ಲಾಭದಾಯಕ ಹುದ್ದೆ: ಸದಸ್ಯತ್ವ ಕಳೆದುಕೊಳ್ಳುವ ಭೀತಿಯಲ್ಲಿ ಐವರು ಶಾಸಕರು

ಬೆಂಗಳೂರು:  ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿರುವ ಹಿರಿಯ ಕಾಂಗ್ರೆಸ್ ಮುಖಂಡ, ಶಾಸಕ ಆರ್.ವಿ. ದೇಶಪಾಂಡೆ ಸೇರಿ ಐವರು ಶಾಸಕರು ತಮ್ಮ ಸದಸ್ಯತ್ವ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ವಿಧಾನಮಂಡಲದ ಸದಸ್ಯರಾಗಿದ್ದುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲಹೆಗಾರರಾಗಿರುವ ಐವರು ಶಾಸಕರ ಸದಸ್ಯತ್ವಕ್ಕೆ ಇದೀಗ ಕುತ್ತು ಬಂದಿದೆ.

 

ಮುಖ್ಯಮಂತ್ರಿಗಳ ಸಲಹೆಗಾರ (ನೀತಿ ಮತ್ತು ಯೋಜನಾ) ಆರ್.ವಿ. ದೇಶಪಾಂಡೆ, ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್, ಮುಖ್ಯಮಂತ್ರಿ ಅವರ ರಾಜಕೀಯ ಸಲಹೆಗಾರರಾಗಿರುವ ವಿಧಾನ ಪರಿಷತ್ ಸದಸ್ಯ ಕೆ.ಗೋವಿಂದರಾಜ್, ನಜೀರ್ ಅಹಮದ್, ಆರ್ಥಿಕ ಸಲಹೆಗಾರರಾಗಿರುವ ವಿಧಾನಸಭೆಯ ಬಸವರಾಜ ರಾಯರೆಡ್ಡಿ, ಅವರುಗಳು ಸದಸ್ಯತ್ವ ಕಳೆದುಕೊಳ್ಳುವ ಅಪಾಯದಲ್ಲಿದ್ದಾರೆ.

ಶಾಸಕ ಸ್ಥಾನದ ಜೊತೆಗೆ ಲಾಭದಾಯಕ ಹುದ್ದೆಯಲ್ಲಿ ಇದ್ದಾರೆ ಎಂಬ ಕಾರಣದಿಂದ ತಮ್ಮ ಸದಸ್ಯತ್ವ ಕಳೆದುಕೊಳ್ಳುವ ಸಾಧ್ಯತೆ ಇದೆ.

ಇದನ್ನು ಮನಗಂಡ ರಾಜ್ಯ ಸರ್ಕಾರ ಕಳೆದ ಬಜೆಟ್ ಅಧಿವೇಶನದಲ್ಲಿ ಇವರಿಗಾಗಿಯೇ ತಿದ್ದುಪಡಿ ಮಸೂದೆ ತಂದು ವಿಧಾನಮಂಡಲದಲ್ಲಿ ಅಂಗೀಕರಿಸಿ ರಾಜ್ಯಪಾಲರ ಅನುಮೋದನೆಗಾಗಿ ಕಳುಹಿಸಿತ್ತು.

ಸರ್ಕಾರ ರವಾನಿಸಿದ್ದ ಹಲವು ಮಸೂದೆಗಳಿಗೆ ವಿವರಣೆ ಕೇಳಿ, ಹಿಂದಕ್ಕೆ ಕಳುಹಿಸಲಾಗಿದ್ದು, ಅದರಲ್ಲಿ ಈ ತಿದ್ದುಪಡಿ ಮಸೂದೆಯೂ ಸೇರಿದೆ. ರಾಜ್ಯಪಾಲರು ವಿವರಣೆ ಕೇಳಿ ಹಿಂದೆ ಕಳುಹಿಸಿರುವ ಮಸೂದೆಗಳಲ್ಲಿ ಐವರು ಶಾಸಕರ ಲಾಭದಾಯಕ ಹುದ್ದೆಗಳಿಗೆ ಸಂಬಂಧಿಸಿದಂತೆ ನಿರ್ದಿಷ್ಟ ಉತ್ತರವನ್ನು ಬಯಸಿದೆ.

ರಾಜಭವನ ಮತ್ತು ಸರ್ಕಾರದ ನಡುವಿನ ಮುಸುಕಿನ ಗುದ್ದಾಟದ ನಡುವೆ ಈ ಮಸೂದೆಯನ್ನು ಹಿಂದಕ್ಕೆ ಕಳುಹಿಸಿರುವುದು ಮುಖ್ಯಮಂತ್ರಿ ಅವರಿಗೆ ಆಘಾತ ಉಂಟು ಮಾಡಿದೆ.

ಇದರ ಗಾಂಭೀರ್ಯತೆಯನ್ನು ಅರಿತ ಮುಖ್ಯಮಂತ್ರಿ ಅವರು, ರಾಜ್ಯಪಾಲರು ಹಿಂದಕ್ಕೆ ಕಳುಹಿಸಿರುವ ಮಸೂದೆಗಳ ಪೈಕಿ ಲಾಭದಾಯಕ ಹುದ್ದೆ ಪ್ರಶ್ನಿತ ತಿದ್ದುಪಡಿ ಮಸೂದೆಯನ್ನು ಇಂದು ನಡೆದ ಸಚಿವ ಸಂಪುಟ ಸಭೆಯ ಮುಂದಿಟ್ಟು ಸುದೀರ್ಘ ಚರ್ಚೆ ನಡೆಸಿದರು.

ಕರ್ನಾಟಕ ವಿಧಾನಮಂಡಲ (ಅನರ್ಹತಾ ನಿವಾರಣೆ) (ತಿದ್ದುಪಡಿ) ವಿಧೇಯಕ 2024ಕ್ಕೆ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ಕಡತವನ್ನು ಮತ್ತೆ ಕಳುಹಿಸಿಕೊಡಲು ಸಭೆ ತೀರ್ಮಾನಿಸಿತು.

ರಾಜಭವನ ಮೂರು ವಿಷಯಗಳಿಗೆ ಸಂಬಂಧಿಸಿದಂತೆ ಕೇಳಿರುವ ವಿವರಣೆಗಳಿಗೆ ಕಾನೂನು ತಜ್ಞರ ಸಲಹೆ ಪಡೆದು, ಟಿಪ್ಪಣಿ ಸಿದ್ಧಪಡಿಸಿ ಕಳುಹಿಸಲಾಗಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

 
Facebook
Twitter
LinkedIn
WhatsApp
Telegram
Email
Print

Leave a Comment

Your email address will not be published. Required fields are marked *

Translate »
Scroll to Top