ಬಳ್ಳಾರಿ: ಸಿರುಗುಪ್ಪ ಹಾಗೂ ಬಳ್ಳಾರಿ ತಾಲ್ಲೂಕಿನಲ್ಲಿ ರೈತರಿಂದ ಸರ್ಕಾರ ಜೋಳ ಖರೀದಿ ಮಾಡಿದ್ದು, ಆ ಹಣ ಇಂದಿಗೂ ಪಾವತಿ ಮಾಡಿರುವುದಿಲ್ಲ. ಈ ಕೂಡಲೇ ಸರ್ಕಾರದೊಂದಿಗೆ ಚರ್ಚೆ ಮಾಡಿ ನಮಗೆ ಹಣ ಪಾವತಿ ಮಾಡಿಸುವಂತೆ ಕೋರಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬಳ್ಳಾರಿ ಜಿಲ್ಲಾ ಘಟಕದಿಂದ ಸಚಿವ ಬಿ.ನಾಗೇಂದ್ರ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ 2023ರ ಮಾರ್ಚ್ ತಿಂಗಳಲ್ಲಿ ಸರ್ಕಾರವು ರೈತರಿಂದ ಜೋಳ ಖರೀದಿ ಮಾಡಿದ್ದು, ಮೂರು ತಿಂಗಳು ಕಳೆಯುತ್ತಾ ಬಂದರೂ ಇಲ್ಲಿಯವರೆಗೆ ರೈತರಿಗೆ ಹಣ ಪಾವತಿಯಾಗಿಲ್ಲ. ಒಂದು ಕ್ವಿಂಟಾಲ್‌ಗೆ 2970 ರಂತೆ ಸುಮಾರು 300ಕ್ಕೂ ಹೆಚ್ಚು ರೈತರಿಂದ ಜೋಳ ಖರೀದಿ ಮಾಡಿದ್ದಾರೆ. ಅದಕ್ಕೆ ಹಣ ಬಂದಿಲ್ಲ. ಅಧಿಕಾರಿಗಳಿಗೆ ಕೇಳಿದರೆ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಈಗಾ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ, ಒಂದು ವಾರದೊಳಗೆ ಹಣ ಪಾವತಿಸಬೇಕು ಇಲ್ಲವಾದಲ್ಲಿ ಸುತ್ತಮುತ್ತಲಿನ ಹಳ್ಳಿಗಳ ರೈತರು ಸೇರಿ ಉಗ್ರ ಹೋರಾಟ ಮಾಡಲಾಗುವುದು ಎಂದರು.
ಇನ್ನೋರ್ವ ರೈತ ಮುಖಂಡ ಭರಮನಾಯಕ ಮಾತನಾಡಿ, ಈಗ ಮಳೆಗಾಲ ಪ್ರಾರಂಭವಾಗುತ್ತಿದೆ. ಮತ್ತೆ ನಾಟಿ ಮಾಡಬೇಕು. ಗೊಬ್ಬರ ಹಾಕಬೇಕಿದೆ. ಇವೆಲ್ಲವೂ ಖರೀದಿಸಲು ಹಣ ಬೇಕು. ಆದರೆ ಸರ್ಕಾರ ನಮಗೆ ಕೊಡಬೇಕಾದ ಹಣ ಇಲ್ಲಿಯವರೆಗೆ ನೀಡಿಲ್ಲ. ಒಬ್ಬೊಬ್ಬರಿಗೆ ಒಂದು ಲಕ್ಷದಿಂದ ಹಿಡಿದು ಹನ್ನೆರಡು ಲಕ್ಷಗಳವರೆಗೆ ಹಣ ಬರಬೇಕಿದೆ. ನಾವು ಪ್ರತೀ ಬಾರಿ ಕಚೇರಿಗೆ ಅಲೆಯುವ ಪರಿಸ್ಥಿತಿ ಬಂದಿದ್ದು, ನಮಗೆ ಶೀಘ್ರದಲ್ಲೇ ಹಣ ಪಾವತಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಎಂ.ಶ್ರೀನಿವಾಸ್, ನಾಗರಾಜ, ಹೆಚ್.ಕೆ.ಶೇಷಾದ್ರಿ, ಶಿವಶಂಕರ, ಡಿ.ಮಲ್ಲಾರೆಡ್ಡಿ, ಟಿ.ಎಂ.ರಾಮಲಿಂಗಯ್ಯ ಸೇರಿದಂತೆ ಸಿರುಗುಪ್ಪ, ತೆಕ್ಕಲಕೋಟೆ, ಕೂರಿಗನೂರು, ತಾಳೂರು, ಮಾಟಸೂಗೂರು, ಕರೂರು, ಊಳೂರು, ಗೋಸುಬಾಳು, ಬಲಕುಂದಿ, ಉಪ್ಪಾರು ಹೊಸಳ್ಳಿ, ಹಳೇಕೋಟೆ, ಹಚ್ಚೊಳ್ಳಿ ಇನ್ನಿತರ ಹಳ್ಳಿಗಳ ರೈತರು ಉಪಸ್ಥಿತರಿದ್ದರು.