ಸಂಘದ ಅಭಿವೃದ್ಧಿಯೇ ರೈತರ ಅಭಿವೃದ್ಧಿ : ಶ್ರೀನಿವಾಸ್

ದೇವನಹಳ್ಳಿ: ಸಂಘದ ವಾರ್ಷಿಕ ಸಭೆಯ ಉದ್ದೇಶ ಇಡೀ ವರ್ಷ ಸಂಘದ ಚಟುವಟಿಕೆ, ಹಾಲು ಸರಬರಾಜು ಮಾಡಿದ ಹಾಗೂ ಇತರೆ ಖರ್ಚು ವೆಚ್ಚಗಳ ಬಗ್ಗೆ ತಿಳಿದುಕೊಳ್ಳುವುದು ಎಂದು ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ಹಾಗೂ ಮಾಜಿ ಉಪಾಧ್ಯಕ್ಷ ಬಿ.ಶ್ರೀನಿವಾಸ್ ತಿಳಿಸಿದರು. ದೇವನಹಳ್ಳಿ ತಾಲ್ಲೂಕು ವಿಜಯಪುರ ಸಮೀಪದ ಧರ್ಮಪುರ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ 2020-21 ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿ, ನಾನು ಒಬ್ಬ ರೈತನಾಗಿದ್ದು, ನಮ್ಮೂರ ಸಂಘಕ್ಕೆ ಪ್ರತಿದಿನ 100 ಲೀ ಹಾಲನ್ನು ಸರಬರಾಜು ಮಾಡುತ್ತೇನೆ. ರೈತರು ಗುಣಮಟ್ಟದ ಹಾಲನ್ನು ಪೂರೈಸಬೇಕು. ಹೈನುಗಾರಿಕೆಗೆ ಹೆಸರು ಮಾಡಿದ ಗ್ರಾಮದಲ್ಲಿ ಧರ್ಮಪುರ ತಾಲ್ಲೂಕು ಮಟ್ಟದಲ್ಲಿ ಗುರುತಿಸಿಕೊಂಡಿದೆ. ಗ್ರಾಮದ ಬಹುತೇಕ ಜನ ಉತ್ತಮ‌ ರಾಸುಗಳನ್ನು ಹೊಂದಿದ್ದು, ಮೊದಲು ಮನೆಮಟ್ಟಿಗೆ ಮಾತ್ರ ಇದ್ದ ಹೈನುಗಾರಿಕೆ ನಂತರ ಕಸುಬಾಗಿ ಬೆಳೆಯಿತು. ಮೊದಲು ಬೆಂಗಳೂರು, ಕೋಲಾರ, ಮಂಡ್ಯ, ತುಮಕೂರು ಜಿಲ್ಲೆಗಳು‌ ಒಂದೇ ಒಕ್ಕೂಟ ಹೊಂದಿದ್ದು ಪ್ರತಿದಿನ ಒಟ್ಟು 5 ಲಕ್ಷ ಲೀಟರ್ ಸಂಗ್ರಹವಾಗುತ್ತಿತ್ತು. ಇಂದು ಪ್ರತ್ಯೇಕ ಒಕ್ಕೂಟಗಳಾದರೂ ಹಾಲಿನ ಸಂಗ್ರಹ ಪ್ರತಿದಿನಕ್ಕೆ
19 ಲಕ್ಷ ಲೀಟರ್ ಮೀರಿದೆ. ಹಾಲನ್ನು ಮಾರಾಟ ಮಾಡಲು ಕೋವಿಡ್ ಸಂದರ್ಭದಲ್ಲಿ ಬಹಳ ಕಷ್ಟವಾಗಿದ್ದು, ಇತ್ತೀಚೆಗೆ ಹಾಲಿನ ಮಾರಾಟ ಸುಧಾರಣೆ ಗೊಂಡಿದೆ ಎಂದು ತಿಳಿಸಿದರು.

ಧರ್ಮಪುರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೆ. ಆನಂದಮೂರ್ತಿ ಮಾತನಾಡಿ, ಹಾಲಿನ ಗುಣಮಟ್ಟ ಕಡಿಮೆಯಾದರೆ ಲಾಭಾಂಶವೂ ಕಡಿಮೆಯಾಗುತ್ತದೆ. ಈ ವಿಚಾರವನ್ನು ರೈತರು ಗಮನದಲ್ಲಿಟ್ಟುಕೊಂಡು ರಾಸುಗಳ ಪೋಷಣೆ ಮಾಡಬೇಕು. ಉತ್ತಮ ಆಹಾರ ನೀಡಬೇಕು. ಪಶುವೈದ್ಯರು ಸೂಚಿಸಿದ ರೀತಿಯಲ್ಲಿ ರಾಸುಗಳಿಗೆ ಪೋಷಕಾಂಶ ನೀಡಬೇಕು. ಸಮಯಕ್ಕೆ ಸರಿಯಾಗಿ ನೀರು, ಮೇವು ನೀಡಬೇಕು. ಕಳೆದ ಬಾರಿಗಿಂತ ಈ ವರ್ಷ ಲಾಭಾಂಶ ಕಡಿಮೆ ಬಂದಿದ್ದು, ಗುಣಮಟ್ಟದ ಹೆಚ್ಚಳವಾಗಬೇಕು. ರಾಸುಗಳ ಅಭಿವೃದ್ಧಿ ಜೊತೆಗೆ ಸಂಘದ ಅಭಿವೃದ್ಧಿ ಬಗ್ಗೆಯೂ ಚಿಂತನೆ ಮಾಡಬೇಕು ಎಂದು ತಿಳಿಸಿದರು

ಧರ್ಮಪುರ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಪ್ರತಿ ದಿನ ಹೆಚ್ಚು ಹಾಲು ಸರಬರಾಜು ಮಾಡಿದವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಧರ್ಮಪುರ ಹಾಲು ಉತ್ಪಾದಕರ ಸಹಕಾರ ಸಂಘದ ಉಪಾಧ್ಯಕ್ಷ ಮುನಿರಾಜು, ಬೆಂ.ಹಾಲು ಒಕ್ಕೂಟದ ಸಹಾಯಕ ವ್ಯವಸ್ಥಾಪಕ ಎಸ್.ರಾಜೇಶ್, ಬೆಂ.ಹಾಲು ಒಕ್ಕೂಟ ಮಾರ್ಗ ವಿಸ್ತರಣಾಧಿಕಾರಿ ಅನಿಲ್ ಕುಮಾರ್, ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ಬಸವರಾಜು, ಧರ್ಮಪುರ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತಿಯ ನಿರ್ದೇಶಕರಾದ ದೇವರಾಜು, ಸುಬ್ರಮಣಿ, ಚಂದ್ರಪ್ಪ, ನಾರಾಯಣಸ್ವಾಮಿ, ವಿಜಯಮ್ಮ, ನಾರಾಯಣಮ್ಮ, ನಾಗರಾಜಪ್ಪ ಹಾಗೂ ಮಾಜಿ ಅಧ್ಯಕ್ಷರು, ನಿರ್ದೇಶಕರುಗಳು ಇದ್ದರು.

Leave a Comment

Your email address will not be published. Required fields are marked *

Translate »
Scroll to Top