ಎಂದು ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಹೇಳಿದರು.ಸಿರಗುಪ್ಪ ಪಟ್ಟಣದಲ್ಲಿ ರೂ.2.50ಕೋಟಿ ವೆಚ್ಚದಲ್ಲಿ ಸಕಲ ಸೌಕರ್ಯ ಒಳಗೊಂಡು ನಿರ್ಮಿಸಲಾಗಿರುವ ಸುಸಜ್ಜಿತ ಸಿರುಗುಪ್ಪ ನೂತನ ಬಸ್ ನಿಲ್ದಾಣವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸಾರಿಗೆ ಇಲಾಖೆಯ ನೌಕರರಿಗೆ ಮುಂದಿನ ದಿನಗಳಲ್ಲಿ ಸರಿಯಾದ ಸಮಯಕ್ಕೆ ಅವರವರ ಬ್ಯಾಂಕ್ ಖಾತೆಗಳಿಗೆ ಸಂಬಳ ಜಮಾ ಆಗುವಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದ ಸಚಿವ ಶ್ರೀರಾಮುಲು ಅವರು ಸಾರಿಗೆ ನೌಕರರ ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಮತ್ತು ಅವರ ಮನವೋಲಿಸಿ ಶೀಘ್ರ ವೇತನ ಪರಿಷ್ಕರಿಸುವ ಕೆಲಸ ಮಾಡಲಾಗುವುದು ಎಂದರು.


ನಾನು ಸಾರಿಗೆ ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ನಂತರ ಸಾರಿಗೆ ಇಲಾಖೆಯಲ್ಲಿ ಅಮೂಲಾಗ್ರ ಬದಲಾವಣೆಗೆ ಕೈಹಾಕಿದ್ದೇನೆ. ಉತ್ತರ ಕರ್ನಾಟಕ ಪ್ರದೇಶಗಳಲ್ಲಿ‌ 8-9ಲಕ್ಷ ಓಡಿದ ಬಸ್‌ಗಳಿದ್ದು,ಅವುಗಳನ್ನೆಲ್ಲ ಸ್ಕ್ರ್ಯಾಪ್ ಮಾಡಿ ಹೊಸ ಬಸ್ ಗಳು ಒದಗಿಸಲು ಕ್ರಮವಹಿಸಲಾಗುವುದು ಎಂದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಗೆ ಕೇಂದ್ರ ಮತ್ತು ರಾಜ್ಯದಲ್ಲಿ ಡಬಲ್ ಇಂಜಿನ್ ರೀತಿಯಲ್ಲಿ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೋ ಅದೇ ರೀತಿ ನಾನು ಮತ್ತು ಶಾಸಕ ಸೋಮಲಿಂಗಪ್ಪ ಅವರು‌ ಜತೆಗೂಡಿ ಜಿಲ್ಲೆಯ ಅಭಿವೃದ್ಧಿಗೆ ಕ್ರಮವಹಿಸಲಾಗುವುದು ಎಂದರು. ಸಿರುಗುಪ್ಪ ಶಾಸಕ ಸೋಮಲಿಂಗಪ್ಪ ಅವರು ಮಾತನಾಡಿ,ಏಪ್ರಿಲ್ ತಿಂಗಳಲ್ಲಿ ಸಿರಗುಪ್ಪ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗುವುದು.ಈ ಅವಧಿ ಮುಗಿಯುವಯದರೊಳಗೆ 1ಸಾವಿರ ಕೋಟಿ ರೂ.ಗಳನ್ನು ತಂದು ಸಿರುಗುಪ್ಪ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕ್ರಮವಹಿಸಲಾಗುವುದು ಎಂದರು. ವಿಭಾಗೀಯ ನಿಯಂತ್ರಣಾಧಿಕಾರಿ‌ ಇನಾಯತ್ ಬಾಗಬಾನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.\


ನಗರಸಭೆ ಅಧ್ಯಕ್ಷ ಜೆ.ಸುಶೀಲಮ್ಮ ವೆಂಕಟರಾಮರೆಡ್ಡಿ,ನಗರಸಭೆ ಸದಸ್ಯರು ಸೇರಿದಂತೆ ಮತ್ತಿತರರು ಇದ್ದರು. ಸಾರಿಗೆ ನಿಯಂತ್ರಣಾಧಿಕಾರಿ ಚಂದ್ರಶೇಖರ್ ಅವರು ಸ್ವಾಗತಿಸಿದರು. ಸಿರಗುಪ್ಪ ಘಟಕದ ವ್ಯವಸ್ಥಾಪಕ ತಿರುಮಲೇಶ ವಂದಿಸಿದರು. 2.50ಕೋಟಿ ರೂ.ವೆಚ್ಚದಲ್ಲಿ ಸಿರುಗುಪ್ಪ ಪಟ್ಟಣದಲ್ಲಿ 4570 ಚದರ ಅಡಿಯಲ್ಲಿ ನಿರ್ಮಿಸಲಾಗಿರುವ ವಿಶಾಲ‌ ನೂತನ ಬಸ್ ನಿಲ್ದಾಣದಲ್ಲಿ ನೆಲಹಂತಸ್ತು,ಮೊದಲ ಹಂತಸ್ತು ನಿರ್ಮಿಸಲಾಗಿದೆ. ಈ ಬಸ್ ನಿಲ್ದಾಣದಲ್ಲಿ ವಿಸ್ತಾರವಾದ ಮಹಿಳಾ ನಿರೀಕ್ಷಣಾ ಕೊಠಡಿ, ವಿಸ್ತರವಾದ ಉಪಹಾರಗೃಹ,ಸಂಚಾರ ನಿಯಂತ್ರಣ ಕೊಠಡಿ, ಪ್ರಯಾಣಿಕರಿಗೆ ಅವಶ್ಯಕವಾದ ಚಿಕ್ಕ ಮಳಿಗೆಗಳು, ಬೇಕರಿ, ಪೇಪರ್ ಸ್ಟಾಲ್, ಔಷಧಿ, ಶೌಚಾಲಯಗಳ ವ್ಯವಸ್ಥೆ ಕಲ್ಪಿಸಲಾಗಿದೆ.

Leave a Comment

Your email address will not be published. Required fields are marked *

Translate »
Scroll to Top