ಹುಳಿಯಾರು: ರೈತರಿಂದ ರಾಗಿ ಖರೀದಿಸಿದ ನಂತರ ರೈತರಿಗೆ ಖಾಲಿ ಚೀಲ ಕೊಡಬೇಕಿದೆ. ಆದರೆ ಕಳೆದ ಹತ್ತದಿನೈದು ದಿನಗಳಿಂದ ಸಾವಿರಾರು ರೈತರಿಂದ ರಾಗಿ ಖರೀದಿಸಿದ್ದರೂ ಸಹ ಒಬ್ಬ ರೈತನಿಗೂ ಖಾಲಿ ಚೀಲ ನೀಡಿಲ್ಲ ಅಥವಾ ಚೀಲದ ಬಾಬ್ತು ಹಣವನ್ನೂ ರೈತರಿಗೆ ನೀಡಿಲ್ಲ ಎಂದು ರೈತರು ಆರೋಪಿಸಿದ್ದಾರೆ.
ಹುಳಿಯಾರು ರಾಗಿ ಖರೀದಿ ಕೇಂದ್ರದ ಬಳಿ ಶುಕ್ರವಾರ ಖರೀದಿ ಅಧಿಕಾರಿಗಳಿಗೆ ಈ ಬಗ್ಗೆ ಪ್ರಶ್ನಿಸಿದ ರೈತರು ಖರೀದಿ ಕೇಂದ್ರದಲ್ಲಿ ಖಾಲಿ ಚೀಲ ಇದ್ದರೂ ರಾಗಿ ಬಿಡುವ ರೈತರಿಗೆ ಕೊಡದೆ ಕಳುಹಿಸುತ್ತಿರುವ ಉದ್ದೇಶವಾದರೂ ಏನು ಎಂದು ಪ್ರಶ್ನಿಸಿದರಲ್ಲದೆ ಖಾಲಿ ಚೀಲ ಕೊಡದೆ ಲಕ್ಷಾಂತರ ರೂ. ವಂಚಿಸುವ ಉದ್ದೇಶ ಇದರ ಹಿಂದಿದೆ ಎಂದು ಗಂಭೀರ ಆರೋಪ ಮಾಡಿದರು.

ಇದಕ್ಕೆ ಪ್ರತಿಯಾಗಿ ಖರೀದಿ ಅಧಿಕಾರಿ ಶಿವರಾಜ್ ಅವರು ಮಾತನಾಡಿ ಕೇವಲ 3 ಸಾವಿರ ಖಾಲಿ ಚೀಲಗಳು ಮಾತ್ರ ಸರಬರಾಜು ಆಗಿದೆ. ಈ ಚೀಲಗಳನ್ನು ಕೇವಲ ನೂರೈವತ್ತರಿಂದ ಇನ್ನೂರು ರೈತರಿಗೆ ಮಾತ್ರ ಕೊಡಬಹುದಾಗಿದೆ. 3 ಸಾವಿರ ರೈತರು ನೊಂದಣಿ ಮಾಡಿಸಿದ್ದು ಉಳಿದ ರೈತರೂ ಸಹ ಖಾಲಿ ಚೀಲ ಕೇಳಿದರೆ ಕೊಡುವುದು ಕಷ್ಟವಾಗುತ್ತದೆ. ಹಾಗಾಗಿ ಸಮರ್ಪಕವಾಗಿ ಚೀಲಗಳು ಬಂದ ನಂತರ ವಿತರಿಸುವ ಸದುದ್ದೇಶದಿಂದ ವಿತರಿಸಿಲ್ಲ ಎಂದು ಸಮಜಾಯಿಸಿ ನೀಡಿದರು.
ರಾಗಿ ಖರೀದಿ ಪ್ರಕ್ರಿಯೆ ಮುಗಿದ ತರುವಾಯ ಯಾವ ಅಧಿಕಾರಿಯೂ ಕೇಂದ್ರದ ಬಳಿ ಇರುವುದಿಲ್ಲ. ಎಪಿಎಂಸಿ ಅಧಿಕಾರಿಗಳನ್ನು ಕೇಳಿದರೆ ನಮಗೂ ಖರೀದಿ ಕೇಂದ್ರಕ್ಕೂ ಸಂಬಂಧ ಇಲ್ಲ ಎನ್ನುತ್ತಾರೆ. ಅಲ್ಲದೆ ರೈತರು ಉತ್ತಮ ಗುಣಮಟ್ಟದ ಚೀಲದಲ್ಲಿ ರಾಗಿ ತರುತ್ತಿದ್ದು ಮುಂದಿನ ದಿನಗಳಲ್ಲಿ ಹರಿದಿರುವ, ತೆಳ್ಳನೆಯ ಕಳಪೆ ಗುಣಮಟ್ಟದ ಚೀಲಗಳನ್ನು ವಿತರಿಸುವ ಅನುಮಾನವಿದೆ. ಹಾಗಾಗಿ ಕಳೆದ ವರ್ಷದಂತೆ ಈ ವರ್ಷವೂ ಸಹ ರಾಗಿ ನೀಡುವ ರೈತನಿಗೆ ಚೀಲದ ಬದಲಾಗಿ ಗ್ರೈನ್ ವೋಚರ್ ಕೊಟ್ಟು ರಾಗಿ ಹಣ ಬ್ಯಾಂಕ್ ಖಾತೆಗೆ ಹಾಕುವಂತೆ ಖಾಲಿ ಚೀಲದ ಹಣವನ್ನೂ ಸಹ ಬ್ಯಾಂಕ್ ಖಾತೆಗೆ ಹಾಕಿ ಎಂದು ರೈತರು ಕೇಳಿಕೊಂಡರು.
