ಬೆಂಗಳೂರು:ಯಾವ ಸಮುದಾಯಕ್ಕೂ ಸಮಸ್ಯೆ ಆಗದ ರೀತಿಯಲ್ಲಿ ಜಾತಿ ಗಣತಿ ವರದಿ ಜಾರಿಗೆ ತರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ತಿಳಿಸಿದ್ದಾರೆ.
ತಮ್ಮ ಆಡಳಿತಕ್ಕೆ ಒಂದು ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ ಬೆಂಗಳೂರು ಪ್ರೆಸ್‌ಕ್ಲಬ್ ಏರ್ಪಡಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಜಾತಿ ಗಣತಿ ವರದಿಯನ್ನು ಸಂಪುಟದ ಮುಂದಿಟ್ಟು ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದರು.
ಗಣತಿ ವರದಿ ಜಾರಿಗೊಳಿಸುವುದರಿಂದ ಯಾವ ಜಾತಿ, ಸಮುದಾಯಕ್ಕೂ ಅನ್ಯಾಯವಾಗುವುದಿಲ್ಲ, ಒಂದು ವೇಳೆ ಆದರೆ, ಅದನ್ನು ಸರಿಪಡಿಸುವುದಾಗಿಯೂ ತಿಳಿಸಿದರು. ಆರ್ಥಿಕವಾಗಿ, ಸಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರನ್ನು ಇಂತಹ ವರದಿಗಳಿಂದಲೇ ಗುರುತಿಸಿ ಆ ಸಮುದಾಯಗಳಿಗೆ ನ್ಯಾಯ ಒದಗಿಸುವುದು ಸರ್ಕಾರದ ಕರ್ತವ್ಯ.
ವರದಿಯೇ ಬೇಡ ಎಂದರೆ ಹಿಂದುಳಿದ ವರ್ಗಗಳಿಗೆ ನ್ಯಾಯ ದೊರೆಕಿಸಿಕೊಡುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ನಾನು ಹಿಂದೆ ಅಧಿಕಾರದಲ್ಲಿದ್ದಾಗ, ಹಿಂದುಳಿದ ವರ್ಗಗಳ ಆಯೋಗ ರಚಿಸಿದೆ, ಅವರು ವರದಿ ಕೊಡುವ ಸಂದರ್ಭದಲ್ಲಿ ಅಧಿಕಾರ ಕಳೆದುಕೊಂಡೆ, ನಂತರ ಬಂದ ಸರ್ಕಾರಗಳು ವರದಿಯನ್ನು ಜಾರಿಗೊಳಿಸಲಿಲ್ಲ.
ಈಗ ಮತ್ತೆ ನಾನೇ ಅಧಿಕಾರದಲ್ಲಿದ್ದೇನೆ, ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದವರಿಗೆ ನ್ಯಾಯ ದೊರೆಕಿಸುವುದಾಗಿ ಹೇಳುವುದರ ಮೂಲಕ ಪರೋಕ್ಷವಾಗಿ ವರದಿ ಜಾರಿಗೊಳಿಸುವ ಬಗ್ಗೆ ತಿಳಿಸಿದರು.