ದಾವಣಗೆರೆ,ಜನವರಿ,20 : ಔಷಧಿಗಳ ಬೆಲೆ ನಿಯಂತ್ರಣವು ಕೇಂದ್ರ ಸರ್ಕಾರದ ಅಧೀನದಲ್ಲಿದ್ದರೂ ಬೆಲೆ ನಿಗದಿ ಮಾಡಲು ಖಾಸಗಿ ಸಂಸ್ಥೆಗಳಿಗೆ ಅಧಿಕಾರ ನೀಡಿರುವುದನ್ನು ವಿರೋಧಿಸಿ ಇಂದು ಔಷಧಿ ಮಾರಾಟಗಾರರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಅಖಿಲ ಭಾರತ ಔಷಧಿ ಮತ್ತು ಮಾರಾಟ ಪ್ರತಿನಿಧಿಗಳ ಸಂಘದ ನೇತೃತ್ವದಲ್ಲಿ ಜಿಲ್ಲೆಯಲ್ಲಿ ವಿವಿಧ ಔಷಧ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ 700 ಕ್ಕೂ ಹೆಚ್ಚು ಔಷಧಿ ಮಾರಾಟ ಪ್ರತಿನಿಧಿಗಳು ಇಂದು ತಮ್ಮ ಕೆಲಸಗಳನ್ನು ನಿಲ್ಲಿಸುವ ಮೂಲಕ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದರು. ಔಷಧ ನಿಯಂತ್ರಣ ಕಾಯಿದೆ, 2013 ರಲ್ಲಿ ಉತ್ಪಾದನಾ ವೆಚ್ಚದ ಮೇಲೆ ನಿಗದಿ ಮಾಡದೇ ಮಾರುಕಟ್ಟೆಯಲ್ಲಿನ ವಿವಿಧ ಕಂಪನಿಗಳ ಔಷಧಗಳ ಸರಾಸರಿ ಚಿಲ್ಲರೆ ದರದ ಮೇಲೆ ನಿಗದಿ ಮಾಡಲಾಗುತ್ತಿದೆ. ಇದರಿಂದ ಔಷಧಗಳ ಬೆಲೆ ಹೆಚ್ಚು ಮಾಡಲು ಕೇಂದ್ರ ಸರ್ಕಾರವು ಔಷಧ ಕಂಪನಿಗಳಿಗೆ ದಾರಿ ಮಾಡಿಕೊಟ್ಟಿದೆ ಆರೋಪಿಸಿದರು.

ಕೇಂದ್ರ ಸರ್ಕಾರವು ಔಷಧಗಳ ಬೆಲೆಗಳನ್ನು ವರ್ಷಕ್ಕೆ ಶೇ. 10 ರಂತೆ ಹೆಚ್ಚಿಸಲು ಶಾಸನ ಬದ್ಧ ಮಾಡಿ ಔಷಧ ಕಂಪನಿಯ ಮಾಲೀಕರಿಗೆ ಲಾಭ ಹೆಚ್ಚಿಸಿದೆ. ಅಲ್ಲದೇ ಕೇಂದ್ರದಲ್ಲಿರುವ ನೀತಿ ಆಯೋಗವು ಜಿಲ್ಲಾ ಸರ್ಕಾರಿ ಆಸ್ಪತ್ರೆಗಳನ್ನು ಖಾಸಗಿಯವರ ಕೈಗೆ ಕೊಡಲು ಪಬ್ಲಿಕ್ ಪ್ರೈವೇಟ್ ಪಾರ್ಟನರ್ ಶಿಪ್ ನಲ್ಲಿ ನಡೆಸುವಂತೆ ಆದೇಶಿಸಿದೆ. ಇದರಿಂದ ಜನ ಸಾಮಾನ್ಯರಿಗೆ ತೊಂದರೆ ಆಗುತ್ತದೆ. ಕಾರ್ಪೋರೇಟ್ ಕಂಪನಿಯ ಶ್ರೀಮಂತರನ್ನು ಉದ್ಧಾರ ಮಾಡಲು ಕಡಿಮೆ ಬೆಲೆಯಲ್ಲಿ ಜನೌಷಧಿ ಮಳಿಗೆಗಳಲ್ಲಿ ಔಷಧಿಗಳನ್ನು ಪಡೆಯ ಬಹುದು ಎಂದು ಪ್ರಚಾರ ಮಾಡಿದ ಕೇಂದ್ರ ಸರ್ಕಾರವು ಮೊಟ್ಟ ಮೊದಲಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಜನೌಷಧಿ ಮಳಿಗೆಗಳನ್ನು ಪ್ರಾರಂಭಿಸಿದೆ.ಇದು ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಕೊಡುತ್ತಿರುವ ಔಷಧಿಗಳನ್ನು ನಿಲ್ಲಿಸಲು ಮಾಡುತ್ತಿರುವ ಸರ್ಕಾರದ ಪ್ರಯತ್ನವಾಗಿದೆ ಎಂದರು.
ಮಾರಾಟ ಪ್ರತಿನಿಧಿಗಳಿಗೆ ಕನಿಷ್ಟ ವೇತನ 26000 ರೂ. ನಿಗದಿಗೂಳಿಸಬೇಕು. ಜಿ.ಪಿ.ಆರ್.ಎಸ್. ಮೂಲಕ ಮಾರಾಟ ಪ್ರತಿನಿಧಿಗಳ ಮೇಲೆ ಕಣ್ಣುಗಾವಲಿಡುವ ಸಂವಿಧಾನ ವಿರೋಧಿ ಚಟುವಟಿಕೆ ನಿಲ್ಲಿಸಲು ಕ್ರಮ ಕೈಗೊಳ್ಳಬೇಕು ಹಾಗೂ ಎಸ್.ಪಿ.ಇ. ಕಾಯಿದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಗಳನ್ನು ಸಂಘವು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು ಎಂದು ಸಂಘದ ಜಿಲ್ಲಾ ಕಾರ್ಯದರ್ಶಿ ಎ. ವೆಂಕಟೇಶ್ ತಿಳಿಸಿದ್ದಾರೆ.ಈ ಸಂರ್ಭದಲ್ಲಿ , ಆನಂದ್ ರಾಜ್, ರಾಜು, ಗಿರೀಶ್, ಭರಮಪ್ಪ, ಶ್ರೀಧರ್, ಮಂಜುನಾಥ್ ಮತ್ತಿತರರಿದ್ದರು.