ಬೆಂಗಳೂರು: ಐಪಿಎಸ್ ಅಧಿಕಾರಿಯೊಬ್ಬರ ದೂರಿನ ಮೇರೆಗೆ ನನ್ನ ವಿರುದ್ಧ ಪೊಲೀಸರು ದಾಖಲು ಮಾಡಿರುವ ಎಫ್‌ಐಆರ್ ಹಾಸ್ಯಾಸ್ಪದ, ದುರುದ್ದೇಶಪೂರಿತ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಉಪಚುನಾವಣೆಯ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ನಮ್ಮ ವಿರುದ್ಧ ದ್ವೇಷ ಸಾಧನೆ ಮಾಡುತ್ತಿದೆ, ಇದಕ್ಕೆ ನ್ಯಾಯಾಲಯದ ಮೂಲಕವೇ ಉತ್ತರ ಕೊಡುತ್ತೇನೆ ಎಂದರು.
ಎಫ್‌ಐಆರ್ ಪ್ರತಿಯಲ್ಲಿರುವ ದೂರಿನ ಸಾರಾಂಶ ಓದಿದ್ದು, ದೂರು ಸಂಪೂರ್ಣ ಹಾಸ್ಯಾಸ್ಪದ ಹಾಗೂ ದುರದ್ದೇಶಪೂರಿತವಾಗಿದೆ, ದೂರುದಾರರೇ ಹೇಳಿಕೊಂಡಿರುವAತೆ, ಕುಮಾರಸ್ವಾಮಿ ಅವರು ಮಾಧ್ಯಮಗೋಷ್ಠಿ ಮಾಡಿ ನನ್ನ ವಿರುದ್ಧ ಆರೋಪ ಮಾಡಿದ್ದು ಕ್ರಮ ಕೈಗೊಳ್ಳಿ ಎಂದಿದ್ದಾರೆ, ನಾನು ಅವರ ಬಗ್ಗೆ ತಪ್ಪು ಮಾಹಿತಿ ನೀಡಿದ್ದೇನೆ ಎಂಬುದಾಗಿ ಆರೋಪಿಸಿದ್ದಾರೆ, ಬೇಕಿದ್ದರೆ, ನನ್ನ ಮಾಧ್ಯಮಗೋಷ್ಠಿಯ ವಿಡಿಯೊ ನೋಡಿಕೊಳ್ಳಲಿ ಎಂದರು.
ನಾನು ಪ್ರೆಸ್ ಮೀಟ್ ಮಾಡಿದ್ದಕ್ಕೆ ಎಫ್‌ಐಆರ್ ಹಾಕಿಸಿದ್ದಾರೆ, ಚನ್ನಪಟ್ಟಣ ಕ್ಷೇತ್ರದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧವೂ ಎಫ್‌ಐಆರ್ ಹಾಕಿಸಿದ್ದಾರೆ, ಮುಖ್ಯಕಾರ್ಯದರ್ಶಿಗೆ ದೂರು ಕೊಟ್ಟಿದ್ದಕ್ಕೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ವಿರುದ್ಧವೂ ಎಫ್‌ಐಆರ್ ದಾಖಲಿಸಿದ್ದಾರೆ.
ಅಂದರೆ, ಯಾರೂ, ಯಾರ ವಿರುದ್ಧವೂ ಮಾತನಾಡಬಾರದು, ದೂರು ನೀಡಬಾರದು ಎಂಬ ಕಾನೂನು ಇದೆಯೇ, ನಮ್ಮ ಬಾಯಿ ಮುಚ್ಚಿಸಲು ಇವರಿಂದ ಸಾಧ್ಯವಿಲ್ಲ.
ಇದು ಷಡ್ಯಂತ್ರ ಹಾಗೂ ಕುತಂತ್ರದ ಭಾಗ, ಚನ್ನಪಟ್ಟಣ ಉಪಚುನಾವಣೆಯಲ್ಲಿ ಮೋಸ, ಕುತಂತ್ರ ನಡೆಯಲ್ಲ ಎಂದು ಗೊತ್ತಾಗುತ್ತಿದ್ದಂತೆ, ಹೊಸ ಕುತಂತ್ರಕ್ಕೆ ಮುಂದಾಗಿದ್ದಾರೆ, ನಮಗೆ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ಸಂವಿಧಾನ ಮೇಲೆ ಗೌರವ ಇದೆ, ನನ್ನ ಚನ್ನಪಟ್ಟಣ ಜನರ ಮೇಲೆ ವಿಶ್ವಾಸ ಇದೆ, ಇಂತಹ ನೂರು ಎಫ್‌ಐಆರ್‌ಗಳು ದಾಖಲಾದರೂ ನಾವು ಧೃತಿಗೆಡಲ್ಲ ಎಂದರು.