ದಾವಣಗೆರೆ,ಜ,10 : ಮಾಜಿ ಬಿ.ಎಸ್. ಯಡಿಯೂರಪ್ಪ ಅವರು ಮೀಸಲಾತಿ ವಿಚಾರದಲ್ಲಿ ನಾಯಕ ಸಮುದಾಯಕ್ಕೆ ಕಿವಿಗೆ ಹೂವು ಇಟ್ಟು, ಮೂಗಿಗೆ ತುಪ್ಪ ಸವರಿದರು ಎಂದು ರಾಜನಹಳ್ಳಿ ವಾಲ್ಮೀಕಿ ಗುರು ಪೀಠದ ಪ್ರಸನ್ನಾನಂದ ಪುರಿ ಶ್ರೀ ಕಿಡಿಕಾರಿದ್ದಾರೆ. ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಮಠದಲ್ಲಿ ಮಾತನಾಡಿದ ಅವರು, ಈ ಬಾರಿ ನಡೆಯುವ ನಾಲ್ಕನೇ ವರ್ಷದ ವಾಲ್ಮೀಕಿ ಜಾತ್ರೆಯಲ್ಲಿ ಐತಿಹಾಸಿಕ ತೀರ್ಮಾನ ಕೈಗೊಳ್ಳುತ್ತೇವೆ. ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಡೆಡ್ ಲೈನ್ ಕೊಡುತ್ತೇವೆ. ಮುಂದಿನ ತಿಂಗಳು ಫೆ.9ರೊಳಗೆ ವಾಲ್ಮೀಕಿ ಜಾತ್ರೆಯಲ್ಲಿ ನಾಯಕ ಜನಾಂಗಕ್ಕೆ ಶೇ.7.5 ಮೀಸಲಾತಿ ಘೋಷಣೆ ಮಾಡಬೇಕು. ಇಲ್ಲದಿದ್ದರೆ, ಅಂದೇ ಐತಿಹಾಸಿಕ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ಈ ಜಾತ್ರಾ ಮಹೊತ್ಸವದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಹೆಚ್ ಡಿ ದೇವೇಗೌಡರು ಭಾಗಿಯಾಗಲಿದ್ದಾರೆ. ಮೀಸಲಾತಿ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. ಡಾ. ನಾಗಮೋಹನ್ ದಾಸ್ ವರದಿ ನೀಡಿದ ತಕ್ಷಣ , ಮೀಸಲಾತಿ ಘೋಷಿಸುವುದಾಗಿ ಅಂದಿನ ಸಿಎಂ ಬಿಎಸ್ವೈ ಮಾತು ಕೊಟ್ಟಿದ್ದರು. ಆದರೆ ಮಾತು ತಪ್ಪಿದ್ದಾರೆ ಎಂದರು.