ಮಹಾರಾಷ್ಟ್ರ ರಾಜ್ಯದ ಗುಡ್ಡಾಪುರದ ದಾನಮ್ಮ ದೇವಿ ದೇವಸ್ಥಾನದಲ್ಲಿ ಕರ್ನಾಟಕ ಭವನಕ್ಕೆ ಅಡಿಗಲ್ಲು ಕಾರ್ಯಕ್ರಮ

ಬೆಂಗಳೂರು, ಫೆಬ್ರವರಿ ,15: ಕರ್ನಾಟಕ ರಾಜ್ಯದ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕ ಭಾಗದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಮಹಾರಾಷ್ಟ್ರದ ಶ್ರೀ ದಾನಮ್ಮದೇವಿ ಗುಡ್ಡಾಪುರದಲ್ಲಿ ಕರ್ನಾಟಕ ಸರಕಾರದ ವತಿಯಿಂದ ಕರ್ನಾಟಕ ಭವನ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದ್ದು, (ಫೆಬ್ರವರಿ 16, 2022) ನಾಳೆ ಮೊದಲ ಹಂತದ ಕಾಮಗಾರಿಗೆ ಅಡಿಗಲ್ಲು ಕಾರ್ಯಕ್ರಮ ನಡೆಯಲಿದೆ.

ಗುಡ್ಡಾಪುರಕ್ಕೆ ಕರ್ನಾಟಕ ರಾಜ್ಯದಿಂದ ಅಗಮಿಸುವಂತಹ ಭಕ್ತಾದಿಗಳಿಗೆ ಸುಸಜ್ಜಿತ ಮೂಲಭೂತ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಈಗಾಗಲೇ ಶ್ರೀ ಕ್ಷೇತ್ರ ಗುಡ್ಡಾಪುರದಲ್ಲಿ ಶ್ರೀ ದೇವಾಲಯದ ಹೆಸರಿನಲ್ಲಿರುವ 2 ಏಕರೆ ಜಮೀನನ್ನು ಖರೀದಿಸಲಾಗಿದೆ. ದೇವಸ್ಥಾನದಿಂದ ಕೇವಲ 300 ಮೀಟರ್‌ ದೂರದಲ್ಲಿ ಜಿಲ್ಲಾ ರಸ್ತೆಗೆ ಹೊಂದಿಕೊಂಡಿರುವ ಈ ಜಮೀನಿಗೆ ಕಾಂಪೌಡನ್ನು ನಿರ್ಮಿಸಲಾಗಿತ್ತು. ಮಾನ್ಯ ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವರಾದ ಶ್ರೀಮತಿ ಶಶಿಕಲಾ ಅಣ್ಣಾಸಾಹೇಬ್‌ ಜೊಲ್ಲೆ ಅವರ ಮುತುರ್ಜಯಿಂದ ಗುಡ್ಡಾಪುರದಲ್ಲಿ ಕರ್ನಾಟಕ ಭವನ ನಿರ್ಮಾಣಕ್ಕೆ ಸನ್ಮಾನ್ಯ ಮುಖ್ಯಮಂತ್ರಿಗಳು ಮೊದಲ ಹಂತದಲ್ಲಿ 5 ಕೋಟಿ ರೂಪಾಯಿಗಳ ಅನುದಾನ ನೀಡಿದ್ದಾರೆ.

ಮೊದಲ ಹಂತದಲ್ಲಿ 5 ಕೋಟಿ ರೂಪಾಯಿಗಳ ವೆಚ್ಚದ ಕರ್ನಾಟಕ ಭವನ ನಿರ್ಮಾಣದ ಅಡಿಗಲ್ಲು ಸಮಾರಂಭ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರ ಘನ ಉಪಸ್ಥಿತಿಯಲ್ಲಿ ನಡೆಯಲಿದೆ. ಮಾನ್ಯ ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವರಾದ ಶ್ರೀಮತಿ ಶಶಿಕಲಾ ಅಣ್ಣಾಸಾಹೇಬ್‌ ಜೊಲ್ಲೆ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಜತ್‌ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ವಿಕ್ರಮಸಿಂಹ ಸಾವಂತ್‌ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ ದಾನಮ್ಮದೇವಿ ಟ್ರಸ್ಟ್‌ ಕಮಿಟಿಯ ಸದಸ್ಯರು, ಆ ಭಾಗದ ಸಂಸದರು, ಶಾಸಕರು ಹಾಗೂ ಇತರ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.

Leave a Comment

Your email address will not be published. Required fields are marked *

Translate »
Scroll to Top