ಚೀಲಕ್ಕೆ ದುಡ್ಡು ಅಥವಾ ಖಾಲಿ ಚೀಲ ಕೊಡದಿದ್ದರೆ ಮುಂದಿನ ದಿನಗಳಲ್ಲಿ ರೈತರು ರಾಗಿ ತಂದು ತೂಕ ಹಾಕಿಸಿ ತಮ್ಮ ಗೋದಾಮಿನಲ್ಲಿ ಸುರಿದು ತಮ್ಮತಮ್ಮ ಖಾಲಿ ಚೀಲ ತೆಗೆದುಕೊಂಡು ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದರು. ಅಲ್ಲದೆ ಮಾರುಕಟ್ಟೆಯಲ್ಲಿ ಖಾಲಿ ಚೀಲದ ಕೃತರ ಅಭಾವ ಸೃಷ್ಠಿಯಾಗಿ ಮುವತ್ತೈದರಿಂದ ನಲ್ವತ್ತು ರೂಪಾಯಿ ಚೀಲದ ಬೆಲೆಯಾಗಿದೆ. ನಿಮ್ಮಲ್ಲಿ ಇರುವ 3 ಸಾವಿರ ಚೀಲವನ್ನು ರೈತರಿಗೆ ವಿತರಿಸಿ ಉಳಿದ ರೈತರಿಗೆ ಗ್ರೈನ್ ವೋಚರ್ ನೀಡಿ ಎಂದು ರೈತರು ಮನವಿ ಮಾಡಿದರಾದರೂ ಈ ಬಗ್ಗೆ ಮನವಿ ಕೊಟ್ಟರೆ ಮೇಲಧಿಕಾರಿಗಳಿಗೆ ಕಳುಹಿಸಿ ಅವರ ನಿರ್ದೇಶನದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಅಧಿಕಾರಿ ತಿಳಿಸಿದರು.
ಖಾಲಿ ಚೀಲ ಇಲ್ಲದೆ ರಾಗಿ ಖರೀದಿ ಆರಂಭಿಸಿದ್ದೇ ನಿಮ್ಮ ಮೊದಲ ತಪ್ಪು. ಅದರ ಜೊತೆಗೆ ಖರೀದಿ ಪ್ರಕ್ರಿಯೆ ಮುಗಿಯುತ್ತಾ ಬಂದರೂ ಖಾಲಿ ಚೀಲಗಳು ಬಂದಿಲ್ಲ. ಹಾಗಾಗಿ ರೈತರು ಮನವಿ ಕೊಡುವ ಅಗತ್ಯವಿಲ್ಲ. ನಿಮ್ಮ ಮೇಲಧಿಕಾರಿಗಳಿಗೆ ಇಲ್ಲಿನ ಸಮಸ್ಯೆಯನ್ನು ತಿಳಿಸಿ ರೈತರ ಬೇಡಿಕೆಗಳನ್ನು ಮನವರಿಕೆ ಮಾಡಿಕೊಟ್ಟು ತಕ್ಷಣ ಗುಣಮಟ್ಟದ ಖಾಲಿ ಚೀಲಗಳನ್ನು ತರಿಸಿ ರೈತರಿಗೆ ವಿತರಿಸಿ. ಇಲ್ಲವಾದಲ್ಲಿ ಗ್ರೈನ್ ವೋಚರ್ ನೀಡಿ ಗುತ್ತಿಗೆದಾರನಿಗೆ ನೀಡುವ ಹಣವನ್ನೇ ರೈತರ ಖಾತೆಗಳಿಗೆ ಹಾಕಿ ಎಂದರು. ಇದಕ್ಕೆ ಖರೀಧಿ ಅಧಿಕಾರಿ ಶಿವರಾಜ್ ಮೇಲಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಪರಿಹರಿಸುವ ಭರವಸೆ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು.
25ಊUಐIಙಂಖ1 : ಹುಳಿಯಾರು ರಾಗಿ ಖರೀದಿ ಕೇಂದ್ರದ ಬಳಿ ಖಾಲಿ ಚೀಲ ಕೊಡುವಂತೆ ರೈತರು ಖರೀಧಿ ಅಧಿಕಾರಿಗಳನ್ನು ಒತ್ತಾಯಿಸಿದರು.