ಹೈದರಾಬಾದ್: ಕೌಶಲ್ಯಾಭಿವೃದ್ಧಿ ಯೋಜನೆ ಹಗರಣದಲ್ಲಿ ಜೈಲು ಸೇರಿದ್ದ ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರಿಗೆ ಇಂದು ಉಚ್ಛನ್ಯಾಯಾಲಯ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ವೈದ್ಯಕೀಯ ಚಿಕಿತ್ಸೆಗಾಗಿ ಜಾಮೀನು ಕೋರಿ ನಾಯ್ಡು ಅವರು ಸಲ್ಲಿಸಿದ್ದ ಅರ್ಜಿಯನ್ನು ಸೋಮವಾರ ವಿಚಾರಣೆ ನಡೆಸಿದ್ದ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿತ್ತು. ಇಂದು ಮತ್ತೆ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ತಲ್ಲಪ್ರಗಡ ಮಲ್ಲಿಕಾರ್ಜುನ ರಾವ್ ಅವರು ನಾಲ್ಕು ವಾರಗಳವರೆಗೆ ಮಧ್ಯಂತರ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಿದ್ದಾರೆ.
ಇದಕ್ಕೂ ಮೊದಲು ಚಂದ್ರಬಾಬು ನಾಯ್ಡು ಅವರಿಗೆ ಜಾಮೀನು ನೀಡಲು ಎಸಿಬಿ ನ್ಯಾಯಾಲಯ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ವೈದ್ಯಕೀಯ ಚಿಕಿತ್ಸೆಗಾಗಿ ಮಧ್ಯಂತರ ಜಾಮೀನು ನೀಡುವಂತೆ ಪೂರಕ ದಾಖಲೆ ಸಮೇತ ಅರ್ಜಿಯನ್ನು ಸಲ್ಲಿಸಿದ್ದರು.
ಚಂದ್ರಬಾಬು ಪರವಾಗಿ ಹಿರಿಯ ವಕೀಲ ಧಮ್ಮಲಪತಿ ಶ್ರೀನಿವಾಸ್ ಅವರು ವಾದ ಮಂಡಿಸಿದ್ದರು. ರಾಜ್ಯ ಸರ್ಕಾರದ ಪರವಾಗಿ ಎಎಜಿ ಪೊನ್ನವೋಲು ಸುಧಾಕರ ರೆಡ್ಡಿ ವಾದಿಸಿದರು.
ಜಾಮೀನು ಸಿಕ್ಕ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಾಯ್ಡು ಪರ ವಕೀಲರು, ಚಂದ್ರಬಾಬು ಅವರ ಆರೋಗ್ಯದ ದೃಷ್ಟಿಯಿಂದ ಜಾಮೀನು ನೀಡಲಾಗಿದೆ. ಕಳೆದ 50 ದಿನಗಳಿಂದ ಜೈಲಿನಲ್ಲಿರುವ ಬಾಬು ಅವರು ವೈದ್ಯಕೀಯ ತಪಾಸಣೆಗೆ ಒಳಗಾಗಲಿದ್ದಾರೆ ಎಂದು ತಿಳಿಸಿದರು.