ರಕ್ತ ಪರೀಕ್ಷೆ, ರೋಗಿಗಳಿಗೆ ಮಾತ್ರೆಗಳ ವಿತರಣೆ ಸ್ಥಗಿತ
ಪ್ರೀಡಂ ಪಾರ್ಕ ನಲ್ಲಿ ಬೃಹತ್ ಪ್ರತಿಭಟನೆ – ನೌಕರರ ಎಚ್ಚರಿಕೆ
ಬೆಂಗಳೂರು: ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿಯಲ್ಲಿ ಕಳೆದ 22 ವರ್ಷಗಳಿಂದ 1800 ಕ್ಕೂ ಅಧಿಕ ಸಿಬ್ಬಂದಿ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಬೇಡಿಕೆಗಳನ್ನು ಈಡೇರಿಸುವಲ್ಲಿ ವಿಫಲವಾಗಿರುವ ಹಿನ್ನೆಲೆಯಲ್ಲಿ ಎಚ್.ಐ.ವಿ. ಸೋಂಕಿತರಿಗೆ ಸೇವೆ ಸ್ಥಗಿತಗೊಳಿಸಿ ಫೆ. 19ರಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲು ಗುತ್ತಿಗೆ ಸಿಬ್ಬಂದಿ ವರ್ಗ ತೀರ್ಮಾನಿಸಿದೆ.
ಇದರಿಂದ ಎಚ್.ಐ.ವಿ ಸೋಂಕಿತರು ತೀವ್ರ ಸಂಕಷ್ಟಕ್ಕೆ ಗುರಿಯಾಗುವ ಸಾಧ್ಯತೆಯಿದೆ.
ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿಯ ಎಲ್ಲಾ ಕೇಂದ್ರಗಳಲ್ಲಿ ಹೆಚ್‍ಐವಿ ರಕ್ತ ಪರೀಕ್ಷೆ, ರೋಗಿಗಳಿಗೆ ಮಾತ್ರೆಗಳ ವಿತರಣೆ ಸೇರಿ ಇತರೆ ಎಲ್ಲಾ ಸೇವೆಗಳನ್ನು ಸ್ಥಗಿತಗೊಳಿಸಲು ಸಿಬ್ಬಂದಿ ನಿರ್ಧರಿಸಿದ್ದು, ಫೆ, 19 ರಂದು ಪ್ರೀಡಂ ಪಾರ್ಕ್‍ನಲ್ಲಿ ಅನಿರ್ದಿಷ್ಟಾವಧಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘದ ಗೌರವಾಧ್ಯಕ್ಷರಾದ ಕೆ. ಅಕ್ಷತಾ ತಿಳಿಸಿದ್ದಾರೆ
ಏಡ್ಸ್ ಪ್ರಿವೆನ್ಷನ್ ಸೊಸೈಟಿ ಗುತ್ತಿಗೆ ನೌಕರರು ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆ, ಜಿಲ್ಲಾ ಡ್ಯಾಪ್ಕೋ ಕಚೇರಿ, ಮೆಡಿಕಲ್ ಕಾಲೇಜುಗಳು, ತಾಲ್ಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳ ಬೆಂಗಳೂರು ಕೇಂದ್ರ ಕಚೇರಿಯಲ್ಲಿ ಹೆಚ್‍ಐವಿ ರಕ್ತ ಪರೀಕ್ಷೆ, ರೋಗಿಗಳಿಗೆ ಮಾತ್ರೆಗಳ ವಿತರಣೆ ಸ್ಥಗಿತಗೊಳಿಸುತ್ತೇವೆ ಎಂದರು.
ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿಯ ಐಸಿಟಿಸಿ, ಎಆರ್ ಟಿ ಹಾಗೂ ಇತರೆ ಗುತ್ತಿಗೆ ನೌಕರರನ್ನು ಆರೋಗ್ಯ ಇಲಾಖೆಯ ಸಮಾನಾಂತರ ಹುದ್ದೆಗಳಿಗೆ ವಿಲೀನಗೊಳಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದು, ಸರ್ಕಾರದಿಂದ ಸೂಕ್ತ ಪ್ರೋತ್ಸಾಹ ಧನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸರ್ಕಾರಕ್ಕೆ ಹಲವು ಭಾರಿ ಮನವಿ ಸಲ್ಲಿಸಲಾಗಿದೆ ಎಂದರು